ಮಡಿಕೇರಿ, ಸೆ. 10: ಅಂಗಡಿಯಲ್ಲಿ ದಾಸ್ತಾನು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆಯನ್ನು ಕಳವು ಮಾಡಿದ ಈರ್ವರು ಅಂತರ್‍ರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಭಾಗಮಂಡಲ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಕೆ ಗ್ರಾಮದ ಎ.ಎಸ್. ರಫೀಕ್ ಎಂಬವರಿಗೆ ಸೇರಿದ ಅಂಗಡಿ ಕಟ್ಟಡದ ಕೋಣೆಯಲ್ಲಿ ಸಂಗ್ರಹಿಸಿಡಲಾಗಿದ್ದ 40 ಚೀಲ ಅಡಿಕೆ ಹಾಗೂ 4 ಚೀಲ ಕರಿಮೆಣಸು ಕಳೆದ ತಾ. 30.8.2019 ರಂದು ರಾತ್ರಿ ಕಳವಾಗಿತ್ತು. ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು. ಪೊಲೀಸ್ ಅಧೀಕ್ಷಕಿ ಸುಮನ್ ಡಿ.ಪಿ. ಅವರ ನಿರ್ದೇಶನದಂತೆ ಕಳವು ಆರೋಪಿಗಳನ್ನು ಪತ್ತೆ ಹಚ್ಚಲು 3 ತಂಡಗಳನ್ನು ರಚಿಸಲಾಗಿತ್ತು.ತನಿಖಾ ತಂಡಗಳು ತಾಂತ್ರಿಕ ವಿಧಾನಗಳನ್ನು ಬಳಸಿ ಕೇರಳದ ಕಾಸರಗೋಡುವಿನ ಪಳ್ಳಿಕೆರೆ ಎಂಬಲ್ಲಿ ಮೊಹಮ್ಮದ್ ಸಲಾಂ ಎಂಬಾತನನ್ನು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಕಾಸರಗೋಡುವಿನ ರಾಜಪುರಂ ನಿವಾಸಿ ಕೆ. ರಮೇಶ್ ಎಂಬಾತನನ್ನು ಸುಳ್ಯದ ಪೈಚಾರು ಎಂಬಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ (ಮೊದಲ ಪುಟದಿಂದ) ಕಳವಾದ ವಸ್ತುಗಳು, ರೂ. 10 ಸಾವಿರ ನಗದು ಹಾಗೂ ಒಂದು ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ. ಪಿ. ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪ್ರಬಾರ ಪೊಲೀಸ್ ಉಪಾಧೀಕ್ಷಕ ಕೆ.ಪಿ. ಮುರಳೀಧರ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ಪ್ರಬಾರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಉಪ ನಿರೀಕ್ಷಕ ವಿ. ಚೇತನ್, ಸಹಾಯಕ ಉಪ ನಿರೀಕ್ಷಕರುಗಳಾದ ಉತ್ತಯ್ಯ, ಕೆ.ಜಿ. ಹೊನ್ನಪ್ಪ, ಸಿಬ್ಬಂದಿಗಳಾದ ತೀರ್ಥಕುಮಾರ್, ಕೆ.ಎ. ಇಬ್ರಾಹಿಂ, ಹರೀಶ್, ಕೆ.ಕೆ. ದಿನೇಶ್, ಸಿ.ಯು. ಚರ್ಮಣ, ಟಿ. ಸುಂದರ, ಎ.ಟಿ. ರಾಘವೇಂದ್ರ, ಎನ್.ಸಿ. ನಂಜುಂಡ, ಬಿ.ಕೆ. ಪ್ರವೀಣ್, ಬಿ.ಜೆ. ಶರತ್ ರೈ, ನಾಗರಾಜು ಎಸ್. ಕಡಗನ್ನವರ್, ಕೆ.ಬಿ. ಮನೋಜ್, ಪರಮೇಶ್, ಮಹೇಶ್ ಮತ್ತು ಚಾಲಕರುಗಳಾದ ನಾಗರಾಜು, ಭಾನುಪ್ರಕಾಶ್ ಮತ್ತು ಅಯ್ಯಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.