ನಾಪೋಕ್ಲು, ಸೆ. 10: ಎಲ್ಲರೂ ಬದುಕಲು ಸರಕಾರಿ, ಖಾಸಗಿ ಕೆಲಸ ಸಿಕ್ಕಿದರೆ ಸಾಕು ನೆಮ್ಮದಿಯಿಂದ ಇರ ಬಹುದು ಎಂದು ಯೋಚಿಸುತ್ತಾರೆ. ಆದರೆ ತಿಂಗಳಿಗೆ ಲಕ್ಷಾಂತರ ರೂ. ವರಮಾನವಿದ್ದರೂ ತಮ್ಮ ಕೆಲಸದ ಒತ್ತಡದ ನಡುವೆ ಪ್ಲಾಸ್ಟಿಕ್ ನಿರ್ಮೂಲನೆಗಾಗಿ ಸೈಕಲ್ ಏರಿ ಓಡಾಡುತ್ತಿರುವ ಅಪರೂಪದ ವ್ಯಕ್ತಿ ನಿವೃತ್ತ ಮೇಜರ್ ಡಾ|| ಅಲ್ಲಮಪ್ರಭು.

ಪ್ರಸ್ತುತ ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿರುವ ಡಾ|| ಅಲಮಪ್ರಭು, ತಮ್ಮ ವೃತ್ತಿಯ ನಡುವೆ ಸೈಕಲ್ ಜಾಥಾದ ಮೂಲಕ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಹಾಗೆಯೇ ಬಳಸಬಹುದಾದ ಪ್ಲಾಸ್ಟಿಕ್ ಮತ್ತು ನಿಷೇಧಿಸಬೇಕಾದ ಪ್ಲಾಸ್ಟಿಕ್‍ಗಳ ಬಗ್ಗೆಯೂ ಮಾಹಿತಿ ನೀಡುತ್ತಿದ್ದಾರೆ.

ಪ್ರಸ್ತುತ ಧಾರವಾಡ ನಿವಾಸಿಯಾದ ಇವರು ಗುಲ್ಬರ್ಗದ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಸೈನ್ಯ ಸೇರಿ ಮೇಜರ್ ಆಗಿ ಸ್ವಯಂ ನಿವೃತ್ತಿ ಪಡೆದ ನಂತರ ವೈದ್ಯಕೀಯ ಶಿಕ್ಷಣದಲ್ಲಿ ಉನ್ನತ ಪದವಿಯನ್ನು ಮುಂಬೈನ ನೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನಲ್ಲಿ ಪಡೆದರು. ನಂತರ ಇಸ್ರೇಲ್, ಜರ್ಮನಿ ಹಾಗೂ ಫಿನ್‍ಲ್ಯಾಂಡ್‍ನಲ್ಲಿ ಬಂಜೆತನ ಚಿಕಿತ್ಸೆಯ ಕುರಿತ ತರಬೇತಿ ಪಡೆದು ವೈದ್ಯಕೀಯ ವೃತ್ತಿಯನ್ನೇ ಆರಿಸಿಕೊಂಡ ರಾಯಚೂರಿನ ಐ.ವಿ.ಎಫ್. ಸೆಂಟರ್‍ನಲ್ಲಿ 9 ವರ್ಷ, ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಸೇವಾಶ್ರಮದಲ್ಲಿ 2 ವರ್ಷ ಸೇವೆ ಸಲ್ಲಿಸಿ ಈಗ ಅಮ್ಮತ್ತಿಯ ಆರ್.ಐ.ಹೆಚ್.ಪಿ. ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪರಿಸರ ಪ್ರೇಮಿಯಾಗಿರುವ ಇವರು, ಬೆಂಗಳೂರಿನ ಐ ಸೈಕಲ್ ಕ್ಲಬ್‍ನ ಸದಸ್ಯರಾಗಿದ್ದಾರೆ. ಹಾಗೆಯೇ ಸೈಕ್ಲಿಂಗ್, ಮೇರಾಥಾನ್ ಓಟ, ಯೋಗಾಸನ, ಸ್ಕೇಟಿಂಗ್, ಶೆಟಲ್ ಬ್ಯಾಡ್‍ಮೆಂಟನ್ ಸೇರಿದಂತೆ ತಬಲ, ಗಿಟಾರ್ ವಾದನಗಳಲ್ಲಿಯೂ ಪರಿಣತಿ ಪಡೆದಿರುವ ಅಲ್ಲಮಪ್ರಭು, ಉತ್ತಮ ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡುತ್ತಾರೆ. -ಪಿ.ವಿ.ಪ್ರಭಾಕರ್

ವಿದ್ಯಾರ್ಥಿಗಳಿಗೆ ವಿಚಾರಗೋಷ್ಠಿ-ಸ್ಪರ್ಧೆ

ಸೋಮವಾರಪೇಟೆ, ಸೆ. 10: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತಾಲೂಕಿನ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಸ್ಪರ್ಧೆ, ಜನಸಂಖ್ಯಾ ಶಿಕ್ಷಣ ಯೋಜನೆಯಡಿ ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆ ಹಾಗೂ ಜನಪದ ನೃತ್ಯ ಸ್ಪರ್ಧೆ ನಡೆಯಿತು. ಬೇಳೂರು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಚನ್ನವೀರ ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಣ ಸಂಯೋಜಕರಾದ ಕೆ. ಬಿ. ರಾಧಾಕೃಷ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮಾನೋಭಾವನೆಯನ್ನು ಬೆಳೆಸಿ ಮೂಢನಂಬಿಕೆಯನ್ನು ಅಳಿಸಿ ಹಾಕಲು ಇಂತಹ ಕಾರ್ಯಕ್ರಮಗಳು ಸಹಕಾರಿ ಆಗುತ್ತವೆ ಎಂದರು. ವೇದಿಕೆಯಲ್ಲಿ ಬಿ.ಆರ್.ಪಿ.ಗಳಾದ ಲೋಕೇಶ್, ವಿಜಯ್‍ಕುಮಾರ್, ಸಿಆರ್‍ಪಿ ಗಳಾದ ಕಾಜೂರು ಸತೀಶ್, ಸಂತೋಷ್, ಶಿವಲಿಂಗ, ಜಾನ್ ಪೌಲ್ ಡಿಸೋಜ ಉಪಸ್ಥಿತರಿದ್ದರು.

ತಾಲೂಕಿನ ವಿವಿಧ ಪ್ರೌಢಶಾಲೆಗಳ 140 ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡಿದ್ದರು. ವಿಜ್ಞಾನ ವಿಚಾರಗೋಷ್ಠಿಯಲ್ಲಿ ನಿಡ್ತ ಸರಕಾರಿ ಪ್ರೌಢಶಾಲೆಯ ಹೆಚ್.ಪಿ. ತೃಪ್ತಿ ಪ್ರಥಮ, ಐಗೂರು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಕೆ.ಆರ್. ಹರ್ಷಿತ ದ್ವಿತೀಯ, ಕುಶಾಲನಗರ ಫಾತಿಮ ಪ್ರೌಢ ಶಾಲೆಯ ಬಿ.ಡಿ. ನೂತನ್ ತೃತೀಯ ಸ್ಥಾನ ಗಳಿಸಿದರು.

ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸೋಮವಾರಪೇಟೆ ಜ್ಞಾನವಿಕಾಸ ಶಾಲೆಯ ಸಿಂಚನ ಮತ್ತು ತಂಡ ಪ್ರಥಮ, ಸೋಮವಾರಪೇಟೆಯ ಅಂಬೇಡ್ಕರ್ ವಸತಿ ಶಾಲೆಯ ನೀತಾ ಮತ್ತು ತಂಡ ದ್ವಿತೀಯ, ಕಾನ್‍ಬೈಲ್ ಸರಕಾರಿ ಪ್ರೌಢ ಶಾಲೆಯ ಖುಷಿ ಮತ್ತು ತಂಡ ತೃತೀಯ ಸ್ಥಾನ ಪಡೆದರು.

ಜನಸಂಖ್ಯಾ ಶಿಕ್ಷಣ ಯೋಜನೆಯಡಿಯಲ್ಲಿ ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆಯಲ್ಲಿ ಕಾನ್‍ಬೈಲ್ ಸರಕಾರಿ ಪ್ರೌಢಶಾಲೆಯ ಎನ್.ಎಸ್. ಮಿಲನ ಮತ್ತು ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಯಿತು. ಜನಪದ ನೃತ್ಯ ಸ್ಪರ್ಧೆಯಲ್ಲಿ ಸೋಮವಾರಪೇಟೆ ಅಂಬೇಡ್ಕರ್ ವಸತಿ ಶಾಲೆಯ ಅಂಜನ ಮತ್ತು ತಂಡ ಪ್ರಥಮ ಸ್ಥಾನಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಯಿತು.