ಸೋಮವಾರಪೇಟೆ, ಸೆ. 9: ಕಳೆದ 2018-19ನೇ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನಷ್ಟ ಅನುಭವಿಸಿದ ಬೆಳೆಗಾರರು-ರೈತರು ತಾಲೂಕು ಬೆಳೆಗಾರರ ಸಂಘದ ಮೂಲಕ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವರ್ಷದ ನಷ್ಟಕ್ಕೆ ಹಲವಷ್ಟು ಬೆಳೆಗಾರರು ಅರ್ಜಿ ಸಲ್ಲಿಸಲು ಅಸಾಧ್ಯವಾಗಿದ್ದ ಹಿನ್ನೆಲೆ ತಾಲೂಕು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಿದ್ದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಈವರೆಗೆ ಅರ್ಜಿ ಸಲ್ಲಿಸದೇ ಇರುವ ರೈತರು, ಪರಿಹಾರಕ್ಕಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದರು. ಅದರಂತೆ ತಾಲೂಕು ಕಾಫಿ ಬೆಳೆಗಾರರ ಸಂಘದ ಮೂಲಕ ಸುಮಾರು 70 ಅರ್ಜಿಗಳನ್ನು ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ, ಕಾರ್ಯದರ್ಶಿ ಪ್ರಕಾಶ್, ಎಡದಂಟೆ ಲವ, ಸೋಮಶೇಖರ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.