ಮಡಿಕೇರಿ, ಸೆ. 8: ‘ಬಿಗ್ ಬಾಸ್’ ಖ್ಯಾತಿಯ ಕೊಡಗು ಜಿಲ್ಲೆಯ ಯುವ ನಟ ಉಳ್ಳಿಯಡ ಭುವನ್ ಪೊನ್ನಣ್ಣ ನಾಯಕ ನಟನಾಗಿ ಅಭಿನಯಿಸಿರುವ ರಾಜ್ಯದ ಚಿತ್ರಪ್ರಿಯರ ಗಮನ ಸೆಳೆದಿರುವ ಚೊಚ್ಚಲ ಚಲನ ಚಿತ್ರ ‘ರಾಂಧವ’ ಇಂದು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿನ ಕಾವೇರಿ ಮಹಲ್ ಚಿತ್ರಮಂದಿರದಲ್ಲಿ ಪ್ರದರ್ಶನ ಗೊಂಡಿತು.

ಜಿಲ್ಲೆಯ ಯುವಕ, ನಾಯಕ ನಟನಾಗಿ ಅಭಿನಯಿಸಿರುವ ಹಿನ್ನೆಲೆ ಯಲ್ಲಿ; ಈ ಚಿತ್ರ ಅಭಿಮಾನಿಗಳ ಕಾತರಕ್ಕೆ ಕಾರಣವಾಗಿತ್ತು. ಭುವನ್ ಪೊನ್ನಣ್ಣ ಅವರ ಪೋಷಕರಾದ ಉಳ್ಳಿಯಡ ಎಂ. ಪೂವಯ್ಯ, ಡಾಟಿ ಪೂವಯ್ಯ ದಂಪತಿ ಸೇರಿದಂತೆ ಚಿತ್ರಾಭಿಮಾನಿಗಳು ಹಾಗೂ ಭುವನ್‍ರ ಅಭಿಮಾನಿಗಳು, ಪತ್ರಕರ್ತರು ಇಂದು ಬೆಳಿಗ್ಗೆ ಏರ್ಪಡಿಸಲಾಗಿದ್ದ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದರು.

ಜಿಲ್ಲೆಯಲ್ಲಿ ಪ್ರಸ್ತುತ ಚಿತ್ರಮಂದಿರಗಳ ಕೊರತೆ ಇರುವದು ಚಿತ್ರ ಪ್ರದರ್ಶನಕ್ಕೆ ತೊಡಕಾಗಿದೆ. ಈ ನಡುವೆ ಇಂದಿನ ವಿಶೇಷ ಪ್ರದರ್ಶನವನ್ನು ಅಭಿಮಾನಿಗಳು ಟಿಕೆಟ್ ಖರೀದಿಸಿಯೇ ವೀಕ್ಷಿಸಿ ಪ್ರೋತ್ಸಾಹ ತೋರಿದ್ದು, ವಿಶೇಷÀವಾಗಿತ್ತು. ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಕುಟುಂಬ ಸಹಿತರಾಗಿ ಪ್ರದರ್ಶನದಲ್ಲಿ ಭಾಗಿಯಾಗಿ ಗಮನ ಸೆಳೆದರು.

ಮಡಿಕೇರಿಯ ದೇಚೂರುವಿನಲ್ಲಿ ರುವ ನಟ ಭುವನ್ ಅವರ ನೆರೆಮನೆಯವರಾದ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಅವರು ಪತ್ನಿ, ಮಕ್ಕಳೊಂದಿಗೆ ಚಿತ್ರ ವೀಕ್ಷಿಸಿದರು. ಇವರುಗಳಲ್ಲದೆ ನಗರ ವ್ಯಾಪ್ತಿಯ ಹಲವು ಪ್ರಮುಖರು, ಮಾಧ್ಯಮದವರು ಪ್ರದರ್ಶನದಲ್ಲಿ ಭಾಗಿಗಳಾಗಿದ್ದರು. ಸುನಿಲ್ ಆಚಾರ್ಯ ನಿರ್ದೇಶನದ ಈ ಚಿತ್ರ ವಿಭಿನ್ನ ತಿರುವುಗಳಿಂದ ಕೂಡಿದೆ. ಮಧ್ಯಂತರ ಅವಧಿಯ ತನಕದ ಕಥೆ ಒಂದು ರೀತಿಯಲ್ಲಿ ಮೂಡಿ ಬಂದರೆ, ಬಳಿಕ ‘ಸಸ್ಪೆನ್ಸ್’ ಮಾದರಿಯಲ್ಲಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುತ್ತದೆ. ಚೊಚ್ಚಲ ಚಿತ್ರದಲ್ಲಿ ನಾಯಕ ನಟ ಪಾತ್ರ ನಿರ್ವಹಿಸಿರುವ ಭುವನ್ ಪೊನ್ನಣ್ಣ ಇದನ್ನು ಸಾಕಷ್ಟು ಅನುಭವವಿರುವ ಇತರ ನಟರ ರೀತಿಯಲ್ಲೇ ನಿಭಾಯಿಸಿದ್ದಾರೆ. ಮುಂದಿನ ಬುಧವಾರದವರೆಗೂ ಬೆಳಿಗ್ಗೆ ಈ ಚಿತ್ರ ಪ್ರದರ್ಶನ ಮುಂದುವರಿಯಲಿದೆ ಎಂದು ಚಿತ್ರಮಂದಿರದ ರಜತ್ ತಿಳಿಸಿದ್ದಾರೆ.