ಮಡಿಕೇರಿ, ಸೆ.8: ವೀರಾಜಪೇಟೆ ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಪ್ರತಿಷ್ಠಾಪಿಸಲಾಗಿರುವ ಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಯ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಾ. 12 ರ ಸಂಜೆ 5 ಗಂಟೆಯಿಂದ ತಾ. 13 ರ ಬೆಳಗ್ಗೆ 10 ಗಂಟೆಯವರೆಗೆ ವೀರಾಜಪೇಟೆ ಪಟ್ಟಣದಲ್ಲಿ ವಾಹನಗಳ ಸಂಚಾರವನ್ನು ಬದಲಿಸಿ ಪ್ರಭಾರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ದಂಡಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.

ವಾಹನಗಳ ಸಂಚಾರ ಬದಲಾವಣೆ ಇಂತಿದೆ: ಪೆರುಂಬಾಡಿ ಕಡೆಯಿಂದ ವೀರಾಜಪೇಟೆ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ತಾಲೂಕು ತಹಶೀಲ್ದಾರ್ ಕಚೇರಿಯ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗ ಬದಿಯಲ್ಲಿ ವಾಹನ ನಿಲ್ಲಿಸುವದು.

ಕೇರಳದ ಮಾಕುಟ್ಟ ಮಾರ್ಗವಾಗಿ ಗೋಣಿಕೂಪ್ಪದ ಕಡೆ ಅಥವಾ ಸಿದ್ದಾಪುರದ ಕಡೆಗಳಿಗೆ ಹೋಗುವ ವಾಹನಗಳಿಗೆ ಪೆರುಂಬಾಡಿ ಚೆಕ್ ಪೋಸ್ಟ್-ಬಾಳುಗೋಡು-ಬಿಟ್ಟಂಗಾಲ ಜಂಕ್ಷನ್-ಕೈಕೇರಿ ಜಂಕ್ಷನ್-ಸಿ.ಎಂ.ಪೂಣಚ್ಚ ಮನೆಯ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ-ಸಿದ್ದಾಪುರಕ್ಕೆ ಹೋಗುವದು. ಸಿದ್ದಾಪುರ ಕಡೆಯಿಂದ ಕೇರಳದ ಕಡೆ ಹೋಗುವ ವಾಹನಗಳು ಕೈಕೇರಿ-ಬಿಟ್ಟಂಗಾಲ- ಬಾಳುಗೋಡು - ಪೆರುಂಬಾಡಿ ಮಾರ್ಗವಾಗಿ ಕೇರಳದ ಕಡೆ ಹೋಗುವದು.

ಮಡಿಕೇರಿಯಿಂದ ಕೇರಳದ ಕಡೆ ಹೋಗುವ ವಾಹನಗಳು ಸಿದ್ದಾಪುರ-ಪಾಲಿಬೆಟ್ಟ-ಕೈಕೇರಿ-ಬಿಟ್ಟಂಗಾಲ-ಬಾಳುಗೋಡು-ಪೆರುಂಬಾಡಿ-ಮಾಕುಟ್ಟ ಮಾರ್ಗವಾಗಿ ತೆರಳುವುದು. ಮಡಿಕೇರಿ ಕಡೆಯಿಂದ ಮೈಸೂರು-ಬೆಂಗಳೂರಿಗೆ ಹೋಗುವ ವಾಹನಗಳು ಸಿದ್ದಾಪುರ ಮಾರ್ಗವಾಗಿ ಗೋಣೆಕೊಪ್ಪ-ಮೈಸೂರು, ಬೆಂಗಳೂರಿಗೆ ಹೋಗುವುದು.

ಸಿದ್ದಾಪುರ ಕಡೆಯಿಂದ ಮೆರವಣಿಗೆ ನೋಡಲು ವೀರಾಜಪೇಟೆಗೆ ಬರುವ ವಾಹನಗಳು; ಮಗ್ಗುಲ ಜಂಕ್ಷನ್ (ಡೆಂಟಲ್ ಕಾಲೇಜ್ ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ರಸ್ತೆಗಾಗಿ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು.

ಗೋಣಿಕೂಪ್ಪ ಕಡೆಯಿಂದ ಮೆರವಣಿಗೆ ನೋಡಲು ಬರುವಂತಹ ವಾಹನಗಳನ್ನು ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ಎಡಬದಿಯಲ್ಲಿ ಮಾತ್ರ ನಿಲುಗಡೆ ಮಾಡುವದು.

ಬೇಟೋಳಿ, ಗುಂಡಿಗೆರೆ, ಚಿಟ್ಟಡೆ ಕಡೆಯಿಂದ ಮಹಿಳಾ ಸಮಾಜ ಮಾರ್ಗವಾಗಿ ಮೆರವಣಿಗೆ ನೋಡಲು ಬರುವಂತಹ ವಾಹನಗಳು ತಾಲ್ಲೂಕು ಮೈದಾನದಲ್ಲಿ ಹಾಗೂ ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲುಗಡೆ ಮಾಡಬೇಕು. ಮೈಸೂರು-ಬೆಂಗಳೂರು ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಗೋಣಿಕೊಪ್ಪ-ಸಿದ್ದಾಪುರ ಮಾರ್ಗವಾಗಿ ಮಡಿಕೇರಿ ಹೋಗುವದು.

ತಾ. 12 ರಂದು ಸಂಜೆ 5 ಗಂಟೆಯಿಂದ ತಾ. 13 ರ ಬೆಳಗ್ಗೆ 10 ಗಂಟೆ ಯವರೆಗೆ ವೀರಾಜಪೇಟೆ ನಗರದ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಖ್ಖನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆಯ ವೀರಾಜಪೇಟೆ ತಾಲೂಕು ತಹಶೀಲ್ದಾರ್‍ರವರ ಕಚೇರಿವರೆಗೆ ಹಾಗೂ ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜಿನವರೆಗೆ ಹಾಗೂ ಮಗ್ಗುಲ ಜಂಕ್ಷನ್‍ನಿಂದ ದಖ್ಖನಿ ಮೊಹಲ್ಲಾ ಜಂಕ್ಷನ್‍ವರೆಗೆ ಯಾವದೇ ವಾಹನಗಳನ್ನು ನಿಲ್ಲಿಸುವದನ್ನು ನಿಷೇಧಿಸಿದೆ.

ಮೇಲಿನ ಸಂಚಾರ ನಿಯಮಗಳಿಗೆ ಏನಾದರೂ ವ್ಯತ್ಯಾಸ ಅಥವಾ ಮಾರ್ಪಾಡು ಇದ್ದರೆ ಆಯಾಯ ಸ್ಥಳದಲ್ಲಿ ಇರುವ ಪೊಲೀಸರು ನೀಡುವ ನಿರ್ದೇಶನದಂತೆ ನಡೆದುಕೊಳ್ಳಲು ಕೋರಿಕೆ. ಇದರೊಂದಿಗೆ ಸನ್ನಿವೇಶಕ್ಕೆ ತಕ್ಕಂತೆ ಅವಶ್ಯಕತೆ ಇದ್ದರೆ, ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡುವ ನಿಬಂಧನೆಗೊಳಪಟ್ಟಿರುತ್ತದೆ. ವಾಹನ ಸಂಚಾರ ನಿಯಮವು ತಾ. 12 ರ ಸಂಜೆ 5 ಗಂಟೆಯಿಂದ ತಾ.13 ರ ಬೆಳಗ್ಗೆ 10 ಗಂಟೆಯವರೆಗೆ ಜಾರಿಯಲ್ಲಿದ್ದು, ಅನಂತರ ಎಂದಿನಂತೆ ವಾಹನ ಸಂಚಾರ ವ್ಯವಸ್ಥೆ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.