ಮಡಿಕೇರಿ, ಸೆ. 8: 2018-19ನೇ ಸಾಲಿನಲ್ಲಿ ಪ್ರಕೃತಿ ವಿಕೋಪಕ್ಕೆ ಮನೆಕಳೆದುಕೊಂಡ ಮರಾಠ-ಮರಾಟಿ ಜನಾಂಗ ಬಾಂಧವರಿಗೆ ಸಂಘದ ವತಿಯಿಂದ ಧನಸಹಾಯ ನೀಡುವಂತೆ ಸಂಘದ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ 5ನೇ ಮಾಸಿಕ ಸಭೆಯಲ್ಲಿ ಸದಸ್ಯರ ಅನುಮತಿ ಮೇರೆಗೆ ತೀರ್ಮಾನ ಕೈಗೊಳ್ಳಲಾಯಿತು.

ಅಧ್ಯಕ್ಷ ಪರಮೇಶ್ವರ್ ಮಾತನಾಡಿ, 2018ರಲ್ಲಿ ಬೆಟ್ಟಗಳು ಕುಸಿದು ಜನಾಂಗ ಬಾಂಧವರು ಆಸ್ತಿಪಾಸ್ತಿ ಕಳೆದು ಕೊಂಡಿದ್ದಾರೆ. ಅವರಿಗೆ ಪರಿಹಾರ ನೀಡುವಷ್ಟರಲ್ಲಿ, ಪ್ರಸಕ್ತ ವರ್ಷದಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ ಜನಾಂಗಬಾಂಧವರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. 2018 ಮತ್ತು 2019ರ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ಜಲಪ್ರಳಯದಿಂದ ಸಂಪೂರ್ಣ ಮನೆ ಕಳೆದು ಕೊಂಡವರಿಗೆ ಸಂಘದ ವತಿಯಿಂದ ಧನಸಹಾಯ ನೀಡಲಾಗುವದು ಎಂದು ಹೇಳಿದರು.

ಸಂಘದ ಸ್ಥಾಪಕ ಕಾರ್ಯದರ್ಶಿ ಎಂ.ಎಸ್.ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ಜನಾಂಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಹಕ್ಕೆ ಮನೆ ಕಳೆದುಕೊಂಡಿದ್ದಾರೆ. ಆದ್ದರಿಂದ ನೈಜ್ಯ ಸಂತ್ರಸ್ತರನ್ನು ಗುರುತಿಸಿ, ಪಟ್ಟಿ ಸಿದ್ಧಪಡಿಸಬೇಕು. ನಂತರ ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಎಂದು ಸಂಘದಿಂದ ಧನಸಹಾಯ ನೀಡುವಂತಾಗಲಿ ಎಂದರು.

ಸಂಘದ ಕಾರ್ಯದರ್ಶಿ ಪವನ್ ಕುಮಾರ್ ಮಾತನಾಡಿ, ಈಗಾಗಲೇ ಸಂಘದ ಪದಾಧಿಕಾರಿಗಳು ಜಿಲ್ಲೆಯ ಕಟ್ಟೆಮಾಡು ಪರಂಬು ಪೈಸಾರಿ, ವಾಲ್ನೂರು, ಸಿದ್ದಾಪುರ, ಕರಡಿಗೋಡು, ನಲ್ಯಹುದಿಕೇರಿ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ. ಕರಡು ಪಟ್ಟಿ ತಯಾರಿಸಲಾಗಿದ್ದು, ಸುಮಾರು 15 ಮನೆಗಳು ಸಂರ್ಪೂಣ ಹಾನಿ, ಭಾಗಶಃ 20 ಮನೆಗಳು ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಮನವಿ: ಪ್ರಕೃತಿ ವಿಕೋಪ ಮತ್ತು ಪ್ರವಾಹದಿಂದ ಮರಾಠ-ಮರಾಟಿ ಜನಾಂಗ ಬಾಂಧವರು ಸಂಪೂರ್ಣ ಮನೆ ಕಳೆದುಕೊಂಡವರು ಕೊಡಗು ಜಿಲ್ಲಾ ಮರಾಠ-ಮರಾಟಿ ಸಮಾಜ ಸೇವಾ ಸಂಘ, ತಾಳತ್ತ್‍ಮನೆ, ಮಡಿಕೇರಿ ಕಚೇರಿ ವಿಳಾಸಕ್ಕೆ ಪತ್ರ ಮೂಲಕ ತಿಳಿಸಬಹುದು. ಸಭೆಯಲ್ಲಿ ಗುರುತಿಸಲಾಗಿರುವ ಸಂತ್ರಸ್ತರು ತಾ.13ರಂದು ಕಚೇರಿಯಲ್ಲಿ ನಡೆಯುವ ಮಾಸಿಕ ಸಭೆಯಲ್ಲಿ ಪರಿಹಾರ ವಿತರಿಸಲಾಗುವದು. ಹೆಚ್ಚಿನ ಮಾಹಿತಿಗಾಗಿ ಮೊ. 9480987870 ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್.ನಾಯ್ಕ್, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಎಸ್. ದಿವ್ಯಕುಮಾರ್, ಉಪಾಧ್ಯಕ್ಷ ಎಂ.ಎಸ್.ಗಣೇಶ್, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ, ಪ್ರಮುಖರಾದ ಗುರುವಪ್ಪ, ನರಸಿಂಹ, ರತ್ನಮಂಜರಿ, ಯುವ ವೇದಿಕೆ ಸದಸ್ಯರಾದ ಸತೀಶ್, ಹೂವಮ್ಮ, ಸುರೇಶ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.