ನಾಪೆÇೀಕ್ಲು, ಸೆ. 8: ಸುತ್ತಲೂ ಸುಂದರವಾದ ಮುಗಿಲೆತ್ತರದ ಬೆಟ್ಟಗಳು, ಎಲ್ಲಿ ನೋಡಿದರೂ ಸಮೃದ್ಧ ಹಸಿರು ವನರಾಶಿ, ಪಕ್ಕದಲ್ಲಿಯೇ ಭೋರ್ಗರೆಯುತ್ತಾ ಧುಮುಕುತ್ತಿರುವ ಮನೋಹರವಾದ ಜಲರಾಶಿ, ಹಾಲ್ನೊರೆಯುಕ್ಕಿಸುತ್ತಾ ವೈಯಾರದಿಂದ ಹರಿಯುವ ತೊರೆ, ಈ ಭೋರ್ಗರೆತದ ಮೊರೆತದಿಂದಾಗಿ ಸಮೀಪದಲ್ಲಿದ್ದರೂ ಕೂಗಿ ಮಾತನಾಡುವ ಪರಿಸ್ಥಿತಿ.

ಆ ನೀರು ಧುಮುಕುವ ರಭಸದಿಂದ ಮೇಲೇಳುವ ನೊರೆಯ ಹನಿ, ಹನಿ ಇಬ್ಬನಿಯಾಗಿ ಮುಸುಕುವ ವಾತಾವರಣ ವರ್ಣಿಸಲಸಾಧ್ಯ, ಊಹೆಗೂ ನಿಲುಕದ ಚಿತ್ರಣ. ಇದು ಕೊಡಗಿನ ಹೆಸರುವಾಸಿ ಚೇಲಾವರ ಜಲಪಾತದ ದೃಶ್ಯ ಕಾವ್ಯ.

ಮಳೆಗಾಲದಲ್ಲಿ ಕೊಡಗಿಗೆ ಆಗಮಿಸುವ ಪ್ರವಾಸಿಗರ ಮುಖ್ಯ ಆಕರ್ಷಣೆ ಜಲಪಾತಗಳು. ಈ ಜಲಪಾತಗಳು ಕೊಡಗಿನಲ್ಲಿ ಸುರಿಯುವ ಅಧಿಕ ಮಳೆಯಿಂದ ತುಂಬಿ ಹಾಲ್ನೊರೆಯುಕ್ಕಿಸುತ್ತಾ ಧುಮ್ಮಿಕ್ಕುತ್ತಿರುವದನ್ನು ನೋಡುವದೇ ರೋಮಾಂಚನ.

ಇಲ್ಲಿ ಸುರಿಯುವ ಮಳೆಗೂ ಕೊಡಗಿಗೂ ಬಿಡಿಸಲಾರದ ನಂಟು. ಒಮ್ಮೆ ಮಳೆ ಪ್ರಾರಂಭವಾಯಿತೆಂದರೆ ದಿನಗಟ್ಟಲೆ- ತಿಂಗಳುಗಟ್ಟಲೆ ಸುರಿಯುವ ಮಳೆ. ಈ ಮಳೆ ನೀರಿನೊಂದಿಗೆ ಕೊಡಗಿನಲ್ಲಿರುವ ಅಸಂಖ್ಯಾತ ಜಲಪಾತಗಳು ಗಿರಿ ಕಂದರಗಳ ನಡುವಿನಿಂದ ಧಾರೆಯಾಗಿ ಧುಮ್ಮಿಕ್ಕಿ ಭೋರ್ಗರೆಯುತ್ತ ಸಾಗುತ್ತಿದ್ದರೆ ಇವೆಲ್ಲಕ್ಕೂ ಸಂಬಂಧವಿಲ್ಲ ಎಂಬಂತೆ ತನ್ನ ಬಳಕುವ ವಯ್ಯಾರದಿಂದ ತನ್ನದೇ ಆದ ರೀತಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಜಲಪಾತವೆಂದರೆ ಚೇಲಾವರ ಜಲಪಾತ.

ಮಳೆಗಾಲದಲ್ಲಿ ನೀರು ತುಂಬಿ ಭೋರ್ಗರೆದು ಧುಮುಕುವಾಗ ಅಬ್ಬಾ! ಆ ಜಲಧಾರೆಯ ಸೌಂದರ್ಯ ವರ್ಣಾನಾತೀತ. ಸುಮಾರು 80 ಅಡಿ ಅಗಲವಾಗಿ 100 ಅಡಿ ಎತ್ತರದಿಂದ ಧುಮುಕುವ ಜಲಧಾರೆ ನೋಡುಗರಿಗೆ ಬೆಳ್ಮುಗಿಲ ಧಾರೆಯಾಗಿ ಧಾವಿಸುವಂತೆ ತೋರುತ್ತದೆ.

ತಡಿಯಂಡಮೋಳ್ ಶಿಖರದಿಂದ ಹುಟ್ಟುವ ಈ ಜಲಪಾತ ಬೇಸಗೆಯಲ್ಲಿ ನಿತ್ರಾಣವಾಗಿರುವಂತೆ ಸಣ್ಣಗೆ ಹರಿಯುತ್ತಾ ಮಳೆಗಾಲ ಪ್ರಾರಂಭವಾದೊಡನೆ ದಷ್ಟಪುಷ್ಟವಾಗಿ ತನ್ನ ರಭಸವನ್ನು ಹೆಚ್ಚಿಸಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

ಚೆಯ್ಯಂಡಾಣೆ ಮುಖ್ಯ ರಸ್ತೆಯಿಂದ 5 ಕಿ. ಮೀ. ದೂರದ ಚೇಲಾವರ ಗ್ರಾಮದಲ್ಲಿ ಭೋರ್ಗರೆಯುತ್ತಾ ಧುಮುಕುತ್ತಾ ತನ್ನದೇ ಆದ ವೈಶಿಷ್ಟ್ಯದಿಂದ ಸಾಗುವ ಈ ಜಲರಾಶಿಯ ಸ್ಥಳಕ್ಕೆ ಚೆಯ್ಯಂಡಾಣೆಯಿಂದ ಕಾಂಕ್ರಿಟ್ ರಸ್ತೆ ಇದೆ. ವಾಹನಗಳಲ್ಲಿ ಇಲ್ಲಿಗೆ ತಲುಪಬಹುದು. ಸ್ವಲ್ಪ ಕಾಲು ಹಾದಿ ಮಾತ್ರ ಕೊರಕಲು ಕಲ್ಲು, ಅಂಕು ಡೊಂಕು, ತಗ್ಗು ದಿಣ್ಣೆಗಳಿಂದ ಕೂಡಿದೆ. ನಿತ್ಯ ಹರಿದ್ವರ್ಣದ ದಟ್ಟವಾದ ಕಾಡುಗಳಿಂದಾವೃತವಾದ ತೂಂಗ್ ಕೊಲ್ಲಿ ಎಂಬಲ್ಲಿಗೆ ಹೆಜ್ಜೆ ಹಾಕುತ್ತಿದ್ದಂತೆ ಎಡಬದಿಯ ಕಣಿವೆಯಲ್ಲಿ ಆಮೆಯ ಬೆನ್ನಿನಂತೆ ಕಾಣುವ ಕರಿ ಕಲ್ಲು ರಾಶಿಯ ನಡುವಿನ ರುದ್ರ ರಮಣೀಯ ಸೋಮನ ಜಲಪಾತದ ದರ್ಶನವಾಗುತ್ತದೆ. ಈ ಜಲಧಾರೆ ಹರಿದು ಬರುವ ಬಂಡೆಗಳು ಪÀಕ್ಕನೆ ನೋಟಕ್ಕೆ ಆಮೆಯ ಬೆನ್ನಿನಂತೆ ಕಾಣುವದರಿಂದ ಇದನ್ನು ಆಮೆಪಾರೆ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸ್ಥಳಿಯರು.

ಪ್ರವಾಸಿಗರು ನೀರಿಗಿಳಿದು ಚೆಲ್ಲಾಟವಾಡಲು ಅವಕಾಶ ನೀಡದ ಕಾರಣ ಪ್ರವಾಸಿಗರಿಗೆ ಯಾವದೇ ಅಪಾಯದ ಭಯವಿಲ್ಲದಂತಾಗಿದೆ.

-ಪಿ.ವಿ. ಪ್ರಭಾಕರ್