ಸಿದ್ದಾಪುರ, ಸೆ. 8: ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಒತ್ತುವರಿಯಾಗಿದ್ದ ಜಾಗವನ್ನು ಜಿಲ್ಲಾಡಳಿತದ ವತಿಯಿಂದ ತೆರವುಗೊಳಿಸಲು ಮುಂದಾದ ಬೆನ್ನಲ್ಲೇ ಇದೀಗ ಒತ್ತುವರಿ ಜಾಗದಲ್ಲಿರುವ ಮರಗಳ ಎಣಿಕೆ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿದೆ.ಶನಿವಾರದಂದು ಬೆಟ್ಟದಕಾಡು ವಿನ ಸರ್ವೆ ನಂ. 169/1 ರಲ್ಲಿ 10.83 ಎಕರೆ ಸರ್ಕಾರಿ ಜಾಗವು ಒತ್ತುವರಿಯಾಗಿದೆಂದು ಜಿಲ್ಲಾಡಳಿತದ ತಂಡವು ಜೆಸಿಬಿ ಮೂಲಕ ಗಡಿ ಗುರುತಿಸಲಾಗಿತ್ತು. ನದಿತೀರದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಜಿಲ್ಲಾಡಳಿತದ ವತಿಯಿಂದ ನೆಲ್ಯಹುದಿಕೇರಿ ಬೆಟ್ಟದಕಾಡುವಿನಲ್ಲಿ ಜಾಗವನ್ನು ತ್ವರಿತವಾಗಿ ಗುರುತಿಸಿ ತ್ವರಿತವಾಗಿ ಸರ್ವೆ ಕಾರ್ಯವನ್ನು ನಡೆಸಿತ್ತು. ನೆಲ್ಯಹುದಿಕೇರಿ ಬೆಟ್ಟದಕಾಡುವಿನ ಕಾಫಿ ಬೆಳೆಗಾರರೊಬ್ಬರಿಗೆ ಸೇರಿದ ಜಾಗದಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರು ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ನೇತೃತ್ವದಲ್ಲಿ (ಮೊದಲ ಪುಟದಿಂದ) ತಂಡ ರಚನೆ ಮಾಡಲಾಗಿತ್ತು. ತಂಡದಲ್ಲಿ ಅರಣ್ಯ ಇಲಾಖಾಧಿಕಾರಿಗಳನ್ನು ಕೂಡ ಸೇರ್ಪಡೆಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರದಂದು ಜಿಲ್ಲಾಡಳಿತ ಪುನರ್ವಸತಿಗೆ ಕಲ್ಪಿಸಿರುವ ಜಾಗದಲ್ಲಿ ಸಾಕಷ್ಟು ಮರಗಳು ಇರುವ ಕಾರಣ ಅರಣ್ಯ ಇಲಾಖಾಧಿಕಾರಿಗಳ ಆದೇಶದ ಮೇರೆಗೆ ಒತ್ತುವರಿ ಜಾಗದಲ್ಲಿರುವ ಮರಗಳನ್ನು ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ವಿಲಾಸ್‍ಗೌಡ ನೇತೃತ್ವದಲ್ಲಿ 10 ಮಂದಿ ಸಿಬ್ಬಂದಿಗಳು ಸೇರಿ ಭಾನುವಾರದಂದು ವಿವಿಧ ಜಾತಿಯ ಮರಗಳ ಎಣಿಕೆ ಪಟ್ಟಿಯನ್ನು ಸಿದ್ಧಪಡಿಸಿದರು.

ಈ ಪಟ್ಟಿಯನ್ನು ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಸಲ್ಲಿಸಲಿದ್ದಾರೆ. ನಂತರ ಮೇಲಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ ಬಳಿಕ ಮರಗಳ ತೆರವು ಕಾರ್ಯಾಚರಣೆ ನಡೆಯಲಿದೆಂದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮರಗಳನ್ನು ಯಾವ ರೀತಿ ವಿಂಗಡಿಸಿ ಕ್ರಮಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಲಿದೆ. ಒಟ್ಟಿನಲ್ಲಿ ಸಂತ್ರಸ್ತರು ಶಾಶ್ವತ ಸೂರುವಿನ ನಿರೀಕ್ಷೆಯಲ್ಲಿದ್ದಾರೆ.

-ವಾಸು