*ಗೋಣಿಕೊಪ್ಪಲು, ಸೆ. 8: ಅತಿವೃಷ್ಟಿಯಿಂದ ಬೆಳೆಗಾರ ಸಂಕಷ್ಟ ಪರಿಸ್ಥಿತಿಯಲ್ಲಿ ಬಳಲುತ್ತಿದ್ದರೆ ಕಾಡಾನೆ ಹಾವಳಿಯಿಂದ ಮತ್ತಷ್ಟು ಸಮಸ್ಯೆ ಎದುರಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಮಳೆಯ ತೀವ್ರತೆಗೆ ಕಾಫಿ ಗಿಡಗಳು, ಕಾಳುಮೆಣಸು ಬಳ್ಳಿಗಳು ಕೊಳೆಯುತ್ತಿವೆ. ಬೆಳೆಗಾರ ಕಣ್ಣೀರಿನಲ್ಲಿ ದಿನಕಳೆಯುವ ಸ್ಥಿತಿ ಎದುರಾಗಿದೆ. ಈ ಸಂಕಷ್ಟದ ಸ್ಥಿತಿಯಲ್ಲಿ ನಿರಂತರವಾಗಿ ಕಾಡಾನೆಗಳು ತೋಟಕ್ಕೆ ಲಗ್ಗೆ ಇಟ್ಟು ದಾಂದಲೆ ಮಾಡುತ್ತಿರುವದು ಬೆಳೆಗಾರರನ್ನು ಮತ್ತಷ್ಟು ಹೈರಾಣಾಗಿಸುತ್ತಿದೆ. ಮುಂದಿನ ಭವಿಷ್ಯದ ಬಗ್ಗೆ ಬೆಳೆಗಾರರಲ್ಲಿ ಚಿಂತೆ ಕಾಡುತ್ತಿದೆ.

ತೋಟಗಳಿಗೆ ಕಾಡಾನೆಗಳು ಬರಲು ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದು ಕಳತ್ಮಾಡು ಗ್ರಾಮ ನಿವಾಸಿ ಕತ್ರಿಕೊಲ್ಲಿ ಕಾಳಪ್ಪ ಆರೋಪಿಸಿದ್ದಾರೆ. ಕಳೆದ 15 ದಿನಗಳಿಂದ ಕಳತ್ಮಾಡು ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ಆನೆಗಳು ಕಾಫಿ ತೋಟಗಳಲ್ಲಿ ಮರಿಗಳೊಂದಿಗೆ ಬೀಡು ಬಿಟ್ಟಿದೆ. ಅರಣ್ಯ ಇಲಾಖೆ ನೆಪಮಾತ್ರಕ್ಕೆ ಆನೆ ಓಡಿಸುವ ಕಾರ್ಯಕ್ಕೆ ಮುಂದಾಗುತ್ತಿದೆ. ಆದರೆ ಆನೆ ಕಾರ್ಯಾಚರಣೆಯಲ್ಲಿ ವಿಫಲತೆಯನ್ನೇ ಎದುರಿಸುತ್ತಿವೆ. ತಕ್ಷಣಕ್ಕೆ ಆನೆಗಳು ಬೀಡು ಬಿಟ್ಟಿವೆ. ತೋಟದಿಂದ ಪಕ್ಕದ ತೋಟಗಳಿಗೆ ಪಲಾಯನಗೊಳ್ಳುತ್ತವೆ ಹೊರತು ಶಾಶ್ವತವಾಗಿ ಸ್ಥಳದಿಂದ ತೆರಳುವದಿಲ್ಲ. ಹೀಗಾಗಿ ತೋಟಗಳು ಆನೆಗಳ ವಾಸದಿಂದ ಸಂಪೂರ್ಣ ನಾಶ ಹೊಂದುತ್ತಿವೆ. ಕಳೆದ ಒಂದು ವಾರದಿಂದ ಕಾಫಿ ತೋಟದಲ್ಲಿ ಬೀಡು ಬಿಟ್ಟ ಆನೆಗಳು ತೆಂಗು, ಅಡಿಕೆ, ಬಾಳೆ, ಸೀಬೆ, ಸಪೆÇೀಟ ಸೇರಿದಂತೆ ಉತ್ತಮ ಫಸಲು ನೀಡುವ ಗಿಡಗಳನ್ನು ನಾಶಪಡಿಸಿವೆ. ಆನೆಗಳ ಈ ದಾಳಿಯಿಂದ ಸುಮಾರು 3.50 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಬೆಳೆಗಾರ ಕತ್ರಿಕೊಲ್ಲಿ ಕಾಳಪ್ಪ ತಮ್ಮ ಅಳಲನ್ನು ಹಂಚಿಕೊಂಡರು. ಬೆಳೆಗಾರ ಸಂಕಷ್ಟದಿಂದ ಪಾರಾಗಬೇಕಾದರೆ ಆನೆಗಳ ನಿಯಂತ್ರಣ ಮಾಡುವದು ಒಳಿತು. ನಿರಂತರವಾಗಿ ಈ ರೀತಿಯ ನಷ್ಟಗಳು ಬೆಳೆಗಾರನ ಹೆಗಲ ಮೇಲೆ ಏರಿದರೆ ಆರ್ಥಿಕ ಪರಿಸ್ಥಿತಿ ಕುಂದುತ್ತದೆ. ಬೆಳೆಗಾರ ಸಾಲಗಾರನಾಗಿ ಅತಂತ್ರ ಸ್ಥಿತಿಗೆ ತಲಪುತ್ತಾನೆ ಎಂದು ತಮ್ಮ ನೋವನ್ನು ಹಂಚಿಕೊಂಡರು.

ಅರಣ್ಯ ಇಲಾಖೆಯೊಳಗೆ ವನ್ಯಜೀವಿ ಮತ್ತು ಸಾಮಾಜಿಕ ಅರಣ್ಯ ಸಿಬ್ಬಂದಿಗಳ ನಡುವೆ ಹೊಂದಾಣಿಕೆ ಕೊರತೆ ಇರುವದರಿಂದ ಈ ಸಮಸ್ಯೆ ಉಲ್ಬಣಿಸಲು ಕಾರಣವಾಗಿದೆ. ಇದು ಬೆಳೆಗಾರರನ್ನು ನಿರಂತರವಾಗಿ ಸಂಕಷ್ಟಕ್ಕೆ ತಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಆನೆ ಧಾಳಿಯ ಜೊತೆಗೆ ಬೆಳೆಗಾರ ಕರಡಿ, ಹುಲಿ, ಕಾಡು ಹಂದಿ ಹಾವಳಿಯಿಂದಲೂ ತತ್ತರಿಸುತ್ತಿದ್ದಾರೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಚಿತ್ರ ವರದಿ: ಎನ್. ಎನ್. ದಿನೇಶ್