ಗೋಣಿಕೊಪ್ಪಲು, ಸೆ. 8: ಹುಣಸೂರು ಗೋಣಿಕೊಪ್ಪಲು ನಡುವಿನ ಆನೆಚೌಕೂರು ಅಂತರಾಜ್ಯ ಹೆದ್ದಾರಿಯಲ್ಲಿ ಮೇಲು ಸೇತುವೆ ನಿರ್ಮಾಣಕ್ಕೆ ಗಂಭೀರ ಚಿಂತನೆ ನಡೆದಿದೆ. ಈ ಸಂಬಂಧ ಭಾರತೀಯ ಹುಲಿ ಸಂರಕ್ಷಣಾ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ಆನೆಚೌಕೂರು ನಾಗರಹೊಳೆ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ವನ್ಯ ಜೀವಿ ವಿಭಾಗಕ್ಕೆ ಹೊಸದಾಗಿ 200 ಚದರ ಕಿಮೀ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಇದೀಗ ದಕ್ಷಿಣ ಕೊಡಗಿನ ಆನೆ ಚೌಕೂರು ಹೆಬ್ಬಾಗಿಲು ರಾತ್ರಿವೇಳೆ ಮುಚ್ಚಬಹುದು ಎಂಬ ಆತಂಕ ದಕ್ಷಿಣ ಕೊಡಗಿನ ಮತ್ತು ಕೇರಳದ ಜನತೆ ಯನ್ನು ಆವರಿಸಿತ್ತು. ಈ ಆತಂಕಕ್ಕೆ ಮುಂದೆ ತೆರೆ ಬೀಳುವ ಸಾಧ್ಯತೆ ಇದೆ.ಅರಣ್ಯಾಧಿಕಾರಿಗಳು ಹೇಳುವಂತೆ ರಾಷ್ಟ್ರೀಯ ವನ್ಯಜೀವಿ ಕಾಯ್ದೆ ಅನ್ವಯ ಯಾವದೇ ಅರಣ್ಯ ಮಾರ್ಗವನ್ನು ರಾತ್ರಿವೇಳೆ ಬಂದ್ ಮಾಡುವದಕ್ಕೆ ಕನಿಷ್ಟ 15 ಕಿಮೀ ದೂರವಿರಬೇಕು. ಇಲ್ಲದಿದ್ದರೆ ಅದನ್ನು ವಾಹನ ಸಂಚಾರ ದಿಂದ ಮುಕ್ತ ಗೊಳಿಸಲು ಬರುವದಿಲ್ಲ. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಮಾನ್ಯತೆ ನೀಡುವದಿಲ್ಲ.ಈಗ ಆನೆ ಚೌಕೂರು ವನ್ಯ ಜೀವಿ ವಿಭಾಗಕ್ಕೆ ಸೇರಿದ ಅಂತರಾಜ್ಯ ಹೆದ್ದಾರಿ ಕೇವಲ 10 ಕಿಮೀ ದೂರವಿದೆ. ಇದರಿಂದ (ಮೊದಲ ಪುಟದಿಂದ) ಯಾವ ಕಾರಣದಿಂದಲೂ ಈ ಮಾರ್ಗದಲ್ಲಿ ರಾತ್ರಿವೇಳೆ ವಾಹನ ಸಂಚಾರಕ್ಕೆ ಬ್ರೇಕ್ ಬೀಳುವದಿಲ್ಲ. ಮಾರ್ಗ ಬಂದ್ ಮಾಡುವ ಬದಲು 10 ಕಿಮೀ ದೂರದ ಅರಣ್ಯದೊಳಗಿನ ಅಂತರಾಜ್ಯ ಹೆದ್ದಾರಿಯಲ್ಲಿ ಮೇಲು ಸೇತುವೆ ನಿರ್ಮಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಹುಣಸೂರು ಕಡೆಯಿಂದ ಅರಣ್ಯವನ್ನು ಪ್ರವೇಶ ಮಾಡುವ ಅಳ್ಳೂರಿನಿಂದ ಹಿಡಿದು ಕೊಡಗಿನ ತಿತಿಮತಿ ಮಜ್ಜಿಗೆ ಹಳ್ಳದ ವರೆಗೆ ಈ ಯೋಜನೆಯನ್ನು ರೂಪಿಸಲು ಅರಣ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ.
ಈಗಾಗಲೆ ಇದರ ಜತೆಗೆ ರಾತ್ರಿವೇಳೆ ತಲಾ 5 ಕಿಮೀಗೆ ಒಂದರಂತೆ ಗಸ್ತು ತಿರುಗುವ ವಿಶೇಷ ಅರಣ್ಯಾಧಿಕಾರಿಗಳ ಪಡೆಯನ್ನು ರಚಿಸಲಾಗುವದು ಎಂದು ಹೇಳಿದ್ದಾರೆ.
ರಾತ್ರಿವೇಳೆ ಸಂಚರಿಸುವ ವಾಹನಗಳಿಂದ ವನ್ಯಜೀವಿಗಳಿಗೆ ಉಂಟಾಗುತ್ತಿರುವ ಜೀವ ಹಾನಿಯನ್ನು ತಡೆಗಟ್ಟುವದಕ್ಕಾಗಿ ಅರಣ್ಯದೊಳಗಿನ ಮಾರ್ಗದುದ್ದಕ್ಕೂ 500 ಮೀಟರ್‍ಗೆ ಒಂದರಂತೆ 21 ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ವಾಹನಗಳ ವೇಗ ನಿಯಂತ್ರಣಕ್ಕೆ ಬಂದಿದ್ದು ಕಳೆದ 3 ತಿಂಗಳಿನಿಂದ ಯಾವದೇ ಪ್ರಾಣಿಗಳ ಜೀವ ಹಾನಿಯಾಗಿಲ್ಲ. ಮುಂದೆಯೂ ವನ್ಯ ಜೀವಿಗಳ ಓಡಾಟಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೇಲು ಸೇತುವೆ ನಿರ್ಮಾಣಕ್ಕೆ ಭಾರತೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆ ಕಾರ್ಯೋನ್ಮುಖವಾಗಲಿದೆ ಎಂದು ತಿಳಿದು ಬಂದಿದೆ.
ಚಿತ್ರ, ವರದಿ: ಎನ್.ಎನ್. ದಿನೇಶ್