ಮಡಿಕೇರಿ, ಸೆ. 8: ರಾಜ್ಯದಲ್ಲಿ ಕಳೆದ ಹದಿನಾಲ್ಕು ತಿಂಗಳ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಜೆಡಿಎಸ್ - ಕಾಂಗ್ರೆಸ್ ಸಮ್ಮಿಶ್ರ ಸರಕಾರ ಪತನಗೊಂಡು ಇದೀಗ ಬಿಜೆಪಿ ಅಧಿಕಾರದ ಗದ್ದುಗೆಗೇರಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದಲ್ಲಿ ರಾಜಕೀಯವಾದ ಬದಲಾವಣೆಗಳೂ ಸಹಜವಾಗಿಯೇ ಆರಂಭಗೊಂಡಿದ್ದು; ಸಮ್ಮಿಶ್ರ ಸರಕಾರದ ಅಧಿಕಾರಾವಧಿಯ ಸಂದರ್ಭದಲ್ಲಿ ನೇಮಕ ಮಾಡಲಾಗಿದ್ದ ರಾಜ್ಯದ ವಿವಿಧ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರನ್ನು ಈ ಸ್ಥಾನದಿಂದ ವಿಸರ್ಜಿಸಲಾಗಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಪೂರ್ಣಗೊಂಡರೂ ಸರಕಾರದ ಕಾರ್ಯವೈಖರಿ ಸುಭದ್ರವಾಗಿ ಆರಂಭಗೊಂಡಿಲ್ಲ. ಸಚಿವ ಸ್ಥಾನದ ವಿಚಾರ, ಖಾತೆ ಹಂಚಿಕೆಯ ವಿಚಾರದ ಗೊಂದಲ, ಭಿನ್ನಾಭಿಪ್ರಾಯಗಳು ಇನ್ನೂ ಹಾಗೆಯೇ ಮುಂದುವರಿಯುತ್ತಿದ್ದು; ಸದ್ಯಕ್ಕೆ ಇದೇ ಸವಾಲಿನ ವಿಚಾರವಾಗಿದ್ದು, ಇದರೊಂದಿಗೆ ಅಕಾಡೆಮಿ, ನಿಗಮ ಮಂಡಳಿಗಳಿಗೆ ಪದಾಧಿಕಾರಿಗಳ ಆಯ್ಕೆಯ ಕಸರತ್ತು ನಡೆಯಬೇಕಿದೆ.ನೂತನ ಸರಕಾರ ರಚನೆಗೊಂಡು, ಈ ಹಿಂದಿನ ಅಕಾಡೆಮಿಯ ನೇಮಕಾತಿ ರದ್ದುಗೊಂಡ ಬಳಿಕ ಈ ಸ್ಥಾನಕ್ಕಾಗಿ ಕಸರತ್ತುಗಳು, ಒತ್ತಡಗಳು ಆರಂಭಗೊಂಡಿದ್ದು, ಹಲವರು ತಮ್ಮ ಬೇಡಿಕೆಯನ್ನು ಈಗಾಗಲೇ ಮುಂದಿಟ್ಟಿದ್ದಾರೆ. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಅಕಾಡೆಮಿ ಅಸ್ತಿತ್ವದಲ್ಲಿವೆ. ಈ ತನಕ ಕೊಡವ ಅಕಾಡೆಮಿ ಅಧ್ಯಕ್ಷರಾಗಿ ಪೆಮ್ಮಂಡ ಕೆ. ಪೊನ್ನಪ್ಪ ಹಾಗೂ ಅರೆಭಾಷಾ ಅಕಾಡೆಮಿ ಅಧ್ಯಕ್ಷರಾಗಿ ಕೊಡಗಿನೊಂದಿಗೆ ಈ ಅಕಾಡೆಮಿಯ ಕಾರ್ಯಕ್ಷೇತ್ರ ಹೊಂದಿರುವ ನೆರೆ ಜಿಲ್ಲೆಯ ಪಿ.ಸಿ. ಜಯರಾಮ್ ಅವರುಗಳು ಅಧ್ಯಕ್ಷರಾಗಿದ್ದು ಇದೀಗ ಮಾಜಿಗಳಾಗಿದ್ದಾರೆ. ಇವರ ತಂಡದ ಸದಸ್ಯರೂ ಇದೀಗ ಮಾಜಿಗಳು...

ನಿರೀಕ್ಷೆಯಲ್ಲಿ ಹಲವರು

ಅಕಾಡೆಮಿಗೆ ಸಂಬಂಧಿಸಿದಂತೆ ಈಗಾಗಲೇ ಹಲವರು ಅಧ್ಯಕ್ಷಗಾದಿಯ ನಿರೀಕ್ಷೆಯಲ್ಲಿದ್ದು; ಪಕ್ಷದ ಪ್ರಮುಖರು, ಶಾಸಕರುಗಳ ಮುಂದೆ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಆದರೆ ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಈ ವಿಚಾರ ಪ್ರಸ್ತುತ ಹೆಚ್ಚು ಮಹತ್ವ ಪಡೆದಂತೆ ಕಾಣುತ್ತಿಲ್ಲವಾದರೂ ರಾಜ್ಯ ರಾಜಕೀಯ ಪರಿಸ್ಥಿತಿ ತಿಳಿಯಾದ ಬಳಿಕ ಭಾಷಾ ಹಾಗೂ ಸಾಂಸ್ಕøತಿಕ ಅಕಾಡೆಮಿಗಳಿಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಲೇ ಬೇಕಿರುವದರಿಂದ ಸಚಿವ ಸಂಪುಟದ ಬಿಸಿಯ ನಡುವೆಯೂ ಅಕಾಡೆಮಿಗಳ ಸ್ಥಾನದ ವಿಚಾರ ಗರಿಗೆದರುತ್ತಿದ್ದು, ಕುತೂಹಲಮೂಡಿಸುತ್ತಿದೆ.

ಕೊಡವ ಅಕಾಡೆಮಿ

ಕೊಡವ ಅಕಾಡೆಮಿಗೆ ಸಂಬಂಧಿಸಿದಂತೆ ಈ ಹಿಂದೊಮ್ಮೆ ಅಧ್ಯಕ್ಷರಾಗಿ ಘೋಷಣೆಗೊಂಡು ಕೆಲವೇ ದಿನಗಳಲ್ಲಿ ಈ ಸ್ಥಾನದಿಂದ ವಂಚಿತರಾಗಿದ್ದ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ಪ್ರೊಫೆಸರ್ ಇಟ್ಟೀರ ಕೆ. ಬಿದ್ದಪ್ಪ ಅವರು ಓರ್ವ ಪ್ರಬಲ ಆಕಾಂಕ್ಷಿಯಾಗಿರುವದು ಇವರ ಪರವಾಗಿ ಹಲವರು ‘ಬ್ಯಾಟಿಂಗ್’ ನಡೆಸುತ್ತಿರುವದು ತಿಳಿದು ಬಂದಿದೆ. ಇವರು ನೇರವಾಗಿ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡ ವ್ಯಕ್ತಿಯಲ್ಲದಿದ್ದರೂ ಈ ಮಹತ್ವದ ಸ್ಥಾನವನ್ನು ನಿಭಾಯಿಸಲು ಸೂಕ್ತ ವ್ಯಕ್ತಿ ಎಂಬದು ಹಲವರ ಅಭಿಪ್ರಾಯವಾಗಿದೆ ಎನ್ನಲಾಗಿದೆ. ಇವರು ಅಖಿಲ ಕೊಡವ ಸಮಾಜದ ಕಾರ್ಯಾಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸುತ್ತಿರುವವರಾಗಿದ್ದಾರೆ. ಮಂಗಳೂರು ವಿ.ವಿ. ಶೈಕ್ಷಣಿಕ ಮಂಡಳಿ ಮಾಜಿ ಸದಸ್ಯ, ಕೊಡವ ಅಧ್ಯಯನ ಪೀಠದ ಸದಸ್ಯರೂ ಆಗಿರುವ ಇವರು ಸಾಹಿತಿಯೂ ಆಗಿದ್ದಾರೆ.

ಇನ್ನು ಕಳೆದ ಅವಧಿಗಳ ಅಧ್ಯಕ್ಷರು, ಸದಸ್ಯರ ನೇಮಕಾತಿಯನ್ನು ಅವಲೋಕಿಸಿದರೆ, ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವವರೇ ಈ ಪಟ್ಟ ಅಲಂಕರಿಸಿರುವದು

(ಮೊದಲ ಪುಟದಿಂದ) ಕಂಡು ಬರುತ್ತಿದೆ. ಪಕ್ಷಕ್ಕಾಗಿ ದುಡಿದವರಿಗೆ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಇದು ಪ್ರಸ್ತುತದ ಸನ್ನಿವೇಶದಲ್ಲಿ ಸಾಮಾನ್ಯವೂ ಆದಂತಿದೆ. ಇದರಂತೆ ಕೊಡವ ಅಕಾಡೆಮಿ ಸ್ಥಾನಕ್ಕೆ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಹಾಗೂ ಇದರೊಂದಿಗೆ ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿರುವ ನಾಪಂಡ ರವಿ ಕಾಳಪ್ಪ ಅವರು ತಮ್ಮ ಪ್ರಬಲವಾದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇವರೊಂದಿಗೆ ಬಿಜೆಪಿ ಪಕ್ಷದಲ್ಲಿ ಹಲವು ಪ್ರಮುಖ ಸ್ಥಾನಗಳನ್ನು ನಿಭಾಯಿಸಿರುವ ಕಳೆದ ಕೆಲವು ಅವಧಿಯಿಂದ ಸತತವಾಗಿ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾಗಿರುವ ಮೂಕೋಂಡ ಬೋಸ್ ದೇವಯ್ಯ ಅವರು ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದು, ಪಕ್ಷ ಪ್ರಮುಖರ ಗಮನಕ್ಕೆ ತರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಜಿಲ್ಲಾ - ತಾಲೂಕು ಯುವ ಒಕ್ಕೂಟಗಳಲ್ಲಿ ಕೆಲಸ ನಿರ್ವಹಿಸಿರುವ ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ಮುಂಡುವಂಡ ಬಿ. ಜೋಯಪ್ಪ ಅವರೂ ಓರ್ವ ಆಕಾಂಕ್ಷಿಯಾಗಿದ್ದು, ಇವರೂ ತಮ್ಮ ಬೇಡಿಕೆಯನ್ನು ಪ್ರಮುಖರ ಮುಂದಿಟ್ಟಿದ್ದಾರೆ. ವೀರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಜಿ.ಪಂ. ಮಾಜಿ ಸದಸ್ಯೆ ಹಾಗೂ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಕಾಂತಿ ಸತೀಶ್ ಕೂಡ ಈ ಸ್ಥಾನದ ಆಕಾಂಕ್ಷಿಯಾಗಿದ್ದರೆನ್ನಲಾಗಿದ್ದು, ಅವರ ಈಗಿನ ವೈಯಕ್ತಿಕ ವಿಚಾರದ ಹಿನ್ನೆಲೆಯಲ್ಲಿ ಯಾವ ನಿಲುವಿಗೆ ಬರಲಿದ್ದಾರೆ ಎಂದು ಹೇಳಲಾಗದು. ಈ ನಡುವೆ ಅಕಾಡೆಮಿಯ ಮಾಜಿ ಸದಸ್ಯರಾಗಿದ್ದ ಮಡಿಕೇರಿ ಕೊಡವ ಸಮಾಜದ ಜಂಟಿ ಕಾರ್ಯದರ್ಶಿಯಾಗಿರುವ ರಂಗಭೂಮಿ ಕಲಾವಿದ ಮಾದೇಟಿರ ಬೆಳ್ಯಪ್ಪ ಅವರ ಹೆಸರೂ ಕೇಳಿಬರುತ್ತಿದೆ.

ಅರೆಭಾಷಾ ಅಕಾಡೆಮಿಗೂ ಪ್ರಯತ್ನ

ಕೊಡಗು ಸೇರಿದಂತೆ, ನೆರೆಯ ಸುಳ್ಯ, ಪುತ್ತೂರು ವಿಭಾಗದ ಕಾರ್ಯಕ್ಷೇತ್ರವನ್ನು ಹೊಂದಿದ್ದು, ಕೊಡಗು ಜಿಲ್ಲಾ ಕೇಂದ್ರದಲ್ಲೇ ಮುಖ್ಯ ಕಚೇರಿ ಹೊಂದಿರುವ ಅರೆಭಾಷೆ ಸಾಹಿತ್ಯ - ಸಾಂಸ್ಕøತಿಕ ಅಕಾಡೆಮಿಗೂ ಹಲವರು ಆಕಾಂಕ್ಷಿಗಳಾಗಿದ್ದು, ತಮ್ಮ ಬೇಡಿಕೆಯನ್ನು ಪ್ರತಿಪಾದಿಸುತ್ತಿದ್ದಾರೆ. ಇವರಲ್ಲಿ ಮಡಿಕೇರಿ ತಾಲೂಕು ಬಿಜೆಪಿ ಅಧ್ಯಕ್ಷರಾಗಿರುವ ಈ ಹಿಂದೊಮ್ಮೆ ಅಧ್ಯಕ್ಷ ಸ್ಥಾನದ ಪಟ್ಟಿಯಲ್ಲಿ ಅಂತಿಮ ಹಂತದವರೆಗೂ ಇದ್ದು ಮತ್ತೆ ಹಿಂದೆ ಸರಿದಿದ್ದ ತಳೂರು ಕಿಶೋರ್ ಕುಮಾರ್ ಈ ಬಾರಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಇದೀಗ ಮತ್ತೋರ್ವ ಆಕಾಂಕ್ಷಿಯಾಗಿ ಸೋಮವಾರಪೇಟೆಯವರಾದ ಮಾಳೇಟಿರ ಬಿ. ಅಭಿಮನ್ಯುಕುಮಾರ್ ಅವರ ಹೆಸರೂ ಪ್ರಬಲವಾಗಿರುವದು ತಿಳಿದು ಬಂದಿದೆ.

ಪ್ರಸ್ತುತ ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿರುವ ಸೂರ್ತಲೆ ಸೋಮಣ್ಣ ಅವರ ಬಗ್ಗೆಯೂ ಹಲವರು ಆಸಕ್ತಿ ತೋರಿದ್ದಾರೆನ್ನಲಾಗಿದ್ದು, ಇದರಂತೆ ಅವರು ಕೂಡ ಓರ್ವ ಆಕಾಂಕ್ಷಿಯಾಗಿ ತಮ್ಮ ಬೇಡಿಕೆ ಮುಂದಿಟ್ಟಿದ್ದಾರೆ. ಇವರುಗಳೊಂದಿಗೆ ಜಿಲ್ಲೆಯಲ್ಲಿ ಗೌಡ ಯುವ ಒಕ್ಕೂಟದ ಅಧ್ಯಕ್ಷರಾಗಿರುವ ಪೈಕೇರ ಮನೋಹರ್ ಮಾದಪ್ಪ ಅವರು ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆನ್ನಲಾಗಿದೆ. ಜಿಲ್ಲೆಯಿಂದ ಇವರುಗಳು ಬೇಡಿಕೆ ಮುಂದಿರಿಸಿದ್ದಾರೆ. ನೆರೆ ಜಿಲ್ಲೆಯಿಂದ ಪದ್ಮ ಕೊಲ್ಚಾರ್ ಸೇರಿದಂತೆ ಇನ್ನು ಕೆಲವರು ಅಧ್ಯಕ್ಷಗಿರಿಗೆ ಪ್ರಯತ್ನ ನಡೆಸುತ್ತಿರುವದಾಗಿ ಹೇಳಲಾಗಿದೆ.

ಏನೇ ಇದ್ದರೂ ಸದ್ಯದ ರಾಜಕೀಯ ವಿಚಾರಗಳು ತಿಳಿಯಾದ ಬಳಿಕವಷ್ಟೆ ಅಕಾಡೆಮಿ ಸ್ಥಾನಮಾನದ ವಿಚಾರ ಮುಂದೆ ಬರಲಿದೆ. ಆತನಕ ಒಳಗೊಳಗಿನ ಪ್ರಯತ್ನಗಳು ಹಾಗೆಯೇ ಮುಂದುವರಿಯುವದಂತೂ ಖಚಿತ. ಈ ನೇಮಕಾತಿ ತ್ವರಿತಗತಿಯಲ್ಲಿ ನಡೆದರೂ ಅಚ್ಚರಿಯಿಲ್ಲ. - ಶಶಿ ಸೋಮಯ್ಯ