ಸಂಗೊಳ್ಳಿ ರಾಯಣ್ಣ ಆಗಸ್ಟ್ 15,1796 ರಂದು ಜನಿಸಿದರು. ಅವರು ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟರಾಗಿದ್ದರು. ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪೆನಿಯ ವಿರುದ್ಧ ಜೀವನದ ಕೊನೆತನಕ ಹೋರಾಡಿದರು. ಸ್ವಾತಂತ್ರ್ಯ ದೊರಕಿದ ದಿನಾಂಕದಲ್ಲಿ ಅವರು ಹುಟ್ಟಿದ್ದರು.
ಸಂಗೊಳ್ಳಿ ರಾಯಣ್ಣ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಹುಟ್ಟಿದರು. ತಂದೆ ಭರಮಪ್ಪ, ತಾಯಿ ಕೆಂಚಮ್ಮಾಜಿಯ ಎರಡನೆಯ ಪುತ್ರನಾಗಿ ನಾಯಕ ಸಮುದಾಯದಲ್ಲಿ ಚೈತ್ರ ಪೂರ್ಣಿಮ ದಿನದಂದು ಹುಟ್ಟಿದರು. ಈತ ಎಚ್ಚಮ ನಾಯಕನ ವಂಶಸ್ತನಾಗಿದ್ದರು. ಆದ್ದರಿಂದ ಇವರನ್ನು ರಾಯ ನಾಯಕ, ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ, ಧೀರ ರಾಯಣ್ಣ, ಕ್ರಾಂತೀವರೀ ರಾಯಣ್ಣ ಇತ್ಯಾದಿ ಹೆಸರಿನಿಂದ ಕರೆಯುತ್ತಾರೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರಾಘಪ್ಪ ವೀರಪ್ಪ ಯುದ್ಧದಲ್ಲಿ ತೋರಿದ ಶೌರ್ಯಕ್ಕಾಗಿ ‘ಸಾವಿರ ಒಂಟೆ ಸರದಾರ’ ಎಂಬ ಬಿರುದು ಇತ್ತು. ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣ ತಂದೆ ಭರಮಣ್ಣ ಮಹಾನ್ ಸಾಹಸಿ. ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಹಿಡಿದು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಅರಸರು ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ.
ಜನ್ಮದಾರಭ್ಯದಿಂದ ಮೂವತ್ತೈದು ವರ್ಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ ತನ್ನ ಸರ್ವಸ್ವವನ್ನು ಕಿತ್ತೂರು ನಾಡಿನ ಸ್ವಾತಂತ್ರ್ಯಕ್ಕಾಗಿ ಅರ್ಪಣೆ ಮಾಡಿದವರು ಸಂಗೊಳ್ಳಿ ರಾಯಣ್ಣ. ಬ್ರಿಟೀಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಅವರಿಗೆ ಮರಣ ದಂಡನೆಯಾಗಿ ಗಲ್ಲು ಗಂಬಕೇರಿದ ದಿನ 26ನೆಯ ಜನವರಿ 1831 ಭಾರತ ಗಣರಾಜ್ಯವಾದ ದಿನ. ಸಂಗೊಳ್ಳಿ ರಾಯಣ್ಣನವರ ಜನ್ಮ ಮರಣಗಳೆರಡು ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇವರೊಂದಿಗೆ ಇವರ ಜೊತೆ ಇದ್ದ ಏಳು ಜನ ಅನುಯಾಯಿಗಳನ್ನು ವಿಚಾರಿಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಇಡೀ ಜೀವಮಾನ ಆಂಗ್ಲರನ್ನು ದೇಶದಿಂದ ಹೊರಹಾಕಲು ಮಾಡಿದ ಹೋರಾಟ ಸ್ಮರಣೀಯವಾಗಿದೆ. ಅವರ ಮರಣದ ನಂತರ ಕತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಇವರ ಸಮಾಧಿಯ ಮೇಲೆ ಒಂದು ಆಲದ ಮರ ನೆಟ್ಟರು. ಇಂದು ಆ ಮರ ಬೆಳೆದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯಸ್ಥಳವಾಗಿದೆ. ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶ ಪ್ರೇಮ, ಯುವ ಜನತೆಯಲ್ಲಿ ಸ್ಫೂರ್ತಿ ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶ ಪ್ರೇಮಿಗಳಿರಬೇಕು ಎನ್ನುವದು ಎಲ್ಲರ ಮಾತಾಗಿದೆ. ಇವರ ಹೆಸರು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ.
ಇವರ ಹಾಗೆ ಅನೇಕ ವೀರರು ತಮ್ಮ ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ನಾವು ಇಂದು ಸಂತೋಷವಾಗಿರಲು ಕಾರಣರಾಗಿರುವ ಎಲ್ಲ ಮಹಾತ್ಮರನ್ನು ಸ್ಮರಿಸೋಣ.