ಗೋಣಿಕೊಪ್ಪಲು: ಗೋಣಿಕೊಪ್ಪಲು ವಿವಿಧೆಡೆ ಗಣೇಶ ವಿಸರ್ಜನೋತ್ಸವ ನಡೆಯುತ್ತಿದೆ. ಮಳೆ, ಪ್ರವಾಹಭೀತಿ, ವಾಣಿಜ್ಯ ವ್ಯವಹಾರ ಕುಸಿತದ ಹಾದಿಯಲ್ಲಿದ್ದರೂ ವಿಘ್ನ ವಿನಾಯಕನ ಆರಾಧನೆ ಅಲ್ಲಲ್ಲಿ ನಿರ್ವಿಘ್ನವಾಗಿ ನಡೆಯುತ್ತಿದೆ.
ತಾ.5 ರಂದು ರಾತ್ರಿ ಗೋಣಿಕೊಪ್ಪಲು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ವತಿಯಿಂದ ವಿಜೃಂಭಣೆಯ ಗಣಪತಿ ಮೆರವಣಿಗೆ ಇಲ್ಲಿನ ಮುಖ ರಸ್ತೆಯಲ್ಲಿ ನಡೆಯಿತು. ಇಲ್ಲಿಗೆ ಸಮೀಪ ಹರಿಶ್ಚಂದ್ರಪುರದ ಯುವಕ ಸಂಘದ ಆಶ್ರಯದಲ್ಲಿಯೂ ಗಣಪತಿ ಮೆರವಣಿಗೆ ಮತ್ತು ವಿಸರ್ಜನೋತ್ಸವ ಕಂಡು ಬಂತು.
ಗೋಣಿಕೊಪ್ಪಲಿನ ಕಾಮಾಕ್ಷಿ ಜುವೆಲ್ಲರಿ ಮಾಲೀಕ ಮಂಜುನಾಥ್ ರಾಯ್ಕರ್ ಮತ್ತು ಸ್ನೇಹಿತರು ತಾ. 2 ರಂದು ಗಣಪತಿ ಪ್ರತಿಷ್ಠಾಪನೆ ಮಾಡಿ ಪೂಜಾ ವಿಧಿವಿಧಾನ ನೆರವೇರಿಸಿ ತಾ. 5 ರಂದು ರಾತ್ರಿ ಗಣಪತಿ ವಿಸರ್ಜನೆ ಮಾಡಿದರು.ಕರಿಕೆ: ಇಲ್ಲಿನ ಚೆತ್ತುಕಾಯ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಆಚರಿಸಿಕೊಂಡು ಬರುತ್ತಿರುವ ಮೂವತ್ತೊಂಬತ್ತನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆ ಚೆತ್ತುಕಾಯ ಶಾಲಾ ಆವರಣದಲ್ಲಿ ಗಣಹೋಮದೊಂದಿಗೆ ಮಹಾಗಣಪತಿ ವಿಗ್ರಹ ಪ್ರತಿಷ್ಟಾಪನೆ ಮಾಡಿ ಮಧ್ಯಾಹ್ನ ಮಹಾಪೂಜೆ ನಂತರ ಭಕ್ತರಿಗೆ ಅನ್ನದಾನ ಮಾಡಲಾಯಿತು. ಸಂಜೆ ಪ್ರಮುಖ ರಸ್ತೆಯ ಮೂಲಕ ಎರಡು ಕಿ.ಮೀ. ಮೆರವಣಿಗೆಯಲ್ಲಿ ಸಂಚರಿಸಿ ವಿಸರ್ಜನೆ ಮಾಡಲಾಯಿತು.ವಾಟೆಕಾಡು: ಮರಗೋಡು ಗ್ರಾಮದ ವಾಟೆಕಾಡುವಿನ ಏಕದಂತ ಬಳಗ ವತಿಯಿಂದ ಅದ್ಧೂರಿಯ ಗೌರಿ ಗಣೇಶೋತ್ಸವ ಆಚರಿಸ ಲಾಯಿತು. ಬೆಳಿಗ್ಗೆ 10.30ರ ಸಮಯಕ್ಕೆ ದೇವರನ್ನು ಪ್ರತಿಷ್ಠಾಪಿಸಿ, ಮಹಾಮಂಗಳಾರತಿಯ ನಂತರ ಭಕ್ತರಿಗೆ ಪ್ರಸಾದ ವಿತರಿಸಿ ಅದ್ಧೂರಿಯ ಮೆರವಣಿಯೊಂದಿಗೆ ವಿಸರ್ಜಿಸಲಾಯಿತು.ಗೋಣಿಕೊಪ್ಪಲು: ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳತ್ಮಾಡು ಗೌರಿ ಗಣೇಶ ಉತ್ಸವ ಸಮಿತಿ ಆಶ್ರಯದಲ್ಲಿ ಗೌರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆ ಮಹಾ ಗಣಪತಿ ಹೋಮದೊಂದಿಗೆ ಪೂಜಾ ವಿಧಿ ವಿಧಾನ ನೆರವೇರಿತು.
ಮಧ್ಯಾಹ್ನ ಭಕ್ತಾದಿಗಳಿಗೆ ನೂತನ ಅಧ್ಯಕ್ಷ ಗೊಟ್ಟಡ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ಸಾಮೂಹಿಕ ಭೋಜನ ಏರ್ಪಡಿಸಲಾಗಿತ್ತು. ಅಪರಾಹ್ನ 4 ಗಂಟೆಯ ನಂತರ ಗಣಪತಿಯ ಮೆರವಣಿಗೆ ಬಳಿಕ ಗೊಟ್ಟಡದ ಕೆರೆಯಲ್ಲಿ ವಿಸರ್ಜಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಕತ್ರಿಕೊಲ್ಲಿ ನಂಜುಂಡ ಮುಂತಾದವರು ಪಾಲ್ಗೊಂಡಿದ್ದರು.