ಗೋಣಿಕೊಪ್ಪ ವರದಿ, ಸೆ. 7: ಆನೆಚೌಕೂರು ವ್ಯಾಪ್ತಿಯ ಮೀಸಲು ಅರಣ್ಯಗಳನ್ನು ವನ್ಯಜೀವಿ ಇಲಾಖೆಗೆ ಸೇರಿಸುವದರಿಂದ ಆ ಮಾರ್ಗದಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ ಮಾಡಿದರೆ ಹೋರಾಟಕ್ಕಿಳಿಯುವ ಅನಿವಾರ್ಯತೆ ಇದೆ ಎಂದು ವೀರಾಜಪೇಟೆ ತಾಲೂಕು ಬಿಜೆಪಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಎಚ್ಚರಿಸಿದ್ದಾರೆ.
ರಾತ್ರಿ ಸಂಚಾರಕ್ಕೆ ವಾಹನಗಳಿಗೆ ಅವಕಾಶ ನೀಡದಿದ್ದರೆ ಕೊಡಗಿನ ಜನತೆ ಹೆಚ್ಚು ತೊಂದರೆಗೆ ಸಿಲುಕಿಕೊಳ್ಳಲಿದ್ದಾರೆ. ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚು ನಗರಗಳನ್ನು ಅವಲಂಭಿಸಿರುವದರಿಂದ ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ ಇಂತಹ ಕ್ರಮ ಜಾರಿಗೂ ಮುನ್ನ ಸಾಧಕ-ಬಾಧಕ ಬಗ್ಗೆ ಅರಿತುಕೊಳ್ಳುವದು ಉತ್ತಮ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಾವ ಕಾರಣಕ್ಕೂ ರಾತ್ರಿ ಸಂಚಾರ ನಿರ್ಬಂಧಕ್ಕೆ ಅವಕಾಶ ನೀಡುವದಿಲ್ಲ. ಅಂತಹ ಪ್ರಸ್ತಾವನೆ ಮುಂದಿಡುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇವೆ. ಅವರನ್ನು ವಜಾಗೊಳಿಸುವ ಮೂಲಕ ಕೊಡಗಿನ ಜನರ ಪರವಾಗಿ ನಿಲ್ಲುತ್ತೇವೆ. ಕೊಡಗಿನ ಜನತೆಗೆ ಮೈಸೂರು -ಬೆಂಗಳೂರು ನಗರ ಸಂಚಾರ ಹೆಚ್ಚು ಅವಶ್ಯಕ. ಹುದ್ದೆಯಲ್ಲಿರುವವರು ಮತ್ತು ರೋಗಿಗಳಿಗೆ ಇದೇ ಮಾರ್ಗ ಅವಲಂಭನೆ ಇದೆ. ಇದರಿಂದಾಗಿ ಪ್ರಸ್ತಾವನೆ ಸಲ್ಲಿಸುವಾಗ ನಮ್ಮ ವಿರೋಧವನ್ನು ಪರಿಗಣಿಸಿಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ, ರಘು ನಾಣಯ್ಯ, ಗಿರೀಶ್ ಗಣಪತಿ ಉಪಸ್ಥಿತರಿದ್ದರು.