ಚೆಟ್ಟಳ್ಳಿ, ಸೆ. 7: ಗೌರಿ ಗಣೇಶ ಪ್ರಯುಕ್ತ ಚೆಟ್ಟಳ್ಳಿ ಸಮೀಪದ ಕಾಫಿಸಿಟಿ ಕಾಫಿಬೋರ್ಡ್ ಫುಟ್ಬಾಲ್ ಕ್ಲಬ್ ವತಿಯಿಂದ ಏಕದಿನ ಚೆಟ್ಟಳ್ಳಿ ಗ್ರಾ.ಪಂ. ಮಟ್ಟದ ‘ಸೂಪರ್ ಫೈವ್’ ಕಾಲ್ಚೆಂಡು ಪಂದ್ಯಾಟವು ಚೆಟ್ಟಳ್ಳಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಫೈನಲ್ ಪಂದ್ಯಾಟದಲ್ಲಿ ಬ್ಲೂ ಟೈಗರ್ಸ್ ತಂಡವು 2-1 ಗೋಲುಗಳ ಅಂತರದಿಂದ ಕಾಫಿ ಲವರ್ಸ್ ತಂಡವನ್ನು ಮಣಿಸಿ ಪ್ರಥಮ ಸ್ಥಾನ ಪಡೆಯಿತು. ಕಾಫಿ ಲವರ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಇದಕ್ಕೂ ಮುನ್ನ ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಆತಿಥೇಯ ಕಾಫಿ ಸಿಟಿ ಹಾಗೂ ಕಾಫಿ ಲವರ್ಸ್ ತಂಡಗಳ ನಡುವೆ ನಡೆಯಿತು.
ಕಾಫಿ ಲವರ್ಸ್ ತಂಡವು ರಾಜೇಶ್ ಅವರ ಅಮೋಘ ಒಂದು ಗೋಲಿನ ನೆರವಿನಿಂದ 1-0 ಗೋಲುಗಳ ಅಂತರದಿಂದ ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತು.
ಎರಡನೇ ಸೆಮಿಫೈನಲ್ ಪಂದ್ಯವು ಬ್ಲೂ ಟೈಗರ್ಸ್ ಹಾಗೂ ಎಫ್.ಸಿ ಕಂಡಕರೆ ತಂಡಗಳ ನಡುವೆ ನಡೆಯಿತು.
ಬ್ಲೂ ಟೈಗರ್ಸ್ ತಂಡವು ಮಿಥುನ್ ಹಾಗೂ ಅಜಿತ್ ಅವರ ತಲಾ ಒಂದು ಗೋಲಿನ ಮೂಲಕ 2-0 ಗೋಲುಗಳ ಅಂತರದಿಂದ ಗೆದ್ದಿತು.
ಅತ್ಯುತ್ತಮ ಆಟಗಾರ ಬ್ಲೂ ಟೈಗರ್ಸ್ ತಂಡದ ಅಜಿತ್, ಬೆಸ್ಟ್ ಗೋಲ್ ಕೀಪರ್ ಕಾಫಿ ಲವರ್ಸ್ ತಂಡದ ಭುವನ್ ಪಡೆದುಕೊಂಡರು.
ಜಂಶಾದ್, ಆಲಿ, ಮಿಥುನ್, ಲತೀಫ್, ವಿರೂಪಾಕ್ಷ ತೀರ್ಪು ಗಾರರಾಗಿ ಕಾರ್ಯನಿರ್ವಹಿಸಿದರು.