ಮಡಿಕೇರಿ, ಸೆ. 7: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ 55ನೇ ಎ.ಡಿ. ಶ್ರೋಫ್ ಸ್ಮಾರಕ ಜಿಲ್ಲಾಮಟ್ಟದ ಅಂತರ ಕಾಲೇಜು ಭಾಷಣ ಸ್ಪರ್ಧೆಯು ಯಶಸ್ವಿಯಾಗಿ ನೆರವೇರಿತು. ಜಿಲ್ಲೆಯ ಸುಮಾರು 14 ಕಾಲೇಜುಗಳಿಂದ 24 ಸ್ಪರ್ಧಿಗಳು ಭಾಷಣ ಸ್ಪರ್ಧೆಯಲ್ಲಿ ಪಾಲ್ಗೊಂಡು ಅತ್ಯುತ್ತಮ ರೀತಿಯಲ್ಲಿ ವಿಷಯ ಮಂಡಿಸಿದರು.

‘ಭಾರತದಲ್ಲಿ ಅಂತರ್ಗತ ಬೆಳವಣಿಗೆಯತ್ತ ಅನ್ವೇಷಣೆ’ ‘ರಾಷ್ಟ್ರೀಯ ಆರೋಗ್ಯ ನೀತಿ’ ಹಾಗೂ ಪ್ರಜಾಪ್ರಭುತ್ವದಲ್ಲಿ ಮಾದರಿ ನಾಗರಿಕನ ಪಾತ್ರ’ ಎಂಬ ಮೂರು ಪ್ರಮುಖ ವಿಷಯಗಳ ಬಗ್ಗೆ ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಷಣ ಮಂಡಿಸಿ ದರು. ದೇಶವನ್ನು ರೂಪಿಸುವಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಉತ್ಸಹ ಮೆಚ್ಚುವಂತದ್ದಾಗಿತ್ತು. ಸ್ಪರ್ಧೆಯಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಮೊದಲ ಬಹುಮಾನ ಪಡೆದರೆ, ಕುಶಾಲನಗರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ನದೀರ ಕೆ.ಎಂ. ಎರಡನೇ ಬಹುಮಾನ ಹಾಗೂ ಎಫ್.ಎಂ. ಕೆ.ಎಂ.ಸಿ. ಕಾಲೇಜಿನ ವಿದ್ಯಾರ್ಥಿ ಅವರ್‍ಜೀತ್ ಮೂರನೇ ಸ್ಥಾನ ಪಡೆದರು. ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕಿರಣ್ ಕುಮಾರ್ ಹಾಗೂ ಸೋಮವಾರ ಪೇಟೆಯ ಸಂತ ಜೋಸೆಫರ ಕಾಲೇಜಿನ ಲೋಹಿತ್ ಆರ್.ವಿ. ಸಮಾಧಾನಕರ ಸ್ಥಾನ ಪಡೆದರು.

ಈ ಸ್ಪರ್ಧಾ ಕಾರ್ಯಕ್ರಮವು ಮುಂಬೈನ ‘ಉಚಿತ ಉದ್ಯಮಕ್ಕಾಗಿ ವೇದಿಕೆ’ ವತಿಯಿಂದ ಸಂಘಟಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಫ್.ಎಂ.ಕೆ.ಎಂ.ಸಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಟಿ.ಡಿ. ತಿಮ್ಮಯ್ಯ, ಪ್ರಸ್ತುತ ಪ್ರಾಂಶುಪಾಲ ಡಾ. ಜಗತ್ ತಿಮ್ಮಯ್ಯ, ಉಪನ್ಯಾಸಕರಾದ ಡಾ. ತಿಪ್ಪೇಸ್ವಾಮಿ ಹಾಗೂ ಡಾ. ರೇಣುಶ್ರೀ ಉಪಸ್ಥಿತರಿದ್ದರು.

ಮಡಿಕೇರಿ ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕರಾದ ನೀತಾ ಹೆಗಡೆ, ‘ಶಕ್ತಿ’ಯ ವ್ಯವಸ್ಥಾಪಕಿ ಹಾಗೂ ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ವರದಿಗಾರ್ತಿ ಪ್ರಜ್ಞಾ ಜಿ.ಆರ್. ಹಾಗೂ ಕಾಲೇಜಿನ ಉಪನ್ಯಾಸಕರಾದ ಅಖಿಲಾ ಸ್ಪರ್ಧೆಯ ತೀರ್ಪುಗಾರರಾಗಿ ಉಪಸ್ಥಿತರಿದ್ದರು.