ಮಡಿಕೇರಿ, ಸೆ. 7: ದಕ್ಷಿಣ ಕೊಡಗಿನ ಶ್ರೀಮಂಗಲ, ಹುದಿಕೇರಿ, ಬಿರುನಾಣಿ, ಪೊನ್ನಂಪೇಟೆ ಸುತ್ತಮುತ್ತ ಧಾರಾಕಾರ ಮಳೆಯ ನಡುವೆ, ಉತ್ತರ ಕೊಡಗಿನ ಶಾಂತಳ್ಳಿ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿ ಕಳೆದ 24 ಗಂಟೆಗಳಲ್ಲಿ 5.51 ಇಂಚು ಮಳೆ ದಾಖಲಾಗಿದೆ. ಪರಿಣಾಮ ರೈತಾಪಿ ವರ್ಗ, ಜಾನುವಾರುಗಳ ಮೇವಿಗೂ ಚಳಿಗಾಳಿ, ಮಳೆಯಿಂದ ತೊಂದರೆಯಲ್ಲಿದ್ದಾರೆ.
ಜಿಲ್ಲೆಯ ತಲಕಾವೇರಿ. ಭಾಗಮಂಡಲ, ಸಂಪಾಜೆ ವ್ಯಾಪ್ತಿಯಲ್ಲಿ ಮಳೆ ಸ್ವಲ್ಪ ತಗ್ಗಿದ್ದು, ಈ ಪ್ರದೇಶಗಳಲ್ಲಿ 1.30 ಇಂಚು ಮಳೆ ಗೋಚರಿಸಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಮತ್ತಿತರ ಕಡೆಗಳಲ್ಲಿ 1.32 ಇಂಚು ಮಳೆಯಾಗಿದೆ. ಈ ತಾಲೂಕಿನಲ್ಲಿ ಇದುವರೆಗೆ ಒಟ್ಟು 129.69 ಇಂಚು ಮಳೆ ದಾಖಲಾಗಿದೆ. ಕಳೆದ ಸಾಲಿನಲ್ಲಿ 215.70 ಇಂಚು ಗೋಚರಿಸಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ಒಟ್ಟು 65.47 ಇಂಚು ಮಳೆಯಾದರೆ, ಕಳೆದ ಮುಂಗಾರಿನಲ್ಲಿ ಈ ವೇಳೆಗೆ 118.60 ಇಂಚು ದಾಖಲಾಗಿತ್ತು. ಅತ್ತ ವೀರಾಜಪೇಟೆ ತಾಲೂಕಿನಲ್ಲಿ ಈ ವರ್ಷದಲ್ಲಿ 96.44 ಇಂಚು ಹಾಗೂ ಕಳೆದ ವರ್ಷದ ಅವಧಿಯಲ್ಲಿ 112.67 ಇಂಚು ದಾಖಲಾಗಿತ್ತು. ಶ್ರೀಮಂಗಲ ಸುತ್ತಮುತ್ತ ಕಳೆದ 24 ಗಂಟೆಗಳಲ್ಲಿ 2.55 ಇಂಚು ಮಳೆಯಾಗಿದೆ.
ಉತ್ತರ ಕೊಡಗಿನ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಯ ತೀವ್ರತೆ ನಡುವೆ ಹಟ್ಟಿಹೊಳೆ - ಮಾದಾಪುರ ಹೊಳೆ ಪ್ರವಾಹದಿಂದ ಹಾರಂಗಿ ಜಲಾಶಯಕ್ಕೆ 9404 ಕ್ಯೂಸೆಕ್ಸ್ ನೀರು ಬರುತ್ತಿದೆ. ಕಳೆದ ವರ್ಷ ಈ ವೇಳೆಗೆ ಕೇವಲ 2600 ಕ್ಯೂಸೆಕ್ಸ್ ಗೋಚರಿಸಿತ್ತು.
ದಕ್ಷಿಣ ಕೊಡಗಿನಲ್ಲಿ ಅಬ್ಬರ
ಶ್ರೀಮಂಗಲ: ದ.ಕೊಡಗಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ಶುಕ್ರವಾರ ರಾತ್ರಿ ಹಾಗೂ ಶನಿವಾರ ಹಗಲೂ ಸಹ ಮುಂದುವರೆದಿದೆ. ಲಕ್ಷ್ಮಣತೀರ್ಥ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ನದಿ ಪಾತ್ರದ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ.
ಲಕ್ಷ್ಮಣತೀರ್ಥ ನದಿ ಉಗಮ ಪ್ರದೇಶದಲ್ಲಿ ಧಾರಾಕಾರ ಮಳೆಯಾಗು ತ್ತಿರುವ ಹಿನ್ನೆಲೆ ಈ ನದಿ ಹರಿಯುವ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.
ಬಾಳೆಲೆ - ಮಲ್ಲೂರು ನಡುವೆ ಇರುವ ಸೇತುವೆ ಮುಳುಗಡೆಯಾಗಿದ್ದು, ಬಾಳೆಲೆ-ಕೊಟ್ಟಗೇರಿ ನಡುವಿನ ಸೇತುವೆ ಮುಳುಗಡೆಯಾಗಿದೆ.
ಈ ನದಿಯ ಪ್ರವಾಹದಿಂದ ಕಾನೂರು, ಬಾಳೆಲೆ, ನಿಟ್ಟೂರು, ಬಲ್ಯಮಂಡೂರು, ನಾಲ್ಕೇರಿ ಗ್ರ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿವೆ. ಆಗಸ್ಟ್ ಒಂದು ಹಾಗೂ ಎರಡನೇ ವಾರದಲ್ಲಿ ಈ ವ್ಯಾಪ್ತಿಯಲ್ಲಿ ದೊಡ್ಡ ಮಟ್ಟದ ಪ್ರವಾಹ ಕಾಣಿಸಿಕೊಂಡಿತ್ತು. ಮೊದಲ ಪ್ರವಾಹ ಇಳಿದು ಎರಡು ವಾರದಲ್ಲಿಯೇ ಮತ್ತೆ ಎರಡನೇ ಪ್ರವಾಹದಿಂದ ನಾಟಿ ಮಾಡಿದ್ದ ಭತ್ತದ ಗದ್ದೆ ಸೇರಿದಂತೆ ಹಲವೆಡೆ ರಸ್ತೆ ಸೇತುವೆಗಳು ಮುಳುಗಡೆಯಾಗಿದೆ.
ಶ್ರೀಮಂಗಲ, ಟಿ-ಶೆಟ್ಟಿಗೇರಿ, ಹುದಿಕೇರಿ, ಪೊನ್ನಂಪೇಟೆ, ಬಿರುನಾಣಿ, ಬಲ್ಯಮಂಡೂರು, ಕುಟ್ಟ, ಬಿ-ಶೆಟ್ಟಿಗೇರಿ ಸೇರಿದಂತೆ ದ.ಕೊಡಗಿನ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಿಂದ ಭಾರೀ ಮಳೆಯಾಗುತ್ತಿದೆ.
ಬಿರುನಾಣಿ-ಹುದಿಕೇರಿ ಸಂಪರ್ಕ ರಸ್ತೆ ಪೊರಾಡು ಗ್ರಾಮದ ಕಕ್ಕಟ್ಟ್ ಪೊಳೆ ಸಮೀಪ ಕಳೆದ ತಿಂಗಳು ಕೊಚ್ಚಿ ಹೋಗಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ಮರುಜೋಡಣೆ ಮಾಡಲಾಗಿದ್ದು, ಈ ಸ್ಥಳದಲ್ಲಿ ಮತ್ತೆ ನಿರಂತರ ಮಳೆಯಾಗುತ್ತಿರುವದರಿಂದ ಸ್ವಲ್ಪ ಭಾಗ ಕುಸಿದಿದ್ದು, ಮಳೆ ಮುಂದುವರೆದರೆ ಭೂಕುಸಿತ ಉಂಟಾಗಿ ರಸ್ತೆ ಕುಸಿಯುವ ಆತಂಕ ಎದುರಾಗಿದೆ.