ಮಡಿಕೇರಿ. ಸೆ. 7: ಕುಶಾಲನಗರ ರೋಟರಿ ಕ್ಲಬ್‍ನಿಂದ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ರೋಟರಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಮಾಜಿ ಗವರ್ನರ್ ಆರ್. ಕೃಷ್ಣ, ಶ್ರದ್ಧೆ, ಆಸಕ್ತಿ ಯೊಂದಿಗೆ ಸೇವಾ ಮನೋಭಾವನೆಗಳೇ ರೋಟರಿ ಸದಸ್ಯರ ನಿಜವಾದ ಗುಣವಾಗಿದ್ದು ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸೇವಾ ಯೋಜನೆಗಳಿಗೆ ರೋಟರಿ ಸದಸ್ಯರು ಮುಂದಾಗುವಂತೆ ಕರೆ ನೀಡಿದರು.
ಇಂಟರ್ಯಾಕ್ಟ್ ವಿದ್ಯಾರ್ಥಿಗಳೇ ರೋಟರಿಯ ಭವಿಷ್ಯವಾಗಿದ್ದು ವಿದ್ಯಾರ್ಥಿ ಹಂತದಲ್ಲಿಯೇ ಸೇವಾ ಮನೋಭಾವನೆಯನ್ನು ರೋಟರಿ ಇಂಟರ್ಯಾಕ್ಟ್ ಮೂಲಕ ಮೂಡಿಸುತ್ತದೆ ಎಂದೂ ಕೃಷ್ಣ ಹೇಳಿದರು. ಪರಿಸರ ಮೊದಲಿಗಿಂತ ಬದಲಾಗಿದ್ದು ದಿನದಿನಕ್ಕೂ ನಿಸರ್ಗವನ್ನು ಮಾಲಿನ್ಯಗೊಳಿಸುತ್ತಾ ಬಂದಿದ್ದೇವೆ. ಪರಿಸರ ಮಾಲಿನ್ಯ ತಡೆಗೆ ಆದ್ಯತೆ ನೀಡಬೇಕಾಗಿದ್ದು ಪ್ರತಿಯೋರ್ವರ ಕರ್ತವ್ಯ ಎಂದು ಕೃಷ್ಣ ಹೇಳಿದರು.
ರೋಟರಿ ಜಿಲ್ಲೆಯ ಸಹಾಯಕ ಗವರ್ನರ್ ಪಿ. ನಾಗೇಶ್ ಮಾತನಾಡಿ, ಸೇವ್ ಎ ಲೈಫ್ ಎಂಬದು ರೋಟರಿ ಜಿಲ್ಲೆಯ ಪ್ರಮುಖ ಯೋಜನೆಗಳ ಲ್ಲೊಂದಾಗಿದ್ದು ಈ ನಿಟ್ಟಿನಲ್ಲಿ ಪ್ರಥಮ ಚಿಕಿತ್ಸೆಯ ಅರಿವಿನ ಕಾರ್ಯಾಗಾರ ಶ್ಲಾಘನೀಯ ಎಂದರು.
ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ಆರೋಗ್ಯ ಬಿಗಡಾಯಿಸಿದ ಸಂದರ್ಭ ಅಥವಾ ಅಪಘಾತಗಳಾದ ಸಂದರ್ಭ ವೈದ್ಯರಲ್ಲಿಗೆ ಕರೆದೊಯ್ಯುವ ಮುನ್ನ ಪ್ರಥಮ ಚಿಕಿತ್ಸೆ ನೀಡಿದರೆ ಗಾಯಾಳುವಿಗೆ ಸಾಂತ್ವನ ದೊರಕುತ್ತದೆ ಯಲ್ಲದೇ ಜೀವ ಉಳಿಸಲೂ ಈ ಮೊದಲ ಚಿಕಿತ್ಸೆ ನೆರವಾಗುತ್ತದೆ. ಪ್ರಥಮ ಚಿಕಿತ್ಸಾ ವಿಧಾನಗಳನ್ನು ಪ್ರತಿಯೋರ್ವರೂ ಅರಿತರೆ ಹಲವಷ್ಟು ಜೀವ ರಕ್ಷಿಸಲು ಸಾಧ್ಯ ಎಂದರು. ಪ್ರಥಮ ಚಿಕಿತ್ಸೆಯ ಕುರಿತು ಪಠ್ಯಗಳಲ್ಲಿ ಮಾಹಿತಿ ಅಳವಡಿಸುವ ಅಗತ್ಯವಿದೆ ಎಂದೂ ಅನಿಲ್ ಹೇಳಿದರು.
ಕುಶಾಲನಗರ ರೋಟರಿ ಅಧ್ಯಕ್ಷ ಅಶೋಕ್ ಎಂ.ಡಿ. ಮಾತನಾಡಿ, ಫಾತಿಮಾ ಹೈಸ್ಕೂಲ್, ಫಾತಿಮಾ ಪ್ರಾಥಮಿಕ ಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳ 150 ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ತಿಳುವಳಿಕೆ ಕಾರ್ಯಾಗಾರ ಆಯೋಜಿಸಲಾಗಿದ್ದು ಮುಂದಿನ ದಿನಗಳಲ್ಲಿಯೂ ಜೀವರಕ್ಷಣೆಯ ತಿಳುವಳಿಕೆ ಸಂಬಂಧಿತ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಜೋನಲ್ ಲೆಫ್ಟಿನೆಂಟ್ ಪ್ರಕಾಶ್, ರೋಟರಿ ಕಾರ್ಯದರ್ಶಿ ಸಂಜು ಬೆಳ್ಯಪ್ಪ, ರೋಟರಿ ಜಿಲ್ಲಾ ಸದಸ್ಯತ್ವ ನೋಂದಣಿ ಸಮಿತಿ ಅಧ್ಯಕ್ಷ ಕ್ರೆಜ್ವಲ್ ಕೋಟ್ಸ್, ಮಾಜಿ ಸಹಾಯಕ ಗವರ್ನರ್ ಮಹೇಶ್ ನಲ್ವಾಡೆ, ಇಂಟರ್ಯಾಕ್ಟ್ ಸಮಿತಿ ಅಧ್ಯಕ್ಷ ಇನ್ನರ್ ವೀಲ್ ಅಧ್ಯಕ್ಷೆ ಕವಿತಾಸಾತಪ್ಪನ್, ಸದಸ್ಯರು ಹಾಜರಿದ್ದರು.
ಸೌಟ್ಕ್ ಅಂಡ್ ಗೈಡ್ಸ್‍ನ ಮೈಸೂರು ವಿಭಾಗದ ರಾಷ್ಟ್ರಪ್ರಶಸ್ತಿ ಪಡೆದ ತರಬೇತುದಾರರಾದ ಅನೀಶ್ ಮತ್ತು ಸುಖೇಶ್ ಮನಮುಟ್ಟುವ ರೀತಿಯಲ್ಲಿ ಪ್ರಥಮ ಚಿಕಿತ್ಸಾ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪ್ರಾತಕ್ಷಿಕೆ ಮೂಲಕ ತಿಳಿಸಿದರು.