ಸುಂಟಿಕೊಪ್ಪ, ಸೆ. 7: ಸೆಪ್ಟೆಂಬರ್‍ನಲ್ಲಿ ಮತ್ತೆ ಮಳೆಯ ಆರ್ಭಟದಿಂದ ನಾಟಿ ಮಾಡಿದ ಗದ್ದೆಗೆ ನೀರು ನುಗ್ಗಿ ಫಸಲು ಕೈ ಕೊಡಲಿದ್ದು ರೈತರು ಚಿಂತಾಕ್ರಾಂತರಾಗಿದ್ದಾರೆ.

ಆಗಸ್ಟ್‍ನಲ್ಲಿ ಸುರಿದ ಮಳೆಗೆ ಕಾಫಿ ನೆಲಕಚ್ಚಿದ್ದು, ರೈತರು ಕಷ್ಟಪಟ್ಟು ನಾಟಿ ಕಾರ್ಯ ಮುಗಿಸಿದ್ದ ಗದ್ದೆ ಜಲಾವೃತಗೊಂಡಿದೆ. ಎಮ್ಮೆಗುಂಡಿ, ಅಂದಗೋವೆ, ಪನ್ಯ, ನಾಕೂರು, ಕಂಬಿಬಾಣೆ, ಹಾರ್‍ಬೈಲ್ ಮೊದಲಾದೆಡೆ ರೈತರಿಗೆ ಮಳೆ ಪ್ರವಾಹದಿಂದ ನಷ್ಟವಾಗಿದೆ.

ಮತ್ತೊಂದೆಡೆ ಪೈರಿಗೆ ಕೀಟಭಾದೆ ತಗುಲಿದ್ದು,ಫಸಲು ಕೈಕೊಡುವ ಲಕ್ಷಣ ಇದೆ. ಜಲಪ್ರಳಯ, ಕಾಡಾನೆ ಹಾವಳಿಯಿಂದ ಮುಂದೆ ಜೀವನ ಕಷ್ಟವಾಗುತ್ತದೆ. ಶಾಲಾ ಮಕ್ಕಳ ಶಿಕ್ಷಣದ ವೆಚ್ಚ, ಕೂಲಿ ಕಾರ್ಮಿಕರ ಸಂಬಳ ಎಲ್ಲವನ್ನು ಫಸಲು ಕೈಕೊಟ್ಟರೆ ನಿಭಾಯಿಸುವದು ಹೇಗೆ ಎಂದು ಬೆಳೆಗಾರರು ಚಿಂತಿಸುವಂತಾಗಿದೆ. ರೈತರ ಸಾಲ ಮನ್ನಾ ಮಾಡುವಂತಾಗಬೇಕೆಂದು ಆಗ್ರಹಿಸಿದ್ದಾರೆ.