ಮಡಿಕೇರಿ, ಸೆ. 6: ಹೋಂ ಸ್ಟೇ ನೋಂದಣಿಗೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸುವದು ಹಾಗೂ ಹೊಸದಾಗಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಹೋಂ ಸ್ಟೇ ನೋಂದಣಿ ಸಂಬಂಧ ಅಗತ್ಯ ದಾಖಲೆಗಳನ್ನು ಪಡೆಯಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾ ಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು ಹೋಂ ಸ್ಟೇ ನೋಂದಣಿ ಸಂಬಂಧ ಸಲ್ಲಿಕೆ ಯಾಗಿರುವ ಅರ್ಜಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪರಿಶೀಲಿಸಿ ಮುಂದಿನ ಕ್ರಮವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ರಾಘವೇಂದ್ರ ಜಿಲ್ಲೆಯಲ್ಲಿ 961 ಅರ್ಜಿಗಳು ಆನ್‍ಲೈನ್ ಮೂಲಕ ನೋಂದಣಿಯಾಗಿವೆ. ಇದರಲ್ಲಿ 684 ಮಂದಿ ಹಣ ಪಾವತಿಸಿದ್ದಾರೆ. 224 ಹೋಂ ಸ್ಟೇಗಳಿಗೆ ಅನುಮೋದನೆ ನೀಡಲಾಗಿದೆ. ಹಾಗೆಯೇ 95 ಹೋಂ ಸ್ಟೇಗಳನ್ನು ಪರಿಶೀಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಅವರು ಮಾತನಾಡಿ, ಹೋಂ ಸ್ಟೇ ಸಂಬಂಧ ಪ್ರವಾಸೋದ್ಯಮ, ಪೊಲೀಸ್, ಅರಣ್ಯ ಹಾಗೂ ಪಂಚಾಯತ್ ರಾಜ್ ಇಲಾಖೆಗಳು ಸ್ಥಳ ಪರಿಶೀಲಿಸುವದು ಒಳ್ಳೆಯದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಮೋಂತಿ ಗಣೇಶ್ ಅವರು ಬಾಡಿಗೆ ಪಡೆದು ಹೋಂ ಸ್ಟೇ ನಡೆಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ಅಧಿಕೃತ ಹೋಂ ಸ್ಟೇಗಳಿಗೆ ಪ್ರವಾಸಿಗರು ಬರುತ್ತಿಲ್ಲ ಎಂದು ಅವರು ಸಭೆಯ ಗಮನಕ್ಕೆ ತಂದರು.
ಓಯೋ ಹೆಸರಿನಲ್ಲಿ ಹೋಂ ಸ್ಟೇಗಳು ಹೆಚ್ಚಾಗುತ್ತಿವೆ. ಈ ಹೋಂ ಸ್ಟೇಗಳಲ್ಲಿ ಮಾಲೀಕರು ಇದ್ದರು ಸಹ ಇತರರು ಹೋಂ ಸ್ಟೇ ನಡೆಸುತ್ತಾರೆ. ಇಂತಹ ಹೋಂ ಸ್ಟೇಗಳನ್ನು ಪರಿಶೀಲಿಸುವಂತಾಗಬೇಕು ಎಂದು ಮನವಿ ಮಾಡಿದರು.
ಇದೇ ಸೆಪ್ಟೆಂಬರ್, 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಯನ್ನು ಅಚ್ಚುಕಟ್ಟಾಗಿ ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಹೋಂ ಸ್ಟೇ ಅಸೋಷಿಯೇಷನ್ ಸಹ ಕಾರ್ಯದರ್ಶಿ ಬಿ.ಜಿ. ಅನಂತಶಯನ ಅವರು ಮಾತನಾಡಿ ಪ್ರವಾಸೋದ್ಯಮ ಛಾಯಾಚಿತ್ರ ವಸ್ತು ಪ್ರದರ್ಶನ
(ಮೊದಲ ಪುಟದಿಂದ) ಏರ್ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಹೊಟೇಲ್ ಅಸೋಸಿಯೇಷನ್ ಸಲಹೆಗಾರ ಜಿ.ಚಿದ್ವಿಲಾಸ್ ಅವರು ಮಾತನಾಡಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಆಹಾರ ಮೇಳ ಆಯೋಜಿಸುವಂತಾಗಬೇಕು. ಸ್ವಸ್ಥ, ಕೊಡಗು ವಿದ್ಯಾಲಯದ ಆಪರ್ಚುನಿಟಿ ಶಾಲೆ ಮಕ್ಕಳು ಹಾಗೂ ಬಾಲ ಮಂದಿರ ಮಕ್ಕಳಿಗೆ ದುಬಾರೆಯಲ್ಲಿ ಅಂದು ಉಚಿತ ಬೋಟಿಂಗ್‍ಗೆ ಅವಕಾಶ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು.
ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಕೊಡವ ಹೆರಿಟೇಜ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಮಲ್ಲಳ್ಳಿ ಜಲಪಾತದಲ್ಲಿ ಮೆಟ್ಟಿಲುಗಳ ನಿರ್ಮಾಣ, ರೈಮ್ಸ್, ಪಾರ್ಕಿಂಗ್ ಮಳಿಗೆ ಮುಂತಾದ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.
ರಾಜಾಸೀಟು ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಕಾಮಗಾರಿ ಕೈಗೊಳ್ಳಲಾಗುವದು ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ ಅವರು ಮಾಹಿತಿ ನೀಡಿದರು. ದುಬಾರೆ ಕಾವೇರಿ ನದಿ ತೀರದ ಬಳಿ ವಾಹನ ನಿಲುಗಡೆ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕುನಾಡು ಅರಮನೆ ಸಂಪರ್ಕ ರಸ್ತೆ ಅಭಿವೃದ್ಧಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಮಗಾರಿ ಪ್ರಾರಂಭಿಸಬೇಕಿದೆ ಎಂದು ಇಬ್ರಾಹಿಂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿದ್ವಿಲಾಸ್ ಅವರು ನಾಲ್ಕುನಾಡು ಅರಮನೆಯ ಕಟ್ಟಡ ಶಿಥಿಲಗೊಂಡು ಬೀಳುವಂತಾಗಿದೆ. ಈ ಬಗ್ಗೆ ಗಮನಹರಿಸಬೇಕಿದೆ ಎಂದು ಅವರು ಸಲಹೆ ಮಾಡಿದರು. ಈ ಸಂಬಂಧ ಮಾತನಾಡಿದ ಜಿಲ್ಲಾಧಿಕಾರಿ ಅವರು ನಾಲ್ಕುನಾಡು ಅರಮನೆಯನ್ನು ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲಿಸಿ ವರದಿ ನೀಡುವಂತೆ ಪ್ರವಾಸೋದ್ಯಮ ಅಧಿಕಾರಿಗೆ ಸೂಚಿಸಿದರು.
ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ದುಬಾರೆಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಬೇಕು. ಸಮಯ ನಿಗದಿ ಮಾಡಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯ ಕ್ರಿಸ್ತರಾಜ ಅವರು ಸಾಮಾನ್ಯ ಪ್ರವಾಸೋದ್ಯಮವೇ ಬೇರೆ, ಅರಣ್ಯ ಪ್ರವಾಸೋದ್ಯಮ ವಿಭಿನ್ನವಾಗಿದ್ದು, ಪ್ರತೀ ದಿನ 300 ಮಂದಿಗೆ ಅವಕಾಶ ನೀಡಬಹುದಾಗಿದೆ ಎಂದು ತಿಳಿಸಿದರು.
ಇರ್ಪು ಜಲಪಾತ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವದರಿಂದ ಸಾರ್ವಜನಿಕರ ವೀಕ್ಷಣೆಗೆ ಮುಚ್ಚಲಾಗಿದೆ. ಮಳೆ ನಂತರ ಅಗತ್ಯ ಕ್ರಮ ವಹಿಸಲಾಗುವದು ಎಂದು ಡಿಎಫ್‍ಓ ಮರಿಯ ಕ್ರಿಸ್ತರಾಜ ಅವರು ತಿಳಿಸಿದರು.
ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಅವರು ದುಬಾರೆಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸುವ ಸಂಬಂಧ ಅಗತ್ಯ ಕ್ರಮವಹಿಸುವ ಬಗ್ಗೆ ಮಾಹಿತಿ ನೀಡಿದರು. ದುಬಾರೆಯಲ್ಲಿ ಕಾವೇರಿ ನದಿಗೆ ತೂಗು ಸೇತುವೆ ನಿರ್ಮಾಣಕ್ಕಾಗಿ ಅನುಮೋದನೆ ಹಾಗೂ ಚೇಲಾವರ ಜಲಪಾತ ಮೂಲ ಸೌಲಭ್ಯ ಅಭಿವೃದ್ಧಿ ಮತ್ತಿತರ ಬಗ್ಗೆ ಚರ್ಚೆ ನಡೆಯಿತು.
ಪ್ರಸಕ್ತ ಸಾಲಿನಲ್ಲಿ ನೂತನ ಕಾಮಗಾರಿ ಕೈಗೊಳ್ಳಲು ಅನುಮೋದನೆ ದೊರೆತಿದ್ದು, ರೂ. 510 ಲಕ್ಷ ಬಿಡುಗಡೆಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಓಂಕಾರೇಶ್ವರ ದೇವಸ್ಥಾನ ಬಳಿ 100 ಮಿ. ಸಿಸಿ ರಸ್ತೆ ನಿರ್ಮಾಣ ಮತ್ತು ವಾಹನ ನಿಲುಗಡೆ ಅಭಿವೃದ್ಧಿ ಕಾಮಗಾರಿ ರೂ. 49 ಲಕ್ಷ, ರಾಜಾಸೀಟಿಗೆ ತೆರಳುವ ರಸ್ತೆಗೆ ಬ್ಯಾರಿಕೇಡ್ ನಿರ್ಮಾಣ, ಪಾಥ್ ವೇ, ರೈಲಿಂಗ್ಸ್ ಕಾಮಗಾರಿ ನಿರ್ಮಾಣ ರೂ. 57 ಲಕ್ಷ, ದುಬಾರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣ ರೂ. 130 ಲಕ್ಷ, ಕಾವೇರಿ ನದಿ ಬಳಿ ಸೋಪಾನ ಕಟ್ಟೆ ಹಾಗೂ ಉದ್ಯಾನವನ ನಿರ್ಮಾಣ ರೂ. 175 ಲಕ್ಷ, ರಾಜಾಸೀಟು ಬಳಿ ಕೂರ್ಗ್ ವಿಲೇಜ್ ಕೊಡಗು ಶಾಪಿಂಗ್ ಕೇಂದ್ರ ಕಾಮಗಾರಿ ನಿರ್ಮಾಣ ರೂ. 98 ಲಕ್ಷ, ಒಟ್ಟು ರೂ. 510 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಸರ್ಕಾರದಿಂದ ಅನುಮೋದನೆ ದೊರೆತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಟ್ರಾವೆಲ್ ಕೂರ್ಗ್ ಅಸೋಸಿಯೇಷನ್ ಅಧ್ಯಕ್ಷ ಸತ್ಯ ಅವರು ಕೊಡವ ಹೆರಿಟೇಜ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಬೇಕಿದೆ ಎಂದರು. ಹೊಟೇಲ್ ಅಸೋಸಿಯೇಷನ್ ಖಜಾಂಜಿ ಭಾಸ್ಕರ್, ಉಪಾಧ್ಯಕ್ಷ ಜಾಹೀರ್ ಅಹಮದ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್, ಸಹಾಯಕ ಪರಿಸರ ಅಧಿಕಾರಿ ಸುಧಾ, ವಸಂತ, ಚಿಣ್ಣಪ್ಪ ಲೀಲಾ ರಾಮ್ ಇತರರು ಇದ್ದರು.