ನವದೆಹಲಿ, ಸೆ. 6: ಬಾಣೆ ಜಾಗವೊಂದರ ಹಂಚಿಕೆ ಸಂಬಂಧ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ವಿವಾದ ನಡೆದಾಗ ಕೊಡಗಿನ ಬಾಣೆ ಜಾಗ ವಿಭಾಗೀಕರಣವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಯಾವದೇ ಆಕ್ಷೇಪವಿಲ್ಲದೆ ಪರಿಗಣಿಸಿದ ಸಂದರ್ಭ ಒದಗಿಬಂದಿತು. ಇದರಿಂದಾಗಿ ಬಾಣೆ ಜಾಗದ ಮೇಲಿನ ಸ್ವಾಧೀನ ಹಕ್ಕು ಪ್ರತಿಪಾದಿಸಲ್ಪಟ್ಟಂತಾಗಿದೆ.ಬಲ್ಯಮಂಡೂರು ಗ್ರಾಮದ 10 ಎಕರೆ ಪ್ರದೇಶದಲ್ಲಿ ಮಾಚಿಮಾಡ ಬೆಳ್ಯಪ್ಪ ಮತ್ತು ಇತರ 5 ಮಂದಿ ಬಾಣೆ ಜಮೀನು ವಿಭಾಗೀಕರಣ ಮಾಡಿಕೊಂಡಿದ್ದು ತನಗೂ ಆ ಭೂಮಿಯಲ್ಲಿ ಹಕ್ಕು ನೀಡಬೇಕು ಎಂದು ಕೊಟ್ಟಂಗಡ ಬಿ. ಮೋಟಯ್ಯ ಎಂಬವರು ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಬಲ್ಯಮಂಡೂರುವಿನ ಮಾಚಿಮಾಡ ಬೆಳ್ಯಪ್ಪ ಮತ್ತು ಇತರ ಐವರನ್ನು ಪ್ರತಿವಾದಿಗಳನ್ನಾಗಿಸಿ ಅರ್ಜಿ ಸಲ್ಲಿಸಿದ್ದು ಅಲ್ಲಿ ಅವರಿಗೆ ಯಶಸ್ಸು ದೊರಕಿರಲಿಲ್ಲ. ಬಳಿಕ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ಇತ್ತೀಚೆಗೆ ದ್ವಿ ಸದಸ್ಯ ಪೀಠದ ನ್ಯಾಯಾಧೀಶರುಗಳಾದ ಜೆ. ನವೀನ್ ಸಿನ್ಹ ಮತ್ತು ಜೆ. ಇಂದಿರಾ ಬ್ಯಾನರ್ಜಿ ಇವರುಗಳು ತೀರ್ಪು ನೀಡಿದರು. ಮೇಲ್ಮನವಿದಾರರು ಹರಿಹರ ಗ್ರಾಮದಲ್ಲಿ ನೆಲೆಸಿದ್ದಾರೆ. ಬಲ್ಯಮಂಡೂರಿನಲ್ಲಿ ಯಾವದೇ ಗದ್ದೆ ಪ್ರದೇಶವನ್ನು ಹೊಂದಿಲ್ಲ. ಮೇಲ್ಮನವಿದಾರರು ತನಗೆ ಬಲ್ಯಮಂಡೂರಿವಿನಲ್ಲಿ ಗದ್ದೆ ಪ್ರದೇಶವಿದೆ ಎಂದು ವಾದಿಸಿದರೂ ಅದರ ಸರ್ವೆ ನಂ. ಬಗ್ಗೆಯೂ ತಿಳಿವಳಿಕೆಯಿಲ್ಲ ಎನ್ನುವ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಆದರೆ, ಈ ನಡುವೆ ವಾದ ವಿವಾದ ನಡೆದಾಗ 10 ಎಕರೆ ಬಾಣೆ ಜಮೀನನ್ನು ಆರು ಮಂದಿ ಪ್ರತಿವಾದಿಗಳು ವಿಭಾಗೀಕರಣ ಮಾಡಿ ಹಂಚಿಕೊಂಡಿರುವ ವಿಚಾರಬಂದಾಗ ಅದನ್ನು ನ್ಯಾಯಾಲಯ ಪರಿಗಣಿಸಿದೆ. ವಾದಿಗಳ ಪರ ವಕೀಲರು ಕೊಡಗಿನ ಭೂಕಂದಾಯ ಅಧಿನಿಯಮದ ಅನ್ವಯ ಜಮ್ಮಾ ಬಾಣೆಯನ್ನು ಈರೀತಿ ವಿಭಾಗೀಕರಣ ಮಾಡುವಂತಿಲ್ಲ ಎಂದು ವಾದಿಸಿದರೂ ಈ ವಾದವನ್ನು ನ್ಯಾಯಾಧೀಶರು ತಳ್ಳಿಹಾಕಿದ್ದು ಬಾಣೆ ಜಮೀನುದಾರರಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಒಂದು ರೀತಿ ಬಾಣೆ ಜಾಗದ ಮೇಲಿನ ಪರಿಮಿತಿಯ ಸ್ವಾಮ್ಯ ಬಾಣೆದಾರರಿಗಿದೆ ಎಂಬದನ್ನು ಪರಿಗಣಿಸಿದಂತಾಗಿರುವದು ಮಹತ್ವ ಪಡೆದಿದೆ.

ಮೇಲ್ಮನವಿದಾರರ ಪರ ವಕೀಲರು ತಮ್ಮ ವಾದದಲ್ಲಿ ಕೊಡಗಿನ ಭೂಕಂದಾಯ ಕಾಯ್ದೆಯನ್ವಯ ಬಾಣೆ ಜಾಗದ ಮೇಲೆ ಜಮೀನುದಾರರಿಗೆ ಒಡೆತನವಿಲ್ಲದಿರುವದರಿಂದ ಅಂತಹ ಜಾಗವನ್ನು ವಿಭಾಗೀಕರಣ ಮಾಡಿ ಹಂಚುವಂತಿಲ್ಲ ಎಂದು ವಾದಿಸಿದ್ದರು. ಬಾಣೆ ಜಾಗವು “ಕೂರ್ಗ್ ಲ್ಯಾಂಡ್ ಮತ್ತು ರೆವಿನ್ಯೂ ರೆಗ್ಯುಲೇಷನ್”ಗೆ ಒಳಪಟ್ಟಿದೆ.

(ಮೊದಲ ಪುಟದಿಂದ) ಸರಕಾರವು ಈ ಭೂಮಿಯನ್ನು ಮಂಜೂರು ಮಾಡಿದ್ದರೂ ಕೇವಲ ಜಾನುವಾರುಗಳಿಗೆ ಮೇವಿನ ಮೈದಾನವಾಗಿ ಮಾತ್ರ್ರ ಬಳಸಬಹುದಾಗಿದೆ ಎನ್ನುವ ವಾದ ಕೇಳಿಬಂದಿತು. ಇದನ್ನು ತಮ್ಮ ತೀರ್ಪಿನಲ್ಲಿ ಪ್ರಸ್ತಾಪಿಸಿದ ನ್ಯಾಯಾಧೀಶರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದ ಸಂದರ್ಭವೇ ಈ ಕುರಿತು ವಾದಿಗಳು ಪ್ರಸ್ತಾಪಿಸಬೇಕಿತ್ತು. ಮೇಲ್ಮನವಿ ಸಂದರ್ಭ ಇದನ್ನು ಪರಿಗಣಿಸಲಾಗುವದಿಲ್ಲ ಎಂದಿದ್ದಾರೆ.

ಬಾಣೆ ಜಾಗಗಳು ಅವುಗಳ ಸನಿಹದಲ್ಲಿ ಒತ್ತಿಕೊಂಡಂತಿರುವ ಖಾಸಗಿ ಜಾಗಗಳ ಬಳಿಯೇ ಇರುತ್ತವೆ. ಆ ಜಾಗಗಳನ್ನು “ವರ್ಗ” ಭೂಮಿಯೆಂದು ಕರೆಯಲಾಗುತ್ತದೆ. ಬಾಣೆ ಜಾಗದ ಸನಿಹದಲ್ಲಿರುವ ಖಾಸಗಿ ಗದ್ದೆಯ ಒಡೆತನ ಹೊಂದಿರುವವರೇ ಈ ಬಾಣೆ ಜಾಗದ ಸ್ವಾಧೀನವನ್ನೂ ಪಡೆಯುತ್ತಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ವಿಶೇಷವೆಂದರೆ ಪ್ರತಿವಾದಿಗಳ ಪರ ವಾದಿಸಿದ ವಕೀಲರು ತಮ್ಮ ವಾದ ಸಂದರ್ಭ ಜಮ್ಮಾ ಬಾಣೆಯು 1964 ರ ಕರ್ನಾಟಕ ಭೂಕಂದಾಯ ಕಾಯ್ದೆಗೂ ಅನ್ವಯಿಸುತ್ತದೆ ಎಂದು ಪ್ರಸ್ತಾಪಿಸಿದ್ದಾರೆ. ಈ ಹಿಂದೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮಾಚೆಟ್ಟಿರ ಮಾಚಯ್ಯ ಮತ್ತಿತರರು ಹಾಗೂ ಮಾಚೆಟ್ಟಿರ ಕಾರ್ಯಪ್ಪ ಹಾಗೂ ಮತ್ತೋರ್ವರ ನಡುವೆಯ ಪ್ರಕರಣದಲ್ಲಿಯೂ ಕರ್ನಾಟಕ ಕಂದಾಯ ಕಾಯ್ದೆಯನ್ನು ಪ್ರಸ್ತಾಪಿಸಲಾಗಿತ್ತು ಎಂದಿದ್ದಾರೆ.

ಕೊಡಗು ಭೂಕಾಯ್ದೆಗೆ ಸೀಮಿತವಾಗದೆ ಕರ್ನಾಟಕದ ಕಾಯ್ದೆಯನ್ವಯವೇ ಬಾಣೆ ಜಾಗ ವಿವಾದಗಳನ್ನು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬಹುದಾಗಿದೆ ಎಂದು ಪ್ರತಿವಾದಿಗಳ ಪರ ವಕೀಲರು ಸಮರ್ಥಿಸಿದ್ದು ಈ ಬಗ್ಗೆ ನ್ಯಾಯಾಲಯವೂ ಆಕ್ಷೇಪಣೆ ಮಾಡದಿರುವದರಿಂದ ಬಾಣೆ ಜಾಗಗಳಿಗೆ ವಿಶಾಲ ಕಾನೂನಾತ್ಮಕ ಪರಿಗಣನೆ ಲಭಿಸಿದಂತಾಗಿದೆ. ಈ ವಿಚಾರವನ್ನು ಕೂಡ ತೀರ್ಪಿನ ಸಂದರ್ಭ ಪರಿಗಣಿಸಿ ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಇದರಿಂದಾಗಿ ಬಾಣೆ ಜಾಗವು ರಾಜ್ಯ ಕಂದಾಯ ಕಾಯ್ದೆಗೆ ಒಳಪಟ್ಟಿರುವದು ಖಾತರಿಯಾದಂತಾಗಿದೆ.