ಮಡಿಕೇರಿ, ಸೆ. 6: ಪ್ರಸಕ್ತ ಸಾಲಿನ ಮುಂಗಾರು ಮಳೆ ಕಳೆದ ವರ್ಷಕ್ಕಿಂತ ವಿಭಿನ್ನ ರೀತಿಯಲ್ಲಿ ಕೊಡಗು ಜಿಲ್ಲೆಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಬಾರಿ ಆಗಸ್ಟ್ ತಿಂಗಳ 6 ರಿಂದ ಈ ತನಕ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 46.35 ಇಂಚಿನಷ್ಟು ಮಳೆ ಸುರಿದಿದೆ. ಇದು ಜಿಲ್ಲೆಯ ಸರಾಸರಿ ಅಂಕಿ ಅಂಶವಷ್ಟೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ ಒಂದೊಂದು ಜಾಗದಲ್ಲಿ ಒಂದೊಂದು ರೀತಿಯಾಗಿದೆ. ಕೆಲವೆಡೆ ಇದೇ ಒಂದು ತಿಂಗಳ ಅವಧಿಯಲ್ಲಿ ಸುಮಾರು 60 ರಿಂದ 75 ಇಂಚಿನಷ್ಟು ಧಾರಾಕಾರ ಮಳೆ ಕೇವಲ 30 ದಿವಸಗಳ ಅವಧಿಯಲ್ಲಿ ಸುರಿದಿದ್ದು, ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗು ಜಿಲ್ಲೆಯಲ್ಲಿನ ಕಾಫಿ, ಭತ್ತ ಕರಿಮೆಣಸು ಮತ್ತಿತರ ಕೃಷಿ ಫಸಲಿಗೆ ತೀರಾ ಹಾನಿಯಾಗಿರುವದು, ಆಗುತ್ತಿರುವದು ಒಂದೆಡೆಯಾದರೆ ಹಲವೆಡೆ ಜಲಪ್ರವಾಹದಿಂದಾಗಿ ಬಹಳಷ್ಟು ಮಂದಿ ಮನೆ ಮಠಗಳನ್ನು ಕಳೆದುಕೊಂಡಿದ್ದು, ನಿರಾಶ್ರಿತ ರಾಗಿರುವದು ಜೀವ ಹಾನಿಯಾಗಿರುವ ಪರಿಸ್ಥಿತಿ ಮತ್ತೊಂದೆಡೆಯಾಗಿದೆ.

ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಸರಾಸರಿ 1.94 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಬೇಸಿಗೆ ಸಂದರ್ಭದಿಂದಲೇ ಮಳೆಯಾಗಿದ್ದ ಹಿನ್ನೆಲೆಯಲ್ಲಿ 151.31 ಇಂಚು ಮಳೆಯಾಗಿತ್ತು. ಪ್ರಸಕ್ತ ವರ್ಷ 97.27 ಇಂಚು ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 2.62 ಇಂಚು ಮಳೆ ಬಿದ್ದಿದೆ. ಕಳೆದ ವರ್ಷ ಈ ಅವಧಿಯಲ್ಲಿ 218 ಇಂಚು ಹಾಗೂ ಈ ಬಾರಿ ಈ ಪ್ರಮಾಣ 130.42 ಇಂಚಿನಷ್ಟಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 1.28 ಇಂಚು ಮಳೆಯಾಗಿದೆ. ಜನವರಿಯಿಂದ ಈ ತನಕ 96.77 ಇಂಚು ಮಳೆಯಾಗಿದ್ದು, ಕಳೆದ ವರ್ಷ 114.47 ಇಂಚು ಮಳೆ ಸುರಿದಿತ್ತು.

ಸೋಮವಾರಪೇಟೆ ತಾಲೂಕಿನಲ್ಲಿ 24 ಗಂಟೆಯಲ್ಲಿ ಸರಾಸರಿ 1.93 ಇಂಚು, ಜನವರಿಯಿಂದ ಈತನಕ 64.61 ಇಂಚು ಹಾಗೂ ಕಳೆದ ವರ್ಷ 120.49 ಇಂಚು ಮಳೆಯಾಗಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ ಭಾಗಮಂಡಲ ಹೋಬಳಿಯಲ್ಲಿ 4.61 ಇಂಚು, ಶಾಂತಳ್ಳಿ 4.20 ಇಂಚು, ಶ್ರೀಮಂಗಲ 2.23,

(ಮೊದಲ ಪುಟದಿಂದ) ಹುದಿಕೇರಿ 2.10, ಸಂಪಾಜೆ 2.05, ಕೊಡ್ಲಿಪೇಟೆ ಹೋಬಳಿಯಲ್ಲಿ 2.09 ಇಂಚು ದಾಖಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ತೀರಾ ಚಳಿಯ ವಾತಾವರಣ ಸಾಮಾನ್ಯವಾಗಿದ್ದು, ಜನತೆ ಬಿಸಿಲಿನ ವಾತಾವರಣಕ್ಕಾಗಿ ಕಾಯುವಂತಾಗಿದೆ.

ಗೋಡೆ ಕುಸಿದು ಮಹಿಳೆಗೆ ಗಾಯ

ಸಿದ್ದಾಪುರ, ಸೆ.6: ಗಾಳಿ ಮಳೆಗೆ ಸಿಲುಕಿ ಮನೆ ಗೋಡೆ ಕುಸಿದು ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡು ಪ್ರಾಣಾಪಾಯದಿಂದ ಪಾರಾದ ಘಟನೆ ನೆಲ್ಯಹುದಿಕೇರಿ ಗ್ರಾಮದಲ್ಲಿ ಶುಕ್ರವಾರ ಅಪರಾಹ್ನ ನಡೆದಿದೆ.

ನೆಲ್ಯಹುದಿಕೇರಿಯ ಶಾಲಾ ರಸ್ತೆಯ ನಾಲ್ಕನೆ ವಾರ್ಡಿನ ನಿವಾಸಿ ದಿ. ಶಿವರಾಮ್ ಎಂಬವರ ಪತ್ನಿ ಭವಾನಿ (58-ಪೊನ್ನು) ಎಂಬವರು ಗಾಯಗೊಂಡ ಮಹಿಳೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಭವಾನಿ ಅವರ ಮನೆಯು ಸಂಪೂರ್ಣವಾಗಿ ಬಿರುಕು ಬಿಟ್ಟಿತ್ತು. ಕುಸಿಯುವ ಹಂತದಲ್ಲಿದ್ದ ಮನೆಯಲ್ಲಿ ಭವಾನಿ ಹಾಗೂ ಅವರ ಮಗ, ಸೊಸೆ, ಮೊಮ್ಮಕ್ಕಳು ವಾಸ ಮಾಡಿಕೊಂಡಿದ್ದರು. ಬಾಡಿಗೆ ಮನೆ ಸಿಗದ ಕಾರಣ ಇದೇ ಮನೆಯಲ್ಲೇ ವಾಸ ಮಾಡಿಕೊಂಡಿದ್ದರು. ಕಳೆದ ನಾಲ್ಕೈದು ದಿನಗಳಿಂದ ಮಳೆ ಗಾಳಿ ಬಿರುಸುಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬದಲಿ ಮನೆಗೆ ಸ್ಥಳಾಂತರಗೊಳ್ಳುವ ಸಿದ್ಧತೆಯನ್ನು ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ಸಂಬಂಧ ಶುಕ್ರವಾರದಂದು ಅಪರಾಹ್ನ 3.30 ರ ಸಮಯಕ್ಕೆ ಮನೆಯ ಸಾಮಗ್ರಿಗಳನ್ನು ಕೋಣೆಗಳಿಂದ ಸ್ಥಳಾಂತರಿಸುತ್ತಿದ್ದ ಸಂದರ್ಭದಲ್ಲಿ ದಿಢೀರನೆ ಮನೆಯ ಮುಂಭಾಗದ ಗೋಡೆಯೊಂದು ಕುಸಿದಿದೆ.

ಈ ಸಂದರ್ಭ ಗೋಡೆಯ ಇಟ್ಟಿಗೆ ಹಾಗೂ ಮಣ್ಣು ಭವಾನಿ ಅವರ ತಲೆಯ ಮೇಲೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಕುಸಿದು ಬಿದ್ದರು. ತಕ್ಷಣ ಸ್ಥಳದಲ್ಲಿದ್ದ ಅವರ ಸೊಸೆ ಸೌಮ್ಯ ಅವರು ತನ್ನ ಅತ್ತೆಯ ತಲೆಯ ಮೇಲೆ ಬಿದ್ದ ಮಣ್ಣನ್ನು ತೆಗೆದು ಅಕ್ಕಪಕ್ಕದ ನಿವಾಸಿಗಳನ್ನು ಕೂಗಿ ಕರೆದರು. ಅಲ್ಲದೆ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ಬರುವಂತೆ ತಿಳಿಸಿದರು. ನಂತರ ವಾಹನವೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಭವಾನಿ ಅವರನ್ನು ಸಿದ್ಧಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಯಿತು.

ತಪ್ಪಿದ ಅನಾಹುತ: ಭವಾನಿ ಅವರ ಪುತ್ರನಿಗೆ ಎರಡು ಪುಟ್ಟ ಮಕ್ಕಳಿದ್ದು ಮೊದಲ ಮಗುವನ್ನು ಶಾಲೆಗೆ ಕಳುಹಿಸಲಾಗಿತ್ತು. ಎರಡನೇ ಮಗುವನ್ನು ಸಾಮಗ್ರಿಗಳನ್ನು ಜೋಡಿಸುವ ಸಂದರ್ಭ ಪಕ್ಕದ ಮನೆಗೆ ಕಳುಹಿಸಲಾಗಿತ್ತು. ಇದರಿಂದಾಗಿ ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸಂತೋಷ್, ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ಗ್ರಾ.ಪಂ ಸದಸ್ಯರಾದ ಅಫ್ಸಲ್ ಹಾಗೂ ಬಿಂದು ಭೇಟಿ ನೀಡಿ ಪರಿಶೀಲಿಸಿದರು. -ಚಿತ್ರ ವರದಿ: ವಾಸು

ಕರಿಕೆಯಲ್ಲಿ ಮಣ್ಣು-ತಡೆಗೋಡೆ ಕುಸಿತ

ಕರಿಕೆ, ಸೆ. 6 : ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕರಿಕೆ ಗ್ರಾಮದ ಎರಡು ಕಡೆಗಳಲ್ಲಿ ಮಣ್ಣು ಹಾಗೂ ಮನೆಯ ಬಳಿ ತಡೆಗೋಡೆ ಕುಸಿದು ನಷ್ಟ ಸಂಭವಿಸಿದೆ. ಕರಿಕೆ ಚೆತ್ತುಕಾಯದ ಹದಿಮೂರನೇ ಮೈಲು ನಿವಾಸಿ ಕೆ.ಪಿ. ನಾರಾಯಣ ಎಂಬವರ ಮನೆ ಬರೂಕ ಜಲವಿದ್ಯುತ್ ಉತ್ಪಾದನಾ ಘಟಕಕ್ಕೆ ನೀರು ಸರಬರಾಜು ಮಾಡುವ ಕಾಲುವೆ ಬದಿಯಲ್ಲಿ ಇದ್ದು ಮನೆ ಬಳಿ ಮಣ್ಣು ಕುಸಿದು ಮನೆ ಅಪಾಯಕಾರಿ ಸ್ಥಿತಿಯಲ್ಲಿದೆ.

ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದಾರೆ. ಕೆಲ ದಿನಗಳ ಹಿಂದೆ ಇದೆ ಕಾಲುವೆಯ ಕೂಗಳತೆ ದೂರದಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಕಾಲುವೆ ಬಂದ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ ಮತ್ತೋರ್ವ ಚೆತ್ತುಕಾಯ ನಿವಾಸಿ ವ್ಯಾಪಾರಸ್ಥರಾಗಿರುವ ಕೆ.ಡಿ. ಬಾಲಕೃಷ್ಣ ಅವರ ಅಂಗಡಿ ಮನೆ ಬಳಿ ತಡೆಗೋಡೆ ಕುಸಿದು ನಷ್ಟವಾಗಿದೆ. ಯಾವದೇ ಅನಾಹುತ ಸಂಭವಿಸಿಲ್ಲ.