ಕೂಡಿಗೆ, ಸೆ. 6: ಕೂಡು ಮಂಗಳೂರು ಗ್ರಾಮ ಪಂಚಾಯಿತಿ aಮಾಸಿಕ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 14ನೇ ಹಣಕಾಸಿನ ಕ್ರಿಯಾಯೋಜನೆ ತಯಾರಿಸಿ ಹಲವು ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.
ಜಲಾವೃತಗೊಂಡು ಹಾನಿಯಾಗಿರುವ ಮನೆಗಳಿಗೆ ಪರಿಹಾರ ಒದಗಿಸಲು ಮರು ಒತ್ತಾಯ ಮಾಡುವಂತೆ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು. ಬಸವನತ್ತೂರು ವ್ಯಾಪ್ತಿ ಮತ್ತು ಹಾಸನ - ಕುಶಾಲನಗರ ರಾಜ್ಯ ಹೆದ್ದಾರಿಯಲ್ಲಿ ಕಸದ ತೊಟ್ಟಿಗಳು ತುಂಬಿ ರಸ್ತೆಯಲ್ಲಿ ಕಸ ಚೆಲ್ಲಾಡುತ್ತಿರುವ ಬಗ್ಗೆ ಸದಸ್ಯ ಮಹೇಶ್ಕಾಳಪ್ಪ ಪ್ರಸ್ತಾಪಿಸಿ ಇನ್ನೂ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, ಸಭೆಯಲ್ಲಿ ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಅದರನ್ವಯ ಕಾರ್ಯಗತಗೊಳಿಸಲು ಕಾರ್ಯೋ ನ್ಮುಖರಾಗುತ್ತೇವೆ. ಅಲ್ಲದೇ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಎಲ್ಲ ಗ್ರಾಮಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಪಂಚಾಯಿತಿ ಕಾರ್ಯೋ ನ್ಮುಖವಾಗಲಿದೆ. ಪ್ರಮುಖವಾಗಿ ಶುಚಿತ್ವಕ್ಕೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು ಎಂದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಆಯೆಷಾ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿ ಕೊಳ್ಳಬೇಕು. 14ನೇ ಹಣಕಾಸಿನ ಕ್ರಿಯಾಯೋಜನೆಗಳು ತಯಾರಾಗಿದ್ದು, ಅದರನ್ವಯ ಆಯಾ ವಾರ್ಡಿನ ಸದಸ್ಯ ಅಭಿಪ್ರಾಯದಂತೆ ಕಾರ್ಯನಿರ್ವ ಹಿಸಲಾಗುವದು. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರೂ, ಕೆಲವು ವಾಣಿಜ್ಯೋದ್ಯಮಿಗಳು ಮತ್ತು ಕೃಷಿ ಇಲಾಖೆಯ ಆವರಣದಲ್ಲಿರುವ ವಿವಿಧ ಘಟಕಗಳ ತ್ಯಾಜ್ಯ ವಸ್ತುಗಳನ್ನು ತಂದು ಕಸದ ತೊಟ್ಟಿಯಲ್ಲಿ ಸುರಿಯುವದರ ಬದಲು ಅವರ ವಾಹನ ಮುಖೇನ ಕಸದ ಘಟಕಕ್ಕೆ ಸಾಗಿಸಲು ಸೂಚಿಸಲಾಗುವುದು ಎಂದರು.
ಸಭೆಯಲ್ಲಿ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡಿ, ಮನೆ ಕಳೆದುಕೊಂಡಿರುವವರಿಗೆ ಗ್ರಾ.ಪಂ.ನಿಂದ ಮನೆ ನಿರ್ಮಿಸಿಕೊಡಲಾಗುವದು ಎಂದರು. ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.