ಗುಡ್ಡೆಹೊಸೂರು: ಇಲ್ಲಿನ ಸಮುದಾಯ ಭವನದಲ್ಲಿ 25ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭ ಮುಂಜಾನೆ 5 ಗಂಟೆಗೆ ಗಣಪತಿಹೋಮ 11 ಗಂಟೆಗೆ ಕಾವೇರಿ ನದಿಯಿಂದ ಕಲಶ ತಂದು ಗ್ರಾಮಸ್ಥರು ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಪೂಜೆ ನಡೆಸಲಾಯಿತು.

ಕೂಡಿಗೆ: ಗೌರಿ ಗಣೇಶ ಹಬ್ಬದ ಅಂಗವಾಗಿ ಕೂಡಿಗೆ- ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಕೂಡಿಗೆಯ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಸರ್ಕಲ್‍ನಲ್ಲಿ ಗಣಪತಿ ಕುಳ್ಳಿರಿಸಿ ಪೂಜೆ ನೆರವರಿಸಲಾಯಿತು.

ಅನ್ನದಾನ ಕಾರ್ಯಕ್ರಮ ನಡೆಯಿತು. ಕೂಡಿಗೆ ಡೈರಿ ನೌಕರರ ವತಿಯಿಂದ ಡೈರಿಯ ಅವರಣದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ನಡೆಸಲಾಗುತ್ತಿದೆ. ಇದರ ಅಂಗವಾಗಿ ಡೈರಿ ಕಟ್ಟಡ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

* ಕೂಡುಮಂಗಳೂರು ಸಮುದಾಯದ ಭವನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಅದ್ಧೂರಿಯಾಗಿ ಗಣಪತಿಯ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ ಪ್ರತಿದಿನ ಪೂಜೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲ್ಲಿವೆ.

ಕಾಟಕೇರಿ: ಕೂರನಬಾಣೆಯ ಯುವಕ ಸಂಘದ ವತಿಯಿಂದ 8ನೇ ವರ್ಷದ ಅದ್ಧೂರಿ ಗಣೇಶ ಉತ್ಸವ ನಡೆಯಿತು.

ಕ್ಲೋಸ್ ಬರ್ನ್: ಕಡಗದಾಳು ಗ್ರಾಮದ ಕ್ಲೋಸ್‍ಬರ್ನ್‍ನ ಶ್ರೀ ವಿನಾಯಕ ಭಕ್ತ ಮಂಡಳಿಯಿಂದ ತಾ. 2ರ ಗೌರಿ ಗಣೇಶ ಹಬ್ಬದ ಪ್ರಯುಕ್ತ 35ನೇ ವರ್ಷದ ಗೌರಿಗಣೇಶ ಹಬ್ಬವನ್ನು ಆಚರಿಸ ಲಾಯಿತು. ಬೆಳಿಗ್ಗೆ 11 ಗಂಟೆಗೆ ದೇವರನ್ನು ಪ್ರತಿಷ್ಠಾಪಿಸಿ ಪೂಜೆಯ ನಂತರ ಮಧ್ಯಾಹ್ನ 12.30 ಗಂಟೆಗೆ ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಿಸಿ, ಮೆರವಣಿಗೆ ಮೂಲಕ ಗಣೇಶನನ್ನು ವಿಸರ್ಜಿಸಲಾಯಿತು.ಮಡಿಕೇರಿ: ಮಡಿಕೇರಿಯ ಕೊಹಿ ನೂರು ರಸ್ತೆಯಲ್ಲಿ ಹಿಂದೂ ಯುವಶಕ್ತಿ ಸಂಘಟನೆಯ ವತಿಯಿಂದ ಅಲ್ಲಿನ ಮೋನಪ್ಪ ಗ್ಯಾರೇಜ್ ನಲ್ಲಿ ವಿಘ್ನ ನಿವಾರಕನ ಮೂರ್ತಿ ಯನ್ನು ಪ್ರತಿಷ್ಠಾಪಿಸಿ ಅದೇ ದಿನ ಸಂಜೆ ವಿಸರ್ಜಿಸಲಾಯಿತು. ಜಿಲ್ಲೆಯಲ್ಲಿ ಶ್ರೀಮಂತ ಗಣಪತಿ ಎಂದು ಹೆಸರು ಮಾಡಿರುವ ಈ ಗಣಪತಿ ಮೂರ್ತಿ ವಿವಿಧ ಬಗೆಯ ಬೆಳ್ಳಿಯ ಆಭರಣಗಳೊಂದಿಗೆ ಪ್ರತಿಷ್ಠಾಪಿತಗೊಂಡು ಭಕ್ತಾದಿಗಳ ಗಮನ ಸೆಳೆಯಿತು. ಸಂಘಟನೆ ಪ್ರಮುಖರು, ದಾನಿಗಳು ಕಿರೀಟ, ಮೋದಕ ಪಾಕ, ಡಾಬು, ಮೂಗುತ್ತಿ ಮತ್ತಿತರ ಧಾರ್ಮಿಕ ಶೈಲಿಯ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದು ಸುಮಾರು ರೂ. 15 ಲಕ್ಷ ಮೌಲ್ಯದ ಆಭರಣಗಳೊಂದಿಗೆ ಈ ವಿಗ್ರಹ ಪ್ರತಿಷ್ಠಾಪನೆಗೊಳ್ಳುವದು ವಿಶೇಷ. ಈ ಬಾರಿ ಸ್ಥಳೀಯರಾದ ಸತೀಶ್ ಪೈ ಅವರ ಪುತ್ರ ರೋಹನ್ ಪೈ ಅವರು ಬೆಳ್ಳಿಯ ಸರವನ್ನು ಸಮರ್ಪಿಸಿದರು. ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಗೌರಿ ಗಣೇಶ ಹಬ್ಬವನ್ನು ಸೋಮವಾರಪೇಟೆ ವ್ಯಾಪ್ತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಮಳೆಯ ಅಬ್ಬರದ ನಡುವೆಯೂ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಿತು. ಗೌರಿ ಮತ್ತು ಗಣೇಶನ ಹಬ್ಬ ಒಂದೇ ದಿನ ಬಂದಿದ್ದರಿಂದ ಹೆಚ್ಚಿನ ಸಂಭ್ರಮ ಕಂಡುಬಂತು. ಹಬ್ಬದ ಹಿಂದಿನ ದಿನದಂದು ಪಟ್ಟಣದಲ್ಲಿ ಹಣ್ಣುಕಾಯಿ ಸಾಮಗ್ರಿ, ಹೂವುಗಳ ಮಾರಾಟದ ಭರಾಟೆ ಜೋರಾಗಿತ್ತು. ರಾಗಿಮುದ್ದೆ, ಕೆಸದ ಸಾರು, ಕಾಯಿ ಕಡುಬು, ಎಲೆಹಿಟ್ಟು ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಿ ನೆಂಟರಿಷ್ಟರೊಂದಿಗೆ ಸವಿದರು. ಗ್ರಾಮದ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಪಟ್ಟಣದ ಆರ್‍ಎಂಸಿ ಮಾರುಕಟ್ಟೆ ಬಳಿಯಿರುವ ಗಣಪತಿ ದೇವಾಲಯ, ಬಸ್ ನಿಲ್ದಾಣದ ಬಳಿಯಲ್ಲಿನ ಗಣಪತಿ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ನಡೆದವು.

ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಸಾರ್ವಜನಿಕ ಗಣಪತಿ ಸೇವಾ ಸಮಿತಿಯ ವತಿಯಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದರೊಂದಿಗೆ ಕಕ್ಕೆಹೊಳೆ ಜಂಕ್ಷನ್, ಮಹದೇಶ್ವರ ಬ್ಲಾಕ್, ರೇಂಜರ್ಸ್ ಬ್ಲಾಕ್, ಮಾನಸ ಹಾಲ್ ಸಮೀಪ, ಆಲೆಕಟ್ಟೆ, ಕಾನ್ವೆಂಟ್ ಬಾಣೆ, ಮಾದಾಪುರ, ಹಟ್ಟಿಹೊಳೆ, ಐಗೂರು, ಶಾಂತಳ್ಳಿ, ಕುಮಾರಳ್ಳಿ, ಗೌಡಳ್ಳಿ, ಬಾಣಾವರ, ತೋಳೂರುಶೆಟ್ಟಳ್ಳಿ, ದೊಡ್ಡತೋಳೂರು, ಬೇಳೂರು, ಆಡಿನಾಡೂರು ಸೇರಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ 59 ಸ್ಥಳಗಳಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ.

ಕೆಲವು ಕಡೆಗಳಲ್ಲಿ ಇಂದು ವಿಸರ್ಜನೋತ್ಸವ ನಡೆದಿದ್ದು, ಬಹುತೇಕ ಉತ್ಸವ ಮೂರ್ತಿಗಳನ್ನು 9 ಮತ್ತು 11 ದಿನಗಳ ತರುವಾಯ ವಿಸರ್ಜನೆ ಮಾಡುವ ಬಗ್ಗೆ ಸಮಿತಿ ಪದಾಧಿಕಾರಿಗಳು ನಿರ್ಧರಿಸಿದ್ದಾರೆ.

ಮಕ್ಕಳಿಂದ ಪ್ರತಿಷ್ಠಾಪನೆ: ಇಲ್ಲಿನ ಪೊಲೀಸ್ ಠಾಣೆ ಸುತ್ತಮುತ್ತಲಲ್ಲಿ ನೆಲೆಸಿರುವ ಮಕ್ಕಳು ಸ್ವಯಂಪ್ರೇರಣೆಯಿಂದ ತಾವುಗಳೇ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ಮೂರರಿಂದ 8ನೇ ತರಗತಿ ಒಳಗಿನ ವಿದ್ಯಾರ್ಥಿಗಳು ತಮ್ಮ ಪೋಷಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು. ಇಲ್ಲಿನ ಬ್ರಾಹ್ಮಣ ಸಮಾಜದಿಂದ ಸೋಮೇಶ್ವರ ದೇವಾಲಯದಲ್ಲಿ, ಕುರುಹಿನ ಶೆಟ್ಟಿ ಸಮಾಜದಿಂದ ರಾಮಮಂದಿರದಲ್ಲಿ, ದೇವಾಂಗಶೆಟ್ಟಿ ಸಮಾಜದಿಂದ ಶಿವಾಜಿ ರಸ್ತೆಯಲ್ಲಿ, ವೀರಶೈವ ಸಮಾಜದಿಂದ ಬಸವೇಶ್ವರ ದೇವಾಲಯದಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.ಸುಂಟಿಕೊಪ್ಪ: ಶಾಂತಗೇರಿ ತೋಟದ ಓಂಶಕ್ತಿ ಗಣೇಶ ಸೇವಾ ಸಮಿತಿ ವತಿಯಿಂದ ಗೌರಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ತೋಟದವರು, ಸುತ್ತಮುತ್ತಲಿನ ಭಕ್ತಾದಿಗಳು ಪೂಜೆ ಸಲ್ಲಿಸಿ ವಿರ್ಜಿಸಲಾಯಿತು.

ವಿದ್ಯುತ್ ದಿಪಾಂಕೃತ ಭವ್ಯ ಮಂಟಪದಲ್ಲಿ,ವಾಧ್ಯಗೋಷ್ಠಿಯೊಂದಿಗೆ ಶೋಭ ಯಾತ್ರೆಯನ್ನು ತೋಟದ ಕಾರ್ಮಿಕರು ಹಾಗೂ ಸುತ್ತ ಮುತ್ತಲಿನ ನಿವಾಸಿಗಳೊಂದಿಗೆ ನಡೆಸುವ ಮೂಲಕ ತೋಟದ ಕೆರೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ತೋಟದ ವ್ಯವಸ್ಥಾಪಕ ಜಿ.ಎಂ. ನಂಜಪ್ಪ, ರೈಟರ್ ಕುಮಾರ್, ಓಂಶಕ್ತಿ ಗಣೇಶ ಸೇವಾ ಸಮಿತಿಯ ಪದಾಧಿಕಾರಿಗಳಾದ ಅಣ್ಣಾಮಲೈ, ಧನಪಾಲ್, ವಿಜಯ, ಕೃಷ್ಣ, ಕುಮಾರ್, ಗುರುಪ್ರಸಾದ್, ಕಿರಣ್ ಸ್ಥಳೀಯ ಕಾರ್ಮಿಕರು ಇದ್ದರು.

ಕಾನೂರು: ವಿನಾಯಕ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ವೀರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದಲ್ಲಿ ಗೌರಿಗಣೇಶೋತ್ಸವವನ್ನು ಆಚರಿಸಲಾಯಿತು. ವರ್ಷಂಪ್ರತಿ ಸಮಿತಿಯಿಂದ ಗೌರಿ-ಗಣೇಶನ ಉತ್ಸವನ್ನು ಆಚರಿಸಲಾಗುತ್ತದೆ. ಅದೇ ರೀತಿ ಪ್ರಸಕ್ತ ವರ್ಷದಲ್ಲಿ ದಾನಿಗಳ ಹಾಗೂ ಸಾರ್ವಜನಿಕರ ನೆರವಿನಿಂದ 5ನೇ ವರ್ಷ ಗೌರಿ-ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಕಾನೂರು ಗ್ರಾಮದ ವಿಷ್ಣು ದೇವಾಲಯದ ಅರ್ಚಕ ಲೋಹಿತ್ ಪೂಜಾ ಕೈಂಕರ್ಯ ನೆರವೇರಿಸಿದರು.ಈ ಸಂದರ್ಭ ಗ್ರಾಮದ ಹೆಚ್ಚಿನ ಭಕ್ತಾದಿಗಳು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಸಮಿತಿ ಅಧ್ಯಕ್ಷ ಎಂ.ಎಸ್. ಹರೀಶ್, ಉಪಾಧ್ಯಕ್ಷ ಮಾಚಯ್ಯ, ಖಜಾಂಜಿ ಕಾರ್ತಿಕ್, ಪ್ರಮುಖ ಕೀರ್ತಿ, ಪ್ರವೀಣ್, ಸತೀಶ್, ಮಣಿ, ಅನಿಸ್ ಇತರರು ಇದ್ದರು. ಗ್ರಾಮದ ದಿನಸಿ ಅಂಗಡಿ ಮಾಲೀಕ ರಾಜೇಶ್, ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನೆರವೇರಿಸಿದರು.

ತಾ. 9 ರಂದು ವಿಸರ್ಜನೆ: 9 ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದ್ದು, ತಾ. 9 ರಂದು ಕಾನೂರಿನ ಲಕ್ಷಣತೀರ್ಥ ನದಿಯಲ್ಲಿ ವಿಸರ್ಜಿಸಲಾಗುವದು. ಅಂದು ಸಂಜೆ 6 ಗಂಟೆಗೆ ಮಹಾಪೂಜೆ ನಡೆದ ನಂತರ ಕಪ್ಪರಮನೆ ಕಾಲನಿ, ಮಲ್ಲಂಗೆರೆ, ಬ್ರಹ್ಮಗಿರಿಪುರ, ಚೈನ್‍ಗೇಟ್, ಕಾನೂರು ಗ್ರಾಮದ ಮುಖ್ಯರಸ್ತೆಯಲ್ಲಿ ಕೊಡಗಿನ ಸಾಂಪ್ರದಾಯಿಕ ವಾದ್ಯಮೇಳದೊಂದಿಗೆ ಮೆರವಣಿಗೆ ಸಾಗಲಿದೆ.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ನಿಸರ್ಗಧಾಮದ ಎನ್.ಟಿ.ಸಿ. ವತಿಯಿಂದ ಸರ್ವಧರ್ಮದವರು ಉತ್ಸವ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಈ ಸಂದರ್ಭ ಅಲ್ಲಿನ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಬೇಧಭಾವವಿಲ್ಲದೆ ಎಲ್ಲರು ಸೇರಿ ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ಎನ್.ಟಿ.ಸಿ.ಸ್ಥಾಪಕ ಅಧ್ಯಕ್ಷ ಅಬ್ದುಲ್ ಸಲಾಂ, ಮತ್ತು ಅಲ್ಲಿನ ಗೌರವ ಅಧ್ಯಕ್ಷ ಲೋಕೇಶ್, ಪ್ರಭಾಕರ್, ಕುಡೆಕ್ಕಲ್ ನಾಣಯ್ಯ, ರಮೇಶ್, ನಾಸೀರ್, ಬಿನೇಶ್ ಡಿಸೋಜಾ, ನಾಗರಾಜ್, ನಿಜಾಮ್ ಮುಂತಾದವರು ಹಾಜರಿದ್ದರು. ಕಾವೇರಿ ನದಿಪ್ರವಾಹದಿಂದ ಯಾವದೇ ಅನಾಹುತ ನಡೆಯದಿರಲಿ ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥಿಸಿಕೊಂಡರು.

ಭಾಗಮಂಡಲ: ಇಲ್ಲಿನ ಮುಖ್ಯ ರಸ್ತೆಯಲ್ಲಿ ಇರುವ ವಿನಾಯಕ ಟ್ರಸ್ಟ್ ವತಿಯಿಂದ ನಡೆಯುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ಜಿ.ಬೋಪಯ್ಯ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು ಈ ಸಂದರ್ಭ ಅಧ್ಯಕ್ಷ ವಾಸುದೇವ, ಬಾಲಕೃಷ್ಣ, ರವಿಹೆಬ್ಬಾರ್, ಸಿ.ಆರ್. ಜಯನ್, ಅರವಿಂದ್, ಶಿವಶಂಕರ, ಕಾಳನ ರವಿ ಉಪಸ್ಥಿತರಿದ್ದರು.ಗೋಣಿಕೊಪ್ಪ ವರದಿ: ಗೌರಿ-ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಲಾಯಿತು. ಗೋಣಿಕೊಪ್ಪ ಉಮಾಮಹೇಶ್ವರಿ ದೇವಸ್ಥಾನದ ವತಿಯಿಂದ ಗೌರಿಯನ್ನು ಮೆರವಣಿಗೆ ಮೂಲಕ ಹೊತ್ತು ಪ್ರತಿಷ್ಠಾಪನೆ ಮಾಡಲಾಯಿತು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ತೆರಳಿ ಸಾರ್ವಜನಿಕರು ಪೂಜೆ ಸಲ್ಲಿಸಿದರು. ಕೈಕೇರಿ ಗ್ರಾಮದಲ್ಲಿ ವಿವೈಸಿ ಸಂಘದ ಪ್ರಮುಖರು ಆಚರಿಸಿದರು. ಪೂಜಿಸಿ ನಂತರ ಸಮೀಪದ ಕೆರೆಗೆ ವಿಸರ್ಜನೆ ಮಾಡಿದರು.

ನಾಪೆÉÇೀಕ್ಲು: ಗಣೇಶ ಚತುರ್ಥಿಯ ಅಂಗವಾಗಿ ನಾಪೆÉÇೀಕ್ಲು ಪಟ್ಟಣದಲ್ಲಿ 5 ಸಮಿತಿಗಳ ವತಿಯಿಂದ ಮಾರುಕಟ್ಟೆ ಬಳಿಯಲ್ಲಿ ಪೂಜೆ ಸಲ್ಲಿಸಿ ಸಾಂಪ್ರದಾಯಿಕ ವಾಲಗದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.

ನಾಪೆÉÇೀಕ್ಲು ಶ್ರೀ ರಾಮ ಸಮಿತಿ ವತಿಯಿಂದ ರಾಮ ಮಂದಿರದಲ್ಲಿ, ನಾಪೆÉÇೀಕ್ಲು ನಾಡು ಗಣೇಶ ಸಮಿತಿಯಿಂದ ನಾಪೆÉÇೀಕ್ಲು ಭಗವತಿ ದೇವಸ್ಥಾನದಲ್ಲಿ, ಶ್ರೀ ಪೆÇನ್ನು ಮುತ್ತಪ್ಪ ಸಮಿತಿಯಿಂದ ಮುತ್ತಪ್ಪ ದೇವಳದಲ್ಲಿ, ಶ್ರೀ ವೆಂಕಟೇಶ್ವರ ಸಮಿತಿಯಿಂದ ಶ್ರೀ ವೆಂಕಟೇಶ್ವರ ದೇವಳದಲ್ಲಿ ಹಾಗೂ ವಿವೇಕಾನಂದ ಸಮಿತಿಯಿಂದ ಇಂದಿರಾ ನಗರದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಮೆರವಣಿಗೆಯಲ್ಲಿ ಪೆÇಲೀಸ್ ಬಂದೋಬಸ್ತ್‍ನ್ನು ಏರ್ಪಡಿಸಲಾಗಿತ್ತು.

ಗುಡ್ಡೆಹೊಸೂರು: ಇಲ್ಲಿನ ಬೊಳ್ಳುರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿ ಗಣೇಶ ಮೂರ್ತಿಯನ್ನು ಪೂಜಿಸಿದ ಬಳಿಕ ನದಿಯಲ್ಲಿ ವಿಸರ್ಜಿಸಲಾಯಿತು. ಮಧ್ಯಾಹ್ನ ದೇವಸ್ಥಾನ ಆವರಣದಲ್ಲಿ ಅನ್ನದಾನ ನಡೆಯಿತು. ಸಮಿತಿಯ ಸದಸ್ಯರು, ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶನಿವಾರಸಂತೆ: ಪಟ್ಟಣದಲ್ಲಿ ಮಳೆ ಸುರಿಯುತ್ತಿದ್ದರೂ ಜನತೆ ಗೌರಿ - ಗಣೇಶ ಚತುರ್ಥಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಬೆಳಿಗ್ಗೆ ಬೀರಲಿಂಗೇಶ್ವರ ಗುಡಿಯ ಮುಂಭಾಗ ಮುತ್ತೈದೆಯರು ಗಂಗೆ ಪೂಜೆ ನೆರವೇರಿಸಿದರು. ಸೇವಾ ಸಮಿತಿ ಪದಾಧಿಕಾರಿಗಳು ಹೊಳೆಯ ಬಳಿ ದೇವರ ಮೂರ್ತಿಗಳನ್ನು ಪೂಜಿಸಿ, ಮುಖ್ಯರಸ್ತೆಯಲ್ಲಿ ಮೆರವಣಿಗೆಯಲ್ಲಿ ತಂದು, ಗಣಪತಿ ಪಾರ್ವತಿ ಚಂದ್ರಮೌಳೇಶ್ವರಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದರು. ಅರ್ಚಕ ಮಾಲತೇಶ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಮಹಿಳೆಯರು ಹೂ- ಹಣ್ಣು ಕಾಯಿ, ಮಡ್ಲಕ್ಕಿ ತಂದು ಅರ್ಪಿಸಿ ಪೂಜಿಸಿದರು.

ಮನೆಗಳಲ್ಲಿ ಖಿಚಡಿ, ಕೆಸಸೊಪ್ಪಿನ ಸಾಂಬಾರು, ಕೋಸಂಬರಿ, ಪಾಯಸ, ಕರಿಗಡಬು, ಇತರ ವಿಶೇಷ ಭಕ್ತಿಗಳನ್ನು ತಯಾರಿಸಿ ಸಹಭೋಜನ ಸವಿದರು. ಹೆಣ್ಣು ಮಕ್ಕಳು ಗಾಜಿನ ಬಳಿಯೊಂದಿಗೆ ಅರಸಿನ ಕುಂಕುಮ ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಕುಶಾಲನಗರ: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಒಟ್ಟು 16 ಕಡೆ ಗೌರಿ ಗಣೇಶ ಪ್ರತಿಷ್ಠಾಪನೆ ನಡೆದು ಪೂಜಾ ವಿಧಿವಿಧಾನಗಳೊಂದಿಗೆ ಶ್ರದ್ದಾಭಕ್ತಿಯಿಂದ ನಡೆಯಿತು. ಸೋಮವಾರ 5 ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಗುಡ್ಡೆಹೊಸೂರು ಸಮುದಾಯ ಭವನದಲ್ಲಿ 25ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಯಿತು. ಗಣಪತಿ ಹೋಮ ನಡೆಸಿ ಕಾವೇರಿ ನದಿಯಿಂದ ಕಲಶ ತಂದು ಗ್ರಾಮಸ್ಥರು ಸೇರಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹಾಪೂಜೆ ನಡೆಸಿದರು. ಇತ್ತೀಚಿನ ಮಳೆ ಪ್ರವಾಹÀದ ಹಿನ್ನಲೆಯಲ್ಲಿ ಬಹುತೇಕ ಕಡೆ ಹಬ್ಬ ಆಚರಣೆ ಕಳೆಗುಂದಿದ ರೀತಿಯಲ್ಲಿ ಕಂಡುಬಂತು.

ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲು ಗೌರಿ-ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು ವಿಗ್ರಹಗಳನ್ನು ವಾದ್ಯಗೋಷ್ಠಿ ಮೂಲಕ ಮೆರವಣಿಗೆ ನಡೆಸಲಾಯಿತು. ಸಿದ್ದಾಪುರದ ಎಂಜಿ ರಸ್ತೆಯ ಮಹಾಗಣಪತಿ ಮಿತ್ರ ಮಂಡಳಿ ವತಿಯಿಂದ ಹಾಗೂ ನೆಲ್ಲಿಹುದಿಕೇರಿ ಬೆಟ್ಟದ ಕಾಡು ವಿಘ್ನೇಶ್ವರ ಮಿತ್ರಮಂಡಳಿ, ವಾಲ್ನೂರು ಕೃಷ್ಣಾಪುರದ ವಿನಾಯಕ ಸೇವಾ ಸಮಿತಿ, ನೆಲ್ಲಿಹುದಿಕೇರಿ ಶಾಲೆ ರಸ್ತೆಯ ಸಿದ್ಧಿ ವಿನಾಯಕ ಮಿತ್ರ ಮಂಡಳಿ, ಬರಡಿ ವಿನಾಯಕ ಮಿತ್ರ ಮಂಡಳಿ ವತಿಯಿಂದ ಉತ್ಸವಮೂರ್ತಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಕಾವೇರಿ ನದಿಯಲ್ಲಿ ಸೋಮವಾರ ಸಂಜೆ ವಿಸರ್ಜಿಸಲಾಯಿತು ಸಿದ್ದಾಪುರ ಠಾಣಾಧಿಕಾರಿ ದಯಾನಂದ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಮೆರವಣಿಗೆ ಉದ್ದಕ್ಕೂ ಯುವಕರು ಕುಣಿದು ಕುಪ್ಪಳಿಸಿದರು ಪೂಜಾ ಕೈಂಕರ್ಯಗಳು ನಡೆಯಿತು.

ಸುಂಟಿಕೊಪ್ಪ: ಶ್ರೀದೇವಿಯಲ್ಲಿರುವ ಅಣ್ಣಪ್ಪಸ್ವಾಮಿ ದೇವಾಲಯದಲ್ಲಿ ಸೋಮವಾರ 7ನೇ ವರ್ಷದ ಗಣೇಶ ಚತುರ್ಥಿಯ ಅಂಗವಾಗಿ ವಿನಾಯಕ ಸೇವಾ ಸಮಿತಿಯ ವತಿಯಿಂದ ಗಣೇಶೋತ್ಸವ ಆಚರಿಸಲಾಯಿತು.

ವಿವಿಧ ಪೂಜಾ ಕೈಂಕಾರ್ಯಗಳೊಂದಿಗೆ ಪ್ರತಿಷ್ಠಾಪಿಸಿ ಸುತ್ತಮುತ್ತಲಿನ ಭಕ್ತಾಧಿಗಳು ಬಂದು ಪೂಜೆ ಸಲ್ಲಿಸಿದರು. ಅನ್ನ ಸಂತರ್ಪಣೆಯನ್ನು ನಡೆಸಲಾಯಿತು.ರಾತ್ರಿ 7 ಗಂಟೆಗೆ ವಿವಿಧ ಪೂಜಾ ಕಾರ್ಯವನ್ನು ನೆರವೇರಿಸಿ ಭವ್ಯ ಮಂಟಪದಲ್ಲಿ ಗೌರಿ ಗಣೇಶ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಸಾಗಿ ಕೆರೆಯಲ್ಲಿ ವಿಸರ್ಜಿಸಲಾಯಿತು.