ಕುಶಾಲನಗರ, ಸೆ. 6: ಕಳೆದ ಎರಡು ದಿನಗಳಿಂದ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನದಿ ತಟದ ಜನರಿಗೆ ಆತಂಕ ಮೂಡಿಸಿದ್ದ ನದಿ ನೀರಿನ ಪ್ರವಾಹ ಮಟ್ಟ ಕ್ಷೀಣಿಸಿದೆ. ಕಾವೇರಿ ನದಿ ಕುಶಾಲನಗರ ವ್ಯಾಪ್ತಿಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ನಾಗರಿಕರು ಪ್ರವಾಹದ ಭೀತಿಯಲ್ಲಿ ತಮ್ಮ ಮನೆಗಳನ್ನು ತೆರವುಗೊಳಿಸಲು ಸಿದ್ದಗೊಂಡಿದ್ದರು.

ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತು ಹಾರಂಗಿ ಅಣೆಕಟ್ಟೆಗೆ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಜಲಾವೃತಗೊಂಡ ತಗ್ಗು ಪ್ರದೇಶಗಳಿಂದ ನೀರು ಇಳಿಮುಖಗೊಂಡಿದೆ. ಶುಕ್ರವಾರ ಕುಶಾಲನಗರ ವ್ಯಾಪ್ತಿಯಲ್ಲಿ ಮೋಡಗಳು ಮರೆಯಾಗುವದರೊಂದಿಗೆ ಬಿಸಿಲಿನ ವಾತಾವರಣ ಕಂಡುಬಂದಿತ್ತು.