ಪೊನ್ನಂಪೇಟೆ, ಸೆ. 4: ಕರ್ನಾಟಕ ರಾಜಕೀಯ ಚರಿತ್ರೆಯಲ್ಲಿ ಎ.ಕೆ ಸುಬ್ಬಯ್ಯ ಅವರ ಹೆಸರು ಎಂದಿಗೂ ಹಚ್ಚಹಸಿರಾಗಿ ಉಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಹುದಿಕೇರಿ ಸಮೀಪದ ಬೆಳ್ಳೂರಿನ ದಿ. ಎ.ಕೆ ಸುಬ್ಬಯ್ಯ ಅವರ ನಿವಾಸದಲ್ಲಿ ನಡೆದ ‘ಪುಣ್ಯತಿಥಿ’ ಕಾರ್ಯದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅವರು ಸ್ಥಳದಲ್ಲಿದ್ದ ಸುದ್ದಿಗಾರರೊಂದಿಗೆ ಮಾತನಾಡಿ, ಸುಬ್ಬಯ್ಯ ತಮಗೂ ಸೇರಿದಂತೆ ರಾಜ್ಯದ ಅನೇಕ ರಾಜಕಾರಣಿಗಳಿಗೆ ಮಾರ್ಗದರ್ಶಕ ರಾಗಿದ್ದರು ಎಂದು ಸ್ಮರಿಸಿದರು.

ಸುಬ್ಬಯ್ಯ ಅವರು ವಿರೋಧ ಪಕ್ಷಕ್ಕೆ ಹೇಳಿಮಾಡಿಸಿದಂತಹ ನಾಯಕರಾಗಿದ್ದರು. ಕಿಂಚಿತ್ತೂ ಕೂಡ ಸ್ವಾರ್ಥವಿಲ್ಲದ ರಾಜಕಾರಣದ ಮೂಲಕ ಇಡೀ ರಾಜ್ಯದ ಮನೆಮಾತಾಗಿದ್ದ ಎ.ಕೆ ಸುಬ್ಬಯ್ಯ ಅವರ ಅಗಲಿಕೆ ರಾಜ್ಯಕ್ಕೆ ಬಹುದೊಡ್ಡ ನಷ್ಟ. ಸುಬ್ಬಯ್ಯ ಅವರು ವಿರೋಧ ಪಕ್ಷದಲ್ಲಿದ್ದಾಗ ನಾನು ಮಂತ್ರಿಯಾಗಿದ್ದೆ. ಎ.ಕೆ. ಸುಬ್ಬಯ್ಯ ಅವರು ನಾನು ಕಂಡ ಅಪರೂಪದ ರಾಜಕಾರಣಿ. ಅಲ್ಲದೆ ಅವರೊಬ್ಬ ಅಪ್ರತಿಮ ವಾಗ್ಮಿ ಹಾಗೂ ಅತ್ಯುತ್ತಮ ಸಂಸದೀಯ ಪಟು ಎಂದು ಮೆಲುಕು ಹಾಕಿದ ಸಿದ್ಧರಾಮಯ್ಯ ಅವರು, ಇಂದು ಬಿಜೆಪಿ ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆಯಲು ಸುಬ್ಬಯ್ಯ ಅವರ ಕೊಡುಗೆ ಅಪಾರವಾದದ್ದು. ಆದರೆ ಅಲ್ಲಿನ ಕೆಲವು ಸಿದ್ದಾಂತಗಳನ್ನು ವಿರೋಧಿಸಿ ಸುಬ್ಬಯ್ಯ ಅವರು ಹೊರಬಂದರು. ನಂತರ ಸಂಪೂರ್ಣವಾಗಿ ಜಾತ್ಯತೀತೆಯ ನಿಷ್ಠೆಗೆ ಹೊಂದಿಕೊಂಡು ಕೊನೆಯವರೆಗೂ ತಮ್ಮ ಬದ್ಧತೆಯನ್ನು ಮೆರೆದರು ಎಂದು ಹೇಳಿದರು.

ತಾವು ಮುಖ್ಯಮಂತ್ರಿಯಾಗಿದ್ದ ವೇಳೆ ರಾಜ್ಯಾದ್ಯಂತ ಸದ್ದು ಮಾಡಿದ್ದ ಕೊಡಗಿನ ‘ದಿಡ್ಡಳ್ಳಿ ಹೋರಾಟ’ದಲ್ಲಿ ಎ.ಕೆ. ಸುಬ್ಬಯ್ಯ ಅವರ ಪಾತ್ರ ಪ್ರಧಾನವಾಗಿತ್ತು. ದಿಡ್ಡಳ್ಳಿ ನಿರಾಶ್ರಿತರಿಗೆ ನಿವೇಶನ ಕಲ್ಪಿಸುವಲ್ಲಿ ಸುಬ್ಬಯ್ಯ ಅವರ ನೇತೃತ್ವದ ಹೋರಾಟ ಹೆಚ್ಚು ಫಲ ನೀಡಿದ್ದನ್ನು ಮರೆಯಲಾಗದು ಎಂದರು. ನಂತರ ಸುಬ್ಬಯ್ಯ ಅವರ ಪುತ್ರರು ಮತ್ತು ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ವೇಳೆ ಸಿದ್ದರಾಮಯ್ಯ ಅವರೊಂದಿಗಿದ್ದ ಮಾಜಿ ಕೇಂದ್ರ ಸಚಿವರು ಆದ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಅವರು ಮಾತನಾಡಿ, ಕರ್ನಾಟಕದ ರಾಜಕಾರಣದಲ್ಲಿ ವಿಶೇಷ ಹೆಜ್ಜೆ ಗುರುತು ಮೂಡಿಸಿದ ಎ.ಕೆ. ಸುಬ್ಬಯ್ಯ ಅವರ ವಿಚಾರಧಾರೆಗೆ ಎಂದಿಗೂ ಸಾವಿಲ್ಲ. ಅವರ ಹೋರಾಟದ ಆದರ್ಶಗಳ ಮೂಲಕ ಅವರು ಸಮಾಜದಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತಾರೆ.ಈ ಕಾರಣದಿಂದ ಸುಬ್ಬಯ್ಯ ಅವರ ಸ್ಮಾರಕ ಟ್ರಸ್ಟ್ ಸ್ಥಾಪನೆಗೊಂಡು ಇದರ ಮೂಲಕ ಹತ್ತಾರು ಕಾರ್ಯಚಟುವಟಿಕೆಗಳು ನಡೆಯುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇಂದು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದ್ದರೆ ಅದರ ಹಿಂದಿನ ಎಲ್ಲ ಶ್ರೇಯಸ್ಸು ಎ.ಕೆ. ಸುಬ್ಬಯ್ಯ ಅವರಿಗೆ ಸಲ್ಲಬೇಕು. ಏಕೆಂದರೆ ಸುಬ್ಬಯ್ಯ ಅವರು ಅಂದು ಬಿಜೆಪಿಯನ್ನು ತಳಮಟ್ಟದಿಂದಲೇ ಸಂಘಟಿಸಿದರು. ಆದರೆ ಅವರು ನಿಧನರಾದ ಸಂದರ್ಭದಲ್ಲಿ ಕೊಡಗಿನ ಜಿಲ್ಲಾಡಳಿತ ಅವರಿಗೆ ಕನಿಷ್ಟ ಗೌರವ ನೀಡದಿರುವದು ಅವರ ಕಮ್ಮಿ ತನದ ಪರಮಾವಧಿ ಎಂದು ಲೇವಡಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಕಾಂಗ್ರೆಸ್ ಮುಖಂಡರಾದ ವಿನೋದ್ ಶಿವಪ್ಪ, ಪಿ.ಸಿ ಹಸೈನಾರ್ ಹಾಜಿ, ವಿ.ಪಿ ಶಶಿಧರ್, ಡಿಸಿಸಿ ಮಾಜಿ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ, ತಾಲೂಕು ಪಂಚಾಯಿತಿ ಸದಸ್ಯ ಪಲ್ವಿನ್ ಪೂರ್ಣಚ್ಚ, ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟಿರ ಟಾಟು ಮೊಣ್ಣಪ್ಪ, ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ರಹ್ಮಾನ್ ಬಾಪು, ಮಹಿಳಾ ಕಾಂಗ್ರೆಸ್ ಪ್ರಮುಖ ಕಡೆಮಾಡ ಕುಸುಮ ಜೋಯಪ್ಪ, ಕೊಡಗು ಜಿಲ್ಲಾ ಸಣ್ಣ ಕಾಫಿ ಬೆಳೆಗಾರರ ಸಂಘದ ಪ್ರಮುಖ ನಂದಾ ಸುಬ್ಬಯ್ಯ, ಸುಂಟಿಕೊಪ್ಪದ ಉಸ್ಮಾನ್, ಆಲಿರ ರಶೀದ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸುಬ್ಬಯ್ಯ ಅವರ ಬಂಧುಗಳು, ರಾಜ್ಯದ ನಾನಾ ಕಡೆಗಳಿಂದ ಆಗಮಿಸಿದ ವಕೀಲರು ವಿವಿಧ ಸಂಘಟನೆಯ ಹೋರಾಟಗಾರರು, ಸುಬ್ಬಯ್ಯ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.

-ಚಿತ್ರ-ವರದಿ : ರಫೀಕ್ ತೂಚಮಕೇರಿ.