ಮಡಿಕೇರಿ, ಸೆ. 4: ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಗುರಿಪಡಿಸಿ ಬಂಧಿಸಿರುವದು ಬಿಜೆಪಿ ಷಡ್ಯಂತ್ರ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿಯ ಗಾಂಧಿ ಮೈಧಾನದಿಂದ ಮಳೆಯ ನಡುವೆ ಪ್ರತಿಭಟನೆ ಮೆರವಣಿಗೆ ಹೊರಟ ಕಾರ್ಯಕರ್ತರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಶಿವಕುಮಾರ್ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು.

ಪ್ರತಿಭಟನೆ ಸಂದರ್ಭ ಕೆಲ ಕಾರ್ಯಕರ್ತರು ನಡು ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆಗೆ ಮುಂದಾದ ಸಂದರ್ಭ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಇ.ಡಿ. ವಿಚಾರಣೆಯನ್ನು ಕೇಂದ್ರ ಸರ್ಕಾರ ದುರುಪಯೋಗ ಮಾಡಿದೆ. ಬಿಜೆಪಿ ಸಂವಿಧಾನ ವಿರೋಧಿ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್, ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುವ ಮೂಲಕ ವಿರೋಧ ಪಕ್ಷವೇ ಇರಬಾರದೆಂದು ಬಿಜೆಪಿ ನಿರ್ಧರಿಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಆಡಳಿತ ಪಕ್ಷವನ್ನು ಎಚ್ಚರಿಸುವ ಕೆಲಸ ಮಾಡಲು ವಿರೋಧ ಪಕ್ಷದ ಅವಶ್ಯಕತೆ ಇದೆ. ಆದರೆ ಅಮಿತ್ ಶಾ ಹಾಗೂ ನರೇಂದ್ರ ಮೋದಿ ವಿರೋಧ ಪಕ್ಷವೇ ಇರಬಾರದೆನ್ನುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿಭಟನೆ ನಡೆಸುವ ಮೂಲಕ ಭಾರತೀಯ ಜನತಾ ಪಕ್ಷದ ಈ ದುಷ್ಟ ರಾಜಕಾರಣವನ್ನು ಖಂಡಿಸುತ್ತಿದ್ದೇವೆ ಎಂದು ಹೇಳಿದರು.

ವಿರೋಧ ಪಕ್ಷದ ಬಲಿಷ್ಠ ನಾಯಕರ ರಾಜಕೀಯ ಜೀವನ ನಾಶ ಮಾಡಲು ಬಿಜೆಪಿ ಸಂಚು ರೂಪಿಸಿದ್ದು, ಬಿಜೆಪಿಗೆ ನೈತಿಕತೆ ಇದ್ದರೆ, ಬಿಜೆಪಿ ಶಾಸಕರ, ಸಚಿವರ ಆಸ್ತಿ ಬಗ್ಗೆ ತನಿಖೆ ಮಾಡಲಿ. ಒಂದು ವೇಳೆ ಬಿಜೆಪಿಯವರ ಬಗ್ಗೆ ತನಿಖೆ ನಡೆಸಿದರೆ ಅವರಿಗಾಗಿಯೇ ಒಂದು ಜೈಲು ನಿರ್ಮಿಸಬೇಕಾಗುತ್ತದೆ ಎಂದು ಟೀಕಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಮಾತನಾಡಿ, ಇದೊಂದು ರಾಜಕೀಯ ದುರಂತವಾಗಿದ್ದು, ನಾವು ಎಂದೂ ಕಂಡರಿಯದಂತಹ ದ್ವೇಷದ ರಾಜಕಾರಣವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. 2017ರಲ್ಲಿ ನಡೆದಿದ್ದ ದಾಳಿಯ ಬಗ್ಗೆ ಉದ್ದೇಶಪೂರ್ವಕವಾಗಿ ಈಗ ವಿಚಾರಣೆ ನಡೆಸಲಾಗುತ್ತಿದೆ. ಇದು ದ್ವೇಷದ ರಾಜಕಾರಣ ಎಂಬದು ಸಾಮಾನ್ಯ ನಾಗರಿಕನಿಗೂ ತಿಳಿದಿದೆ ಎಂದು ದೂರಿದರು.

ಡಿ.ಕೆ. ಶಿವಕುಮಾರ್ ತಪ್ಪು ಮಾಡಿದ್ದರೆ ಒಂದು ತಿಂಗಳೊಳಗಾಗಿ ವಿಚಾರಣೆ ನಡೆಸಬಹುದಿತ್ತು. 2 ವರ್ಷ ಬಿಟ್ಟು ಬಂಧನ ಮಾಡಿರುವದು ರಾಜಕೀಯಪ್ರೇರಿತವಾಗಿದೆ. ಇಂದು ಕಾಂಗ್ರೆಸ್‍ಗೆ ಅನ್ಯಾಯವಾಗಿದ್ದರೂ ನಾಳೆ ಬೇರೆ ಪಕ್ಷಗಳಿಗೂ ಇಂತಹ ಅನ್ಯಾಯವಾಗುವ ಸಾಧ್ಯತೆ ಇದೆ. ಜಾತ್ಯತೀತ ಮನೋಭಾವದ ಎಲ್ಲಾ ಪಕ್ಷಗಳು ದ್ವೇಷದ ರಾಜಕಾರಣವನ್ನು ಖಂಡಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ನಗರಾಧ್ಯಕ್ಷ ಅಬ್ದುಲ್ ರಜಾಕ್, ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ, ಪ್ರಮುಖರಾದ ಕಾವೇರಮ್ಮ ಸೋಮಣ್ಣ, ಚುಮ್ಮಿ ದೇವಯ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಹಾಜರಿದ್ದರು.

ಸಿದ್ದಾಪುರ

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಕಾರ್ಯಕರ್ತರು ಕೇಂದ್ರ ಸರಕಾರ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಂ.ಎಸ್ ವೆಂಕಟೇಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಎಂ.ಹೆಚ್. ಮೂಸಾ, ಗ್ರಾ.ಪಂ. ಸದಸ್ಯರಾದ ಪ್ರೇಮ, ಪೂವಮ್ಮ, ಜಾಫರ್, ಪ್ರಮುಖರಾದ ಎಂ.ಎ ನವೀದ್, ಅಶ್ರಫ್, ಅಸ್ಕರ್, ನಾಸರ್ ಸೇರಿದಂತೆ ಇನ್ನಿತರರು ಇದ್ದರು.