ಮಡಿಕೇರಿ, ಸೆ. 4: ಭಾರತೀಯ ವಿದ್ಯಾಭವನ, ಸ್ಪಿಕ್ ಮೆಕೆ ವತಿಯಿಂದ ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಪಶ್ಚಿಮಬಂಗಾಲದ ಆಕರ್ಷಣೀಯ ಚೌ ಜನಪದ ನೃತ್ಯ ಪ್ರದರ್ಶನ ಆಯೋಜಿತವಾಗಿತ್ತು

ಪಶ್ಚಿಮ ಬಂಗಾಲದ ಪುರುಲಿಯಾ ಪಟ್ಟಣದ ಥರಪದ ರಾಜಕ್ ಮತ್ತು ತಂಡದ 35 ಜಾನಪದ ನೃತ್ಯ ಕಲಾವಿದರು ಈ ವಿಶಿಷ್ಟ ನೃತ್ಯ ಪ್ರದರ್ಶನ ನೀಡಿದರು.

ಚೌ ನೃತ್ಯ ಸಮರ ಕಲಾ ನೃತ್ಯವಾಗಿದ್ದು, ಒಡಿಸ್ಸಾ, ಪಶ್ಚಿಮಬಂಗಾಲ, ಜಾರ್ಖಂಡ್ ರಾಜ್ಯಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಜಾನಪದ ಕಲೆಯಾಗಿದೆ. ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಈ ನೃತ್ಯ ಪ್ರದರ್ಶನ ಆಯೋಜಿತವಾಗಿರುತ್ತದೆ.

ದೇಶವಿದೇಶಗಳಲ್ಲಿ ಚೌ ನೃತ್ಯ ಪ್ರದರ್ಶನ ನೀಡಿರುವ ತಂಡ ಇದೇ ಮೊದಲ ಬಾರಿಗೆ ಕೊಡಗಿನ ಮಡಿಕೇರಿಯಲ್ಲಿ ಭಾರತದ ಈ ವಿಶಿಷ್ಟ ನೃತ್ಯ ಪ್ರಕಾರವನ್ನು ಪ್ರದರ್ಶಿಸಿತ್ತು. ಮಹಿಷಾಮರ್ಧಿನಿ ಕಥಾ ನೃತ್ಯ ಪ್ರದರ್ಶಿಸಿದ ತಂಡವು ಕಾಳಿ ಮತ್ತು ಮಹಿಷನ ನಡುವಿನ ರೋಚಕ ಸಮರ ಸನ್ನಿವೇಶವನ್ನು ಚಿತ್ತಾಕರ್ಷಕ ಉಡುಗೆಗಳೊಂದಿಗೆ ಅದ್ಭುತವಾಗಿ ಪ್ರದರ್ಶಿಸಿ ಕಿಕ್ಕಿರಿದು ಸೇರಿದ್ದ ಕಲಾಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ, ಕಾರ್ಯದರ್ಶಿ ಬಾಲಾಜಿ ಕಶ್ಯಪ್ , ಜವಾಹರ್ ನವೋದಯ ಪ್ರಾಂಶುಪಾಲ ಇಸಾಕ್ ಹಾಜರಿದ್ದರು.