ಮಡಿಕೇರಿ, ಸೆ. 4: ಬಹುಜನ ಸಮಾಜ ಪಕ್ಷದಿಂದ ಮಾಜಿ ಸಚಿವ ಎನ್. ಮಹೇಶ್ ಅವರನ್ನು ಉಚ್ಚಾಟಿಸಿರುವದು ಸೇರಿದಂತೆ, ಪಕ್ಷದ ರಾಜ್ಯಾಧ್ಯಕ್ಷರನ್ನು ಏಕಾಏಕಿ ಬದಲಾಯಿಸಿರುವ ಕ್ರಮದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಿಎಸ್‍ಪಿ ಪದಾಧಿಕಾರಿಗಳು ಹಾಗೂ ಸದಸ್ಯರು ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‍ಪಿ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ, ಕೊಡಗು ಸೇರಿದಂತೆ ನೆರೆಯ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಯ ಬಿಎಸ್‍ಪಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ನಮ್ಮ ನಾಯಕ ಮಹೇಶ್ ಅವರು ತೆಗೆದುಕೊಳ್ಳುವ ನಿರ್ಧಾರದಂತೆ ಮುಂದಿನ ರಾಜಕೀಯ ಹೆಜ್ಜೆ ಇಡುವದಾಗಿ ಸ್ಪಷ್ಟಪಡಿಸಿದರು.
ಮೈತ್ರಿ ಸರಕಾರದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವದು ತಮಗೆ ಅತೀವ ನೋವನ್ನು ಉಂಟು ಮಾಡಿದೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಕಳೆದ ಒಂದು ವರ್ಷದ ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದ ಹರಿರಾಮ್ ಅವರನ್ನು ಏಕಾಏಕಿಯಾಗಿ, ಕನಿಷ್ಟ ಜಿಲ್ಲಾಧ್ಯಕ್ಷರುಗಳ ಗಮನಕ್ಕೂ ತಾರದೆ ಬದಲಾಯಿಸಲಾಗಿದೆ. ಈ ಎಲ್ಲ ವಿದ್ಯಮಾನಗಳಿಂದ ಬೇಸತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಾಗುತ್ತಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಈಗಿನ ಬಿಎಸ್‍ಪಿ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಅವರಿಗೆ ಕಳುಹಿಸಿಕೊಡುತ್ತಿರುವದಾಗಿ ತಿಳಿಸಿದರು.
ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪ್ರೇಮ್‍ಕುಮಾರ್ ಮಾತನಾಡಿ, ಬಿಎಸ್‍ಪಿ ಪಕ್ಷದಲ್ಲಿ ಕಳೆÉದೆರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಅವಧಿಯಲ್ಲಿ ತಾವು ರಾಜಕೀಯ ಪಕ್ಷ ಎನ್ನುವದಕ್ಕಿಂತಲೂ ಮಿಗಿಲಾಗಿ ಬಿಎಸ್‍ಪಿಯನ್ನು ಒಂದು ಸಾಮಾಜಿಕ ಚಳವಳಿಯನ್ನಾಗಿ ಪರಿಗಣಿಸಿ ದುಡಿದಿದ್ದೇವೆ. ಆದರೆ, ಇತ್ತೀಚೆಗೆ ಪಕ್ಷವನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಕಾಣುತ್ತಿರುವ ಬೆಳವಣಿಗೆಗಳಿಂದ ಬಿಎಸ್‍ಪಿಯ ಚಳವಳಿಯ ಹಾದಿ ತಪ್ಪುತ್ತಿದೆ ಎಂದು ಟೀಕಿಸಿದರು. ಇಂತಹ ಬೆಳವಣಿಗೆಗಳ ನಡುವೆ ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟಿಸಿರುವ ಕ್ರಮವನ್ನು ಖಂಡಿಸಿ ರಾಜೀನಾಮೆ ಸಲ್ಲಿಸುತ್ತಿರುವದಾಗಿ ಹೇಳಿದರು.
ಗೋಷ್ಠಿಯಲ್ಲಿ ಬಿಎಸ್‍ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಇ. ಮಹಮ್ಮದ್ ಕುಂಞ, ಖಜಾಂಚಿ ದಿಲೀಪ್ ಕುಮಾರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜಯರಾಜ್ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಬೊಟ್ಟೋಳಂಡ ದೊರೆ ಮಣಿ ಉಪಸ್ಥಿತರಿದ್ದರು.