ವರದಿ: ಚಂದ್ರಮೋಹನ್
ಕುಶಾಲನಗರ, ಸೆ. 4: ಕುಶಾಲನಗರ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನೆರೆ ಪೀಡಿತ ಪ್ರದೇಶಗಳ ವ್ಯಾಪ್ತಿಯಲ್ಲಿ ನಾಗರಿಕರು ವಿವಿಧ ರೋಗಗಳಿಂದ ಬಳಲುತ್ತಿದ್ದು ಕುಶಾಲನಗರ ಸರಕಾರಿ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕುತ್ತಿದೆ. ಇನ್ನೊಂದೆಡೆ ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳು ಚಿಕಿತ್ಸೆಗಾಗಿ ಮುಗಿ ಬೀಳುತ್ತಿರುವ ದೃಶ್ಯಗಳು ಕೂಡ ಕಾಣಬಹುದಾಗಿದೆ.
ಕಳೆದ ಕೆಲವು ದಿನಗಳಿಂದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಳರೋಗಿಗಳ 50 ಹಾಸಿಗೆಗಳು ಭರ್ತಿಯಾಗಿದ್ದು, ಹೆಚ್ಚುವರಿ ರೋಗಿಗಳು ಬದಲಿ ವ್ಯವಸ್ಥೆ ಕಲ್ಪಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ತೆರಳಲು ಸಾಧ್ಯವಿಲ್ಲದ ರೋಗಿಗಳು ತಮ್ಮ ಚಿಕಿತ್ಸೆ ಬಗ್ಗೆ ಆತಂಕಕ್ಕೆ ಒಳಗಾಗಿರುವ ದೃಶ್ಯವೂ ಗೋಚರಿಸಿದೆ.
ಇನ್ನೊಂದೆಡೆ ಪಟ್ಟಣದ ಕಾಲನಿಯೊಂದರಲ್ಲಿ ಡೆಂಗಿ ಜ್ವರದ ಬಗ್ಗೆ ಅಲ್ಲಿನ ನಾಗರಿಕರಲ್ಲಿ ಆತಂಕ ಮೂಡಿದ್ದು ‘ಶಕ್ತಿ’ಯಲ್ಲಿ ವರದಿಯಾದ ಬೆನ್ನಲ್ಲೇ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ತಂಡ ಸ್ಥಳೀಯ ಕೆಎಚ್‍ಬಿ ಕಾಲನಿಗೆ ಭೇಟಿ ನೀಡಿದ್ದು ದಿನವಿಡೀ ಲಾರ್ವ ಸಮೀಕ್ಷೆಯಲ್ಲಿ ತೊಡಗಿದೆ.
ಖಾಸಗಿ ವೈದ್ಯರು ಡೆಂಗಿ ಪ್ರಕರಣವೆಂದು ದೃಢೀಕರಣ ನೀಡಿದ್ದರೆ ಇತ್ತ ಸರಕಾರಿ ಆಸ್ಪತ್ರೆ ವೈದ್ಯರು ಮಲೇರಿಯಕ್ಕೆ ತುತ್ತಾಗಿರುವದಾಗಿ ರೋಗಿಗಳಿಗೆ ಔಷಧಿ ನೀಡುತ್ತಿರುವದು ವಿಪರ್ಯಾಸಕ್ಕೆ ಈಡುಮಾಡಿದೆ. ಕುಶಾಲನಗರ ಆಸ್ಪತ್ರೆಗೆ ತೆರಳಿದ ಸಂದರ್ಭ ಆಸ್ಪತ್ರೆಯಲ್ಲಿ ಬೆಡ್‍ಗಳ ಕೊರತೆ ಇರುವದಾಗಿ ತಿಳಿಸಿದ ಹಿನ್ನೆಲೆಯಲ್ಲಿ ರೋಗಿಗಳು ಮಡಿಕೇರಿ ಆಸ್ಪತ್ರೆಗೆ ತೆರಳಬೇಕಾದ ಸ್ಥಿತಿ ಕುಶಾಲನಗರದಲ್ಲಿ ಸೃಷ್ಟಿಯಾಗಿದೆ.
ಕುಶಾಲನಗರದ ಕೆಎಚ್‍ಬಿ ಕಾಲನಿಯ ಕುಮಾರ್ ಎಂಬವರ ಇಬ್ಬರು ಮಕ್ಕಳು ಜ್ವರ ಪೀಡಿತರಾಗಿದ್ದು, ಸರಕಾರಿ ಆಸ್ಪತ್ರೆಗೆ ತೆರಳಿದರೆ ಮಲೇರಿಯಾ ಬಾಧೆಗೆ ಔಷಧಿ ನೀಡಿ ವ್ಯತಿರಿಕ್ತ ಪರಿಣಾಮ ಉಂಟಾಗಿ ನಂತರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಈ ಸಂದರ್ಭ ಅಲ್ಲಿನ ವೈದ್ಯರು ಡೆಂಗಿ ಪೀಡಿತ ಜ್ವರವೆಂದು ವರದಿ ನೀಡುವರದೊಂದಿಗೆ ಚಿಕಿತ್ಸೆ ನೀಡಿ ಗುಣಮುಖರಾಗಿರುವದಾಗಿ ಕುಮಾರ್ ಶಕ್ತಿಗೆ ದಾಖಲೆ ಸಹಿತ ಮಾಹಿತಿ ನೀಡಿದ್ದಾರೆ.
ಈ ನಡುವೆ ಡೆಂಗಿ ಜ್ವರದ ಆತಂಕದಲ್ಲಿ ಜನತೆ ದಿನದೂಡುತ್ತಿದ್ದರೆ ಸೋಮವಾರಪೇಟೆ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮಾತ್ರ ‘ಶಕ್ತಿ’ ವರದಿಗಾರರೊಂದಿಗೆ ಉದ್ದಟತನದಿಂದ ವರ್ತನೆ ಮಾಡಿದ ಘಟನೆ ನಡೆಯಿತು. ‘ತನ್ನಲ್ಲಿ ಕೇಳದೆ ಯಾವದೇ ರೀತಿಯ ವರದಿ ಮಾಡಬಾರದು’ ಎಂದು ತಾಕೀತು ಮಾಡಿದ ಹಿನ್ನೆಲೆಯಲ್ಲಿ ‘ಶಕ್ತಿ’ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮೋಹನ್ ಅವರಿಗೆ ಮಾಹಿತಿ ನೀಡಿದ್ದು, ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ. ಶಿವಕುಮಾರ್ ಅವರನ್ನು ಕುಶಾಲನಗರಕ್ಕೆ ಕಳುಹಿಸಿಕೊಟ್ಟು ಜ್ವರ ಪ್ರಕರಣ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ದೊರೆಯದೆ ರೋಗಿಗಳು ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ ಎಂದು ಬಿಜೆಪಿ ಪ್ರಮುಖರಾದ ಎಂ.ಡಿ. ಕೃಷ್ಣಪ್ಪ ತಿಳಿಸಿದ್ದಾರೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಡೆಂಗಿ ಖಾಯಿಲೆ ಬಗ್ಗೆ ‘ಶಕ್ತಿ’ಯಲ್ಲಿ ವರದಿಯಾದ ಬೆನ್ನಲ್ಲೇ ಕುಶಾಲನಗರ ಆರೋಗ್ಯ ಸಮುದಾಯ ಕೇಂದ್ರ ಆರೋಗ್ಯ ನಿರೀಕ್ಷಕ ಮುಖೇಶ್, ಆರೋಗ್ಯ ಸಹಾಯಕಿ ಡಿ.ಎಂ. ಸುಶೀಲ ಮತ್ತು ಆಶಾ ಕಾರ್ಯಕರ್ತೆಯರ ತಂಡ ಕೆಎಚ್‍ಬಿ ಕಾಲನಿಯ ಪ್ರತಿ ಮನೆಮನೆಗೆ ತೆರಳಿ ಸ್ವಚ್ಛತೆ ಬಗ್ಗೆ ಅರಿವು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.
ಬಡಾವಣೆಯ ಬಹುತೇಕ ಮನೆಯಲ್ಲಿ ನೀರಿನ ತೊಟ್ಟಿಯಲ್ಲಿ, ಟಯರ್ ಮತ್ತಿತರ ವಸ್ತುಗಳಲ್ಲಿ ಲಾರ್ವಗಳು ತುಂಬಿ ನಿಂತಿರುವದು ಕಂಡುಬಂದಿದೆ ಎಂದು ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ತಿಳಿಸಿದ್ದಾರೆ. ಈ ನಡುವೆ ಪಟ್ಟಣ ಪಂಚಾಯ್ತಿ ಮೂಲಕ ಕಾಲನಿಯ ಸ್ವಚ್ಛತೆ ಮಾಡುತ್ತಿರುವ ಕಾರ್ಯ ಗೋಚರಿಸಿದೆ.
ಪ್ರತಿ ಮನೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಸಾಂಕ್ರಾಮಿಕ ರೋಗ ಹರಡುವದರಿಂದ ದೂರವಿರಬಹುದು ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನಾಗರಿಕರಿಗೆ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ದಿನನಿತ್ಯ 350 ಕ್ಕೂ ಅಧಿಕ ಹೊರ ರೋಗಿಗಳು ದಾಖಲಾಗುತ್ತಿದ್ದು ಆಸ್ಪತ್ರೆ ಆವರಣ ರೋಗಿಗಳಿಂದ ತುಂಬಿ ತುಳುಕು ತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇತ್ತೀಚಿನ ಪ್ರವಾಹದ ನಂತರ ಬಹುತೇಕ ಜನರಿಗೆ ನೆಗಡಿ, ಕೆಮ್ಮು, ವೈರಲ್ ಫಿವರ್ ಮತ್ತಿತರ ರೋಗಗಳು ಉಲ್ಭಣಗೊಂಡಿವೆ ಎಂದು ಕುಶಾಲನಗರ ಆರೋಗ್ಯ ಸಮುದಾಯ ಕೇಂದ್ರ ಆಡಳಿತಾಧಿಕಾರಿ ಡಾ.ಮಧುಸೂದನ್ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೊಪ್ಪ, ಕೂಡಿಗೆ ವ್ಯಾಪ್ತಿಯಲ್ಲಿ ಕೂಡ ರೋಗಿಗಳ ಸಂಖ್ಯೆ ಅಧಿಕಗೊಂಡಿದ್ದು ಎಲ್ಲಾ ಆಸ್ಪತ್ರೆ, ಕ್ಲಿನಿಕ್‍ಗಳ ಮುಂದೆ ಸರದಿ ಸಾಲು ಕಂಡುಬರುವದರೊಂದಿಗೆ ಔಷಧಿ ಅಂಗಡಿಗಳಲ್ಲಿ ಕೂಡ ರೋಗಿಗಳ ಓಡಾಟ ಕಾಣಬಹುದು.