ಕೂಡಿಗೆ, ಸೆ. 4: ಕೂಡಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮೂರು ವರ್ಷಗಳ ಹಿಂದೆ ಕೊರೆಸಲಾಗಿರುವ ಕೊಳವೆ ಬಾವಿಯಲ್ಲಿ ನೀರು ಕಲುಷಿತ ಗೊಂಡಿದ್ದು, ಈ ಕೊಳವೆ ಬಾವಿಯಿಂದ ನೀರನ್ನು ಕುಡಿಯಲು ಉಪಯೋಗಿಸಬಾರದೆಂದು ಆರೋಗ್ಯ ಇಲಾಖೆಯವರು ಶಾಲೆಯ ಮುಖ್ಯಸ್ಥರಿಗೆ, ಗ್ರಾಮ ಪಂಚಾಯಿತಿಗೆ ಸೂಚಿಸಿದ್ದಾರೆ.
ಆರೋಗ್ಯ ಇಲಾಖೆಯವರು ಪ್ರತಿವರ್ಷದಂತೆ ಕೊಳವೆ ಬಾವಿಗಳ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ, ಕುಡಿಯಲು ಯೋಗ್ಯವೇ ಅಥವಾ ಯೋಗ್ಯವಾಗಿಲ್ಲವೇ ಎಂಬದನ್ನು ತಿಳಿಸುತ್ತಾರೆ. ಅದರಂತೆ ಕಳೆದ ತಿಂಗಳಲ್ಲಿ ಕೂಡಿಗೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಕೊಳವೆ ಬಾವಿಯ ನೀರನ್ನು ಪರೀಕ್ಷಿಸಲಾಗಿ, ನೀರು ಕುಡಿಯಲು ಯೋಗ್ಯವಾಗಿಲ್ಲ, ಕಲುಷಿತಗೊಂಡಿದ್ದು, ಶಾಲೆಯಲ್ಲಿ ಕುಡಿಯಲು ಹಾಗೂ ಆಹಾರ ತಯಾರಿಸಲು ಬಳಸಬಾರದೆಂದು ಸೂಚಿಸಿದ್ದರು.
ಆದರೂ, ಈ ಕೊಳವೆ ಬಾವಿಯ ನೀರನ್ನು ಬಳಸುತ್ತಿದ್ದ ಹಿನ್ನೆಲೆ ಕಳೆದ ಎರಡು ದಿನಗಳ ಹಿಂದೆ ಆರೋಗ್ಯ ಇಲಾಖೆಯವರು ಮತ್ತೊಮ್ಮೆ ಪ್ರಯೋಗಾಲಯದಲ್ಲಿ ನೀರನ್ನು ಪರೀಕ್ಷಿಸಿ ಕಲುಷಿತಗೊಂಡು ಕುಡಿಯಲು ಯೋಗ್ಯವಲ್ಲದ ನೀರಾಗಿರುವದನ್ನು ಮತ್ತೊಮ್ಮೆ ದೃಢೀಕರಿಸಿ, ಇಂದು ಶಾಲೆಯ ಮುಖ್ಯೋಪಾಧ್ಯಾಯರಿಗೆ ವಿಷಯ ತಿಳಿಸಿ, ವಿದ್ಯಾರ್ಥಿಗಳಿಗೆ ಕುಡಿಯಲು ಹಾಗೂ ಆಹಾರ ತಯಾರಿಸಲು ಈ ನೀರನ್ನು ಬಳಸದಂತೆ ಸೂಚಿಸಿದ್ದಾರೆ.
ಈ ವಿಷಯವಾಗಿ ಮತ್ತೊಮ್ಮೆ ಗ್ರಾಮ ಪಂಚಾಯಿತಿಯವರ ಗಮನಕ್ಕೆ ತಂದಿರುತ್ತಾರೆ. ಇದಕ್ಕೆ ಸಂಬಂಧ ಪಟ್ಟಂತೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕುಡಿಯುವ ನೀರು ವಿಭಾಗಕ್ಕೆ ಪತ್ರವ್ಯವಹಾರ ನಡೆಸಿ ಸರಿಪಡಿಸುವ ಅಥವಾ ಬದಲಿ ಕೊಳವೆ ಬಾವಿಯನ್ನು ಕೊರೆಸುವ ಯೋಜನೆಗೆ ಮುಂದಾಗುತ್ತೇವೆ ಎಂದಿದ್ದಾರೆ. ಅಲ್ಲಿಯವರೆಗೆ ಶಾಲಾ ಮಕ್ಕಳಿಗೆ ಬದಲಿ ನೀರಿನ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ.
ಈ ಕೊಳವೆ ಬಾವಿಯಿಂದ ಶಾಲೆಗೆ ಮತ್ತು ಸ್ಥಳೀಯ ಎರಡು ಬೀದಿಗಳಿಗೆ ನೀರನ್ನು ನಲ್ಲಿಗಳ ಮೂಲಕ ಸರಬರಾಜು ಮಾಡಲಾಗುತ್ತಿದೆ. ಆ ಎರಡು ಬೀದಿಯ ಮನೆಗಳು ಈ ನೀರನ್ನು ಉಪಯೋಗಿಸುತ್ತಿದ್ದು, ಇನ್ನು ಮುಂದೆ ಈ ನೀರಿನ ವ್ಯವಸ್ಥೆಯನ್ನು ಸರಿಪಡಿಸುವವರೆಗೆ ಕುದಿಸಿ, ಆರಿಸಿ ನಂತರ ಕುಡಿಯುವ ವ್ಯವಸ್ಥೆ ಮಾಡುವದು ಉತ್ತಮ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ.
ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕಿ ಮಾತನಾಡಿ, ಆರೋಗ್ಯ ಇಲಾಖೆ ಯವರು ನೀರನ್ನು ಪರೀಕ್ಷಿಸಿ ಉಪಯೋಗಿಸದಂತೆ ತಿಳಿಸಿದ ಹಿನ್ನೆಲೆ ಇನ್ನು ಮುಂದೆ ಶಾಲೆಯ ವಿದ್ಯಾರ್ಥಿ ಗಳಿಗೆ ಹಾಗೂ ಆಹಾರ ತಯಾರಿಕೆಗೆ ಪಕ್ಕದಲ್ಲಿ ಇರುವ ಶುದ್ಧ ಕುಡಿಯುವ ನೀರು ಘಟಕದಿಂದ ನೀರನ್ನು ತಂದು ಉಪಯೋಗಿಸುತ್ತೇವೆ. ಗ್ರಾಮ ಪಂಚಾಯಿತಿಯವರು ಈ ವ್ಯವಸ್ಥೆಯನ್ನು ಸರಿಪಡಿಸಿ, ಆರೋಗ್ಯ ಇಲಾಖೆಯವರು ನೀರನ್ನು ಉಪಯೋಗಿಸಲು ತಿಳಿಸಿದ ನಂತರ ಉಪಯೋಗಿಸುತ್ತೇವೆ ಎಂದು ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ