ಚೆಟ್ಟಳ್ಳಿ, ಸೆ. 5: ಪ್ರಕೃತಿ ವಿಕೋಪಕ್ಕೆ ತುತ್ತಾದ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡುವ ಸಲುವಾಗಿ ಗುತ್ತಿಗೆದಾರರಿಗೆ ಮಡಿಕೇರಿಯ ಕೆ. ನಿಡುಗಣೆ ಪಂಚಾಯಿತಿಗೆ ಒಳಪಡುವ ಆರ್.ಟಿ.ಓ. ಕಚೇರಿಯ ಬಳಿ ಮಾದರಿ ಮನೆಗಳನ್ನು ನಿರ್ಮಿಸಲು ಸರಕಾರ ಜಾಗ ಗೊತ್ತು ಮಾಡಿದ್ದಂತೆ ಏಳೆಂಟು ಗುತ್ತಿಗೆ ದಾರರು ಒಬ್ಬರಿಗೊಂದರಂತೆ ಮನೆಯನ್ನು ನಿರ್ಮಿಸಿದ್ದರು.
ಆದರೆ ಈ ಮನೆಯನ್ನು ನಿರ್ಮಿಸಿ ಈಗಾಗಲೇ ಒಂದು ವರ್ಷ ಕಳೆದು ಹೋಗಿದ್ದು ಅದಕ್ಕೆ ಈಗ ದಿಕ್ಕು ದೆಸೆ ಇಲ್ಲದಂತಾಗಿದೆ. ಮನೆಯ ಬಾಗಿಲು ಕಿಟಕಿಗಳನ್ನು ಕಳ್ಳರು ಮುರಿದು ಹೊತ್ತೊಯ್ದಿದ್ದು ಒಳಗೆ ಇರುವ ವಿದ್ಯುತ್ ಬಲ್ಬುಗಳ ಹೋಲ್ಡರ್, ಸ್ವಿಚ್‍ಗಳನ್ನೂ ಮುರಿದು ನಲ್ಲಿಗಳನ್ನು ಕದ್ದೊಯ್ದಿದ್ದಾರೆ.
ಸಂಜೆ ಐದು ಗಂಟೆಯ ಮೇಲೆ ಇಲ್ಲಿನ ಆರ್.ಟಿ.ಓ. ಕಚೇರಿ ಮುಚ್ಚುವದರಿಂದ ಈ ಪ್ರದೇಶ ನಿರ್ಜನವಾಗಿರುತ್ತದೆ.
ಇದನ್ನೇ ಬಳಸಿಕೊಂಡ ಪುಂಡರು ಈ ಮನೆಗಳನ್ನು ಬೀಡಿ, ಸಿಗರೇಟು ಹಾಗೂ ಗಾಂಜಾದ ಅಡ್ಡೆಗಳಾಗಿ ಮಾಡಿಕೊಂಡಿದ್ದಾರೆ. ಇದರಲ್ಲಿ ಕೆಲವು ಮನೆಗಳು ಅನೈತಿಕ ತಾಣವಾಗಿದ್ದು , ಮಳೆಗೆ ಸೋರಿಕೊಳ್ಳುತ್ತಿವೆ. ಹೀಗೆಯೇ ಈ ಮನೆಗಳನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಎಲ್ಲ ಮನೆಗಳ ವಸ್ತುಗಳು ಕಳ್ಳರ ಪಾಲಾಗುವದರಲ್ಲಿ ಸಂಶಯವಿಲ್ಲ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಲ್ಲಿಗೆ ಒಬ್ಬ ಕಾವಲುಗಾರನನ್ನು ನೇಮಿಸಿ ಅಲ್ಲಿನ ಅನೈತಿಕ ವ್ಯವಹಾರಗಳನ್ನು ತಡೆಯುವದು ಒಳಿತೆಂಬದು ಸ್ಥಳೀಯರ ಅಭಿಪ್ರಾಯವಾಗಿದೆ.
-ಪುತ್ತರಿರ ಪಪ್ಪು ತಿಮ್ಮಯ್ಯ