ಮಡಿಕೇರಿ, ಸೆ. 5: ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬಂಧಿಸಿದಂತೆ ಕಾರ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಹಿನ್ನೆಲೆಯಲ್ಲಿ ತಾ. 6 ರಂದು (ಇಂದು) ನಡೆಯಲಿರುವ ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ದಶಮಂಟಪ ಸಮಿತಿ ಈಗಾಗಲೇ ಆಯ್ಕೆ ಮಾಡಿರುವ ಅಭ್ಯರ್ಥಿಯನ್ನೇ ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಂತೆ ಜಿಲ್ಲಾಧಿಕಾರಿಗಳ ಮನವೊಲಿಕೆಗೆ ಯತ್ನಿಸಲು ದಶಮಂಟಪ ಸಮಿತಿ ತೀರ್ಮಾನಿಸಿದೆ.

ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಹಲವು ವರ್ಷಗಳಿಂದ ದಸರಾ ಸಮಿತಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ದಶಮಂಟಪ ಸಮಿತಿಯೆ ಆಯ್ಕೆ ಮಾಡುತ್ತಾ ಬಂದಿದೆ. ಪ್ರಸಕ್ತ ವರ್ಷವೂ ಚುನಾವಣೆ ಮೂಲಕವೇ ರಾಬಿನ್ ದೇವಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತಾದರೂ, ನಿನ್ನೆ ದಿನ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಬಗ್ಗೆ ಗೊಂದಲ ಸೃಷ್ಟಿಯಾಯಿತು. ಈ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ಇಂದು ಸಭೆ ಕರೆಯಲಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಂಟಪ ಸಮಿತಿ ಪ್ರಮುಖರು ಹಲವಾರು ವರ್ಷಗಳಿಂದ ನಡೆದು ಬಂದಿರುವಂತೆ ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಹತ್ತು ಮಂಟಪ ಹಾಗೂ ನಾಲ್ಕು ಕರಗ ಸಮಿತಿಗಳೆ ಆಯ್ಕೆ ಮಾಡುವ ಕ್ರಮ ಮುಂದುವರೆಯಬೇಕೆಂದರು. ದಸರಾ ಸಮಿತಿ ಬೈಲಾ ತಿದ್ದುಪಡಿಯಾಗಿಲ್ಲ ಎಂಬ ಕಾರಣಕ್ಕಾಗಿ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವೇಳೆ ಬೈಲಾ ತಿದ್ದುಪಡಿಯಾದರೂ ಕಾರ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಮಂಟಪ ಹಾಗೂ ಕರಗ ಸಮಿತಿಗಳಿಗೆ ಸೀಮಿತವಾಗಿರಬೇಕು ಎಂದು ಒತ್ತಾಯಿಸಿದರಲ್ಲದೆ ಬೈಲಾ ತಿದ್ದುಪಡಿ ಮಾಡುವದಾದರೆ ಈ ಬಾರಿಯು ದಸರಾ ಉತ್ಸವದ ನಂತರ ಮಾಡುವಂತಾಗಲಿದೆ ಎಂದರು.

ಪ್ರಸ್ತುತ ಉಂಟಾಗಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಶಾಸಕರುಗಳನ್ನು ಭೇಟಿಯಾಗಲು ತೀರ್ಮಾನಿಸಲಾಯಿತು.

ವೇದಿಕೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಸತೀಶ್, ಪ್ರದೀಪ್ ಇದ್ದರು.