ಸಿದ್ದಾಪುರ, ಸೆ. 5: ನದಿ ತೀರದಲ್ಲಿ ಮನೆಗಳನ್ನು ಕಳೆದುಕೊಂಡಿರುವ ಹಾಗೂ ಹಾನಿಗೊಳಗಾದ ಕುಟುಂಬ ಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಜಾಗವನ್ನು ಗುರುತಿಸಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದ್ದಾರೆ.ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭಾಗಶಃ ಹಾನಿಗೊಳಗಾದ ಮನೆಗಳ ಸಂತ್ರಸ್ತರಿಗೆ 25 ಸಾವಿರದ ಚೆಕ್ ಹಾಗೂ ಕಿಟ್ ಗಳನ್ನು ವಿತರಿಸಿದ ನಂತರ ಸಂತ್ರಸ್ತರಿಗೆ ಗುರುತಿಸಿದ ಸ್ಥಳಗಳಿಗೆ ಭೇಟಿ ನೀಡಿ ಜಾಗವನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು ಹಾಗೂ ಕುಂಬಾರಗುಂಡಿ ಭಾಗದ ನದಿ ತೀರದ ಮನೆಗಳು ಪ್ರವಾಹಕ್ಕೆ ಸಿಲುಕಿ ಹಾನಿಯಾಗಿರುತ್ತದೆ. ಅಲ್ಲದೆ ನೂರಾರು ಮನೆಗಳು ಕುಸಿದಿರುತ್ತವೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತ ತ್ವರಿತಗತಿಯಲ್ಲಿ ನೆಲ್ಯಹುದಿಕೇರಿಯಲ್ಲಿ ಪೈಸಾರಿ ಜಾಗಗಳನ್ನು ಗುರುತಿಸಿದೆ. ಒತ್ತುವರಿ ಜಾಗವನ್ನು ತೆರವು ಗೊಳಿಸಿ ಸಂತ್ರಸ್ತರಿಗೆ ಸರಕಾರದ ವತಿಯಿಂದ ಶಾಶ್ವತ ಸೂರುಗಳನ್ನು ಒದಗಿಸಿ ಕೊಡಲಾಗುವದು ಎಂದು ತಿಳಿಸಿದರು.

ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಸುಮಾರು 50 ಎಕರೆಯಷ್ಟು ಪೈಸಾರಿ ಜಾಗ ಒತ್ತುವರಿಯಾಗಿರುವದು ಕುಂಡುಬಂದಿದ್ದು, ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರು ಸಹ ಸರಕಾರ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸುವದಾಗಿ ತಿಳಿಸಿದರು.

(ಮೊದಲ ಪುಟದಿಂದ) ಸಂತ್ರಸ್ತರಿಗೆ 30x40 ಅಳತೆಯ ನಿವೇಶನಗಳನ್ನು ನೀಡಿ ರೂ 5 ಲಕ್ಷದ ಮನೆಗಳನ್ನು ನಿರ್ಮಿಸಿಕೊಡುವದಾಗಿ ಮಾಹಿತಿ ನೀಡಿದರು.

ನದಿ ತೀರದ ನಿವಾಸಿಗಳು ಇನ್ನು ಮುಂದಕ್ಕೆ ನದಿ ತೀರದಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಲ್ಲಿ ಸರಕಾರದ ವತಿಯಿಂದ ನೆಲಸಮಗೊಳಿಸುವದಾಗಿ ಎಚ್ಚರಿಸಿದರು. ಭಾಗಶಃ ಹಾನಿಗೊಳಗಾದ ಮನೆಯವರಿಗೆ ನೀಡಿರುವ ಪರಿಹಾರದ ಮೊತ್ತದಲ್ಲಿ ಬೇರೆ ಯಾವದಕ್ಕೂ ಖರ್ಚು ಮಾಡದೆ ಮನೆಗಳನ್ನು ದುರಸ್ತಿಪಡಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೂ ಹಾಗೂ ನದಿ ತೀರದ ನಿವಾಸಿಗಳಿಗೂ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಂದ ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ ಜವರೇಗೌಡ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿಯಲ್ಲಿ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಗ್ರಾಮ ಪಂಚಾಯತಿ, ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು. ಪ್ರವಾಹ ಪೀಡಿತ ಪ್ರದೇಶವಾಗಿರುವ ನೆಲ್ಯಹುದಿಕೇರಿ, ಸಿದ್ದಾಪುರ, ಪರಂಬು ಪೈಸಾರಿ ವ್ಯಾಪ್ತಿಯ ನದಿ ತೀರದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಲು ಪೈಸಾರಿ ಜಾಗವನ್ನು ಗುರುತಿಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ತೆರವು ಕಾರ್ಯದ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯಲಿದೆ ಎಂದರು. ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಿಕೊಡಲು ಆದೇಶ ನೀಡಿದ ಮೇರೆಗೆ ಪೈಸಾರಿ ಜಾಗವನ್ನು ತೆರವುಗೊಳಿಸಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಕೊಡುವದಾಗಿ ತಿಳಿಸಿದರು. ಇದೀಗ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಿದ್ದು ಅಗತ್ಯ ಇದ್ದಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಲು ಸಿದ್ಧತೆ ಕೈಗೊಂಡಿರುವದಾಗಿ ತಿಳಿಸಿದರು.

ಇದೇ ಸಂದರ್ಭ ಕಂದಾಯ ಇಲಾಖೆಯು ಗುರುತಿಸಿದ್ದ ನೆಲ್ಯಹುದಿಕೇರಿಯ ಬೆಟ್ಟದಕಾಡು ಹಾಗೂ ಬರಡಿಯಲ್ಲಿ ಒತ್ತುವರಿಯಾಗಿರುವ ಜಾಗವನ್ನು ಶಾಸಕರು ಹಾಗೂ ಕಂದಾಯ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ಬಳಿಕ ಗುಹ್ಯ ಕರಡಿಗೋಡಿಗೆ ಭೇಟಿ ನೀಡಿದ ನಂತರ ಘಟ್ಟದಳ್ಳದಲ್ಲಿ ಈ ಹಿಂದೆ ಕಂದಾಯ ಇಲಾಖೆ ವಶಪಡಿಸಿಕೊಂಡಿದ್ದ ಒತ್ತುವರಿ ಜಾಗವನ್ನು ಪರಿಶೀಲನೆ ಮಾಡಿದರು. ಈ ಜಾಗದಲ್ಲಿ ತೋಡು ಹರಿಯುತ್ತಿದ್ದು ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡಲು ಯೋಗ್ಯವಲ್ಲ ಎಂದು ವೀರಾಜಪೇಟೆ ತಹಶೀಲ್ದಾರ್ ಪುರಂದರ ಹಾಗೂ ಸಿದ್ದಾಪುರ ಪಿಡಿಓ ವಿಶ್ವನಾಥ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಸಿದ್ದಾಪುರ ಭಾಗದಲ್ಲಿ ಸರಕಾರಿ ಜಾಗ ಇರುವದರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.

ಗುಹ್ಯ ಭಾಗದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ತಮಗೆ ಶಾಶ್ವತ ಸೂರು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭ ಜಿಲ್ಲಾ ಉಪ ವಿಭಾಗಾಧಿಕಾರಿ ಜವರೇಗೌಡ, ಸೋಮವಾರಪೇಟೆ ತಹಶೀಲ್ದಾರ್ ಗೋವಿಂದರಾಜು, ಗ್ರಾಮ ಲೆಕ್ಕಿಗ ಸಂತೋಷ್, ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ತಾ.ಪಂ ಸದಸ್ಯೆ ಸುಹಾದಾ, ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಉಪಾಧ್ಯಕ್ಷೆ ಸೆಫಿಯಾ ಮೊಹಮ್ಮದ್, ವಿ.ಎಸ್.ಎಸ್.ಎನ್ ಅಧ್ಯಕ್ಷ ಪಿ.ಸಿ ಅಚ್ಚಯ್ಯ, ಪ್ರಮುಖರಾದ ವಿ.ಕೆ ಲೋಕೇಶ್, ಗ್ರಾ.ಪಂ ಸದಸ್ಯರುಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಚಿತ್ರ, ವರದಿ: ವಾಸು