ಮಡಿಕೇರಿ, ಸೆ. 5: ಶಿಕ್ಷಕರಾಗಿ ಸೇವೆಗೆ ಸೇರಿದವರು ಶಿಕ್ಷಕರಾಗಿಯೇ ನಿವೃತ್ತಿ ಹೊಂದುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಬದಲಾಗಬೇಕು. ಶಿಕ್ಷಕರಿಗೆ ಕಾಲ ಕಾಲಕ್ಕೆ ಬಡ್ತಿ ದೊರೆಯುವಂತಾಗಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಹಯೋಗದಲ್ಲಿ ನಗರದ ಸಂತ ಜೋಸೆಫರ ಶಾಲೆಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪದವಿ, ಸ್ನಾತಕೋತ್ತರ ಪದವಿ ಪಡೆದವರು ಸೇರಿದಂತೆ ಎಲ್ಲರಿಗೂ ಬಡ್ತಿ ಸಿಗಬೇಕು ಎಂದ ಶಾಸಕರು ಉತ್ತಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅತಿ ಮುಖ್ಯ. ಪ್ರಾಥಮಿಕ ಶಿಕ್ಷಕರು ಪ್ರತಿಯೊಬ್ಬರಿಗೂ ಸಹ ಸದಾ ನೆನಪು ಇರುತ್ತಾರೆ. ಗುರುಗಳಿಗೆ ಸಮಾಜದಲ್ಲಿ ತನ್ನದೇ ಆದ ಗೌರವ ಸ್ಥಾನವಿದೆ ಎಂದರು.
ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸುವಂತಾಯಿತು. ಸದ್ಯ ಮಳೆ ಕಡಿಮೆಯಾಯಿತಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಸಂದರ್ಭದಲ್ಲಿ ಮತ್ತೆ ಮಳೆ ಆರಂಭವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಬಲಿಷ್ಠ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
(ಮೊದಲ ಪುಟದಿಂದ) ಆರ್.ಆರ್. ಆಸ್ಪತ್ರೆಯ ಮಕ್ಕಳ ತಜ್ಞ ಬಿ.ಸಿ.ನವೀನ್‍ಕುಮಾರ್ ಮಾತನಾಡಿ ತಂದೆ-ತಾಯಂದಿರು ಮಕ್ಕಳಿಗೆ ಜೀವ ನೀಡಿದರೆ, ಶಿಕ್ಷಕರು ಜೀವನ ನೀಡುತ್ತಾರೆ. ಆದ್ದರಿಂದ ಶಿಕ್ಷಕರನ್ನು ಸದಾ ಸ್ಮರಿಸುವಂತಾಗಬೇಕು ಎಂದು ಅವರು ಹೇಳಿದರು.
ವಿದ್ಯಾಭ್ಯಾಸವು ಸತ್ಯಾನ್ವೇಷಣೆ ಮಾಡುವಂತದ್ದು. ಆದ್ದರಿಂದ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ದೊರೆಯಬೇಕು. ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಡಾ.ನವೀನ್‍ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದಲ್ಲಿನ 2 ಕೋಟಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಎಲ್ಲಾ ಮಕ್ಕಳಿಗೂ ಪೌಷ್ಟಿಕ ಆಹಾರ ದೊರೆಯಬೇಕು. ಶಿಕ್ಷಣವು ವೃತ್ತಿ ನೈಪುಣ್ಯ ಜೊತೆಗೆ ಸಾಮಾಜಿಕ ಪ್ರಜ್ಞೆ ಬೆಳೆಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದರು.
ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವದೇ ಶಿಕ್ಷಣವಾಗಿದೆ. ಆತ್ಮಾಭಿಮಾನದಿಂದ ಶಿಕ್ಷಣ ವೃತ್ತಿ ಗೌರವಿಸಬೇಕು ಎಂದು ಸಲಹೆ ಮಾಡಿದರು.
ಶಿಕ್ಷಕರ ಜವಾಬ್ದಾರಿ ಮತ್ತು ಮಹತ್ವ ಹೆಚ್ಚಿನದ್ದಾಗಿದ್ದು, ತಾಳ್ಮೆ, ಸಂಯಮ, ಸಮಯ, ವೃತ್ತಿ ಕೌಶಲ್ಯತೆ ಶಿಕ್ಷಕರಲ್ಲಿ ಇರಬೇಕು. ಪ್ರತಿಯೊಬ್ಬರಲ್ಲೂ ಮುನ್ನೋಟ ಇದ್ದಾಗ ಅಭಿವೃದ್ಧಿ ಕಾಣಬಹುದು. ಇತಿಹಾಸ ಹೇಳಿ ಕೊಡುವದರ ಜೊತೆಗೆ ಇತಿಹಾಸ ನಿರ್ಮಾಣ ಮಾಡಬೇಕು ಎಂದು ನುಡಿದರು.
ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮಾತನಾಡಿ ಶಿಕ್ಷಕರು ದೇವರ ಸಮಾನ. ತಂದೆ ತಾಯಂದಿರು ಪೋಷಕರು ಜೊತೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಮಯವನ್ನು ಕಳೆಯುತ್ತಾರೆ. ಆದ್ದರಿಂದ ಶಿಕ್ಷಕರು ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳನ್ನು ನೋಡಿಕೊಳ್ಳಬೇಕು ಎಂದರು.
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಶಿಕ್ಷಕರು ತುಂಬಾ ಸಹಕಾರ ನೀಡಿದ್ದು, ಸಂತ್ರಸ್ತರ ರಕ್ಷಣೆಯಲ್ಲಿಯೂ ತೊಡಗಿಸಿಕೊಂಡಿದ್ದರು ಎಂದು ಅವರು ಸ್ಮರಿಸಿದರು. ಪಠ್ಯಪುಸ್ತಕದ ಜೊತೆಗೆ ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಮಕ್ಕಳಿಗೆ ತಿಳಿಸಬೇಕು ಎಂದರು.
ಜಿ.ಪಂ.ಉಪಾಧ್ಯಕೆÀ್ಷ ಲೋಕೇಶ್ವರಿ ಗೋಪಾಲ್ ಮಾತನಾಡಿ ಸಮರ್ಪಣಾ ಮನೋಭಾವದಿಂದ ಪ್ರತಿಯೊಬ್ಬರೂ ದುಡಿಯುವಂತಾಗಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ. ಈಗಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಜೊತೆಗೆ ಮಾನವೀಯ ವಿಷಯಗಳು ಅತಿ ಮುಖ್ಯವಾಗಿವೆ ಎಂದರು.
ತಾ.ಪಂ. ಅಧ್ಯಕೆÀ್ಷ ತೆಕ್ಕಡೆ ಶೋಭ ಮೋಹನ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ, ಕ.ರಾ.ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್.ಚೇತನ್ ಮಾತನಾಡಿದರು.
ಕೂಡಿಗೆ ಡಯಟ್ ಪ್ರಾಂಶುಪಾಲ ಜವರೇಗೌಡ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಬಿ.ರವಿ,ಕ.ರಾ.ಸ.ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ಅನುದಾನಿತ ಪ್ರೌಢಶಾಲಾ ನೌಕರರ ಸಂಘದ ಅಧ್ಯಕ್ಷ ಪಿ.ಎ.ಪ್ರಭುಕುಮಾರ್, ಕೊ.ಜಿ.ಪ್ರಾ.ಶಾ. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಕೆ. ಮೆಹಬೂಬ್ ಸಾಬ್, ಮಡಿಕೇರಿ ತಾ.ಕ.ರಾ.ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ಕ.ರಾ.ಸ.ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್.ತಮ್ಮಯ್ಯ, ಅನುದಾನಿತ ಪ್ರೌಢ ಶಾಲಾ ನೌಕರರ ಸಂಘದ ಅಧ್ಯಕ್ಷ ವಿಲ್‍ಫ್ರೆಡ್ ಕ್ರಾಸ್ತಾ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ಪೂರ್ಣೇಶ್, ಕ.ರಾ.ಎಸ್.ಸಿ.ಎಸ್.ಟಿ. ಪ್ರಾ.ಮಾ.ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಬಿ.ಸಿ.ರಾಜು ಇತರರು ಇದ್ದರು.
ಇತ್ತೀಚೆಗೆ ದೆಹಲಿಯಲ್ಲಿ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರಿಂದ ಸನ್ಮಾನಿಸಲ್ಪಟ್ಟ ನಿವೃತ್ತ ಶಿಕ್ಷಕ ಬಲಮುರಿ ಗ್ರಾಮದ ಕಟ್ರತನ ಬೆಳ್ಯಪ್ಪ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಪ್ರೌಢ ಶಾಲಾ ವಿಭಾಗದಲ್ಲಿ ಮಡಿಕೇರಿ ತಾಲೂಕಿನ ಚೆಂಬು ಸ.ಪ್ರೌ. ಶಾಲೆಯ ಮುಖ್ಯ ಶಿಕ್ಷಕಿ ದೇಚಮ್ಮ, ಸೋಮವಾರಪೇಟೆ ತಾಲೂಕಿನ ನೇರುಗಳಲೆ ಸ.ಪ್ರೌ. ಶಾಲೆಯ ಸಹ ಶಿಕ್ಷಕ ಎಸ್.ಎಂ. ಇಬ್ರಾಹಿಂ, ವೀರಾಜಪೇಟೆ ತಾಲೂಕಿನ ಬೆಕ್ಕೆಸೊಡ್ಲುರು ಶಾರದ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಆರ್. ಬಸವರಾಜು, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಡಿಕೇರಿ ತಾಲೂಕಿನ ಚೆರಿಯಪರಂಬು ಸ.ಹಿ.ಪ್ರಾ ಶಾಲೆಯ ಸಹಶಿಕ್ಷಕ ಟಿ.ಹೆಚ್. ಸುಕುಮಾರ್, ಸೋಮವಾರಪೇಟೆ ತಾಲೂಕಿನ ಕೂಡಿಗೆ ಸ.ಮಾ.ಪ್ರಾ. ಶಾಲೆಯ ದೈಹಿಕ ಶಿಕ್ಷಕ ಎಂ.ಎ. ಆನಂದ್, ವೀರಾಜಪೇಟೆ ತಾಲೂಕಿನ ಬೇಟೋಳಿ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಬಿ. ಸೀತಾ, ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಮಡಿಕೇರಿ ತಾಲೂಕಿನ ಹಳೆ ಚೆಂಬು ಸ.ಕಿ.ಪ್ರಾ ಶಾಲೆಯ ಸಹ ಶಿಕ್ಷಕಿ ಸೆಲೆಸ್ಟಿನ್ ಲೋಬೋ ಹಾಗೂ ಸೋಮವಾರಪೇಟೆ ತಾಲೂಕಿನ ದೊಡ್ಡಭಂಡಾರ ಸ.ಕಿ.ಪ್ರಾ. ಶಾಲೆಯ ಸಹಶಿಕ್ಷಕ ಬಿ.ಟಿ. ವಿಶ್ವನಾಥ್ ಇವರುಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಳೆದ ವರ್ಷ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಶಿಕ್ಷಕರು, ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಡಾ.ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಸ್ವಾಗತಿಸಿದರು. ಶಿಕ್ಷಕ ವೃಂದದವರು ನಾಡಗೀತೆ ಮತ್ತು ರೈತ ಗೀತೆ ಹಾಡಿದರು. ರೇವತಿ ರಮೇಶ್ ನಿರೂಪಿಸಿದರು. ಮಡಿಕೇರಿ ಬಿ.ಇ.ಓ, ಟಿ.ಎನ್.ಗಾಯತ್ರಿ ವಂದಿಸಿದರು.