ಗೋಣಿಕೊಪ್ಪಲು, ಸೆ. 5: ಕಳೆದ ಒಂದು ವಾರದ ಹಿಂದೆ ಹಾತೂರು ಬಳಿಯ ಕುಂದ ರಸ್ತೆಯಲ್ಲಿ ಬೈಕ್ ಅವಘಡ ಸಂಭವಿಸಿದ್ದು ಬೈಕ್ ಸವಾರ ಖಾಸಗಿ ಬಸ್ ಮಾಲೀಕರಾಗಿದ್ದ ಕೆ.ಕೆ.ಸತೀಶ್ ಸ್ಥಳದಲ್ಲೇ ಮೃತ ಪಟ್ಟಿದ್ದರು. ನಂತರ ಸಾರ್ವಜನಿಕ ವಲಯದಲ್ಲಿ ಈ ಪ್ರಕರಣವು ಸಂಶಯಾಸ್ಪದವಾಗಿದೆ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು ವಿವಿಧ ಕೋನಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.ಘಟನಾ ಸ್ಥಳಕ್ಕೆ ವೀರಾಜಪೇಟೆ ತಾಲೂಕು ಡಿವೈಎಸ್ಪಿ ಜಯಕುಮಾರ್ ಖುದ್ದು ಭೇಟಿ ನೀಡಿದ್ದು ಸ್ಥಳೀಯರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಲಭ್ಯವಿರುವ ಸಿಸಿ ಕ್ಯಾಮೆರಾದ ಫೂಟೇಜ್ ಪರಿಶೀಲನೆ ನಡೆಸಿರುವ ಪೊಲೀಸರು ಘಟನೆ ದಿನದಂದು ಈ ಮಾರ್ಗದಲ್ಲಿ ಸಂಚರಿಸಿರುವ ವಾಹನಗಳ ಮಾಹಿತಿಗಳನ್ನು ಹಂತ ಹಂತವಾಗಿ ಸಂಗ್ರಹಿಸುತ್ತಿದ್ದಾರೆ.ಮೃತ ಸತೀಶ್‍ನ ಮನೆಯವರು ಇದೊಂದು ಪೂರ್ವಯೋಜಿತ ಕೊಲೆ ಎಂದು ಶಂಕೆ ವ್ಯಕ್ತಪಡಿಸಿ ಸತೀಶ್‍ನ ಪತ್ನಿ ಶೋಭಾ ಹಾಗೂ ಸಂಬಂಧಿಕರು ವೀರಾಜಪೇಟೆ ಡಿವೈಎಸ್ಪಿ ಕಚೇರಿಗೆ ತೆರಳಿ
(ಮೊದಲ ಪುಟದಿಂದ) ಇತ್ತೀಚೆಗೆ ಆಗಮಿಸಿರುವ ಡಿವೈಎಸ್ಪಿ ಜಯಕುಮಾರ್ ಅವರಿಗೆ ಸತ್ಯಾಂಶ ಹೊರತರುವಂತೆ ಮನವಿ ಮಾಡಿದ್ದಾರೆ.
ಕಳೆದ 23 ವರ್ಷಗಳಿಂದ ವೃತ್ತಿಯಲ್ಲಿ ಚಾಲಕನಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಸತೀಶ್ ಸಾರ್ವಜನಿಕ ವಲಯದಲ್ಲಿ ಉತ್ತಮ ಗುಣ ನಡತೆಯ ವ್ಯಕ್ತಿಯಾಗಿದ್ದರು. ಇಲ್ಲಿಯ ತನಕ ಚಾಲಕನಾಗಿ ಯಾವದೇ ಸಣ್ಣ ಅಪಘಾತ ನಡೆಸಿರಲಿಲ್ಲವೆಂದು ಸತೀಶ್‍ನ ಪತ್ನಿ ಶೋಭಾ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ ಬೈಕ್‍ನಲ್ಲಿ ಹೆಲ್ಮೆಟ್ ಧರಿಸಿ ಬಂದಿದ್ದ ಸತೀಶ್‍ನ ಹೆಲ್ಮೆಟ್ ಮುಂಜಾನೆ ನಾಪತ್ತೆಯಾಗಿರುವ ಬಗ್ಗೆ ಅನುಮಾನಗಳಿಗೆ ಮತ್ತಷ್ಟು ಪುಷ್ಟಿ ನೀಡಿದ್ದು, ರಾತ್ರಿ ವೇಳೆ ಇದ್ದ ಹೆಲ್ಮೆಟ್ ಮುಂಜಾನೆ ಕಾಣೆಯಾಗಿರುವ ಬಗ್ಗೆ ವಿಡಿಯೋ ಚಿತ್ರೀಕರಣದ ಮಾಹಿತಿಯನ್ನು ಪೊಲೀಸರಿಗೆ ಸತೀಶ್‍ನ ಪತ್ನಿ ಶೋಭ ನೀಡಿದ್ದಾರೆ. ಸತೀಶ್‍ನ ಪತ್ನಿ ಶೋಭಾ ಸ್ಥಳೀಯ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಐದು ತಿಂಗಳ ಹಿಂದೆ: ತನ್ನ ಸ್ವಂತ ಜೀಪಿನಲ್ಲಿ ಪ್ರತಿ ದಿನ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಸತೀಶ್ ಕಳೆದ ಐದು ತಿಂಗಳ ಹಿಂದೆ ಗೋಣಿಕೊಪ್ಪಲುವಿನ ಖಾಸಗಿ ಶಾಲೆಯ ಬಳಿ ನಿಲ್ಲಿಸಿದ್ದ ಈತನ ಜೀಪಿನ ಚಕ್ರವನ್ನು ಸಡಿಲಗೊಳಿಸಿ ಅಪಘಾತ ಸಂಭವಿಸುವ ರೀತಿಯಲ್ಲಿ ಪ್ರಯತ್ನಗಳು ನಡೆದಿದ್ದವು. ಆದರೆ ಅಂದು ಸತೀಶ್ ತನ್ನ ಜೀಪನ್ನು ಚಾಲನೆ ಮಾಡಿರಲಿಲ್ಲ. ಬದಲಾಗಿ ಮಗ ಅಜಿತ್ ಜೀಪ್ ಚಾಲನೆ ಮಾಡಿದ್ದ. ಮಾರ್ಗ ಮಧ್ಯೆ ತೆರಳುತ್ತಿದ್ದ ಸಂದರ್ಭ ಸಂಶಯಗೊಂಡು ವಕ್ರ್ಸ್ ಶಾಪ್‍ಗೆ ತೆರಳಿದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಮಗ ಅಜಿತ್ ತಂದೆಯ ಬಳಿ ವಿಷಯ ತಿಳಿಸಿದ್ದ ಎನ್ನಲಾಗಿದೆ. ಆದರೆ ಸತೀಶ್ ಈ ವಿಷಯದ ಬಗ್ಗೆ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ.
ವಿಶೇಷ ತನಿಖೆ: ಸತೀಶ್‍ನ ಅಪಘಾತ ನಡೆದ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಪೊಲೀಸರು ವಿವಿಧ ಕೋನದಲ್ಲಿ ತನಿಖೆ ಚುರುಕು ಗೊಳಿಸಿದ್ದಾರೆ. ಅನುಮಾನ ಇರುವ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ಸಮಗ್ರ ವಿಚಾರಣೆ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ಕೇಂದ್ರದಿಂದ ಬರುವ ವರದಿಗಾಗಿ ಎದುರು ನೋಡುತ್ತಿದ್ದೇವೆ. ಪೊಲೀಸರ ಮೇಲೆ ಯಾವದೇ ಅನುಮಾನ ಬೇಡ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆಯಲ್ಲಿರುವ ಅನುಭವಸ್ಥ ಪೊಲೀಸ್ ಸಿಬ್ಬಂದಿಗಳಿಂದ ವಿಶೇಷ ತನಿಖೆ ನಡೆಸುತ್ತೇನೆ ಎಂದು ಡಿವೈಎಸ್‍ಪಿ ಜಯಕುಮಾರ್ ಭರವಸೆ ನೀಡಿದ್ದಾರೆ.