ಶ್ರೀಮಂಗಲ, ಸೆ. 5: ವಿಯೇಟ್ನಾಂ ಸೇರಿದಂತೆ ಹೊರ ದೇಶದಿಂದ ಭಾರತಕ್ಕೆ ಕಾಳುಮೆಣಸು ಆಮದಾಗುತ್ತಿರುವ ಹಿನ್ನೆಲೆಯಲ್ಲಿ ಶೇ. 60ರಷ್ಟು ಬೆಲೆ ಕುಸಿತದಿಂದ ಕಾಳು ಮೆಣಸು ಬೆಳೆಗಾರರ ಉತ್ಸಾಹ ಕುಗ್ಗಿಹೋಗಿದ್ದು, ನರ್ಸರಿಗಳಿಂದ ಕಾಳುಮೆಣಸು ಸಸಿಗಳನ್ನು ನೆಡುವ ಪ್ರಕ್ರಿಯೆ ಗಣನೀಯವಾಗಿ ತಗ್ಗಿದೆ. ಕಾಳುಮೆಣಸು ಆಮದಿನಿಂದ ಕುಸಿದಿರುವ ಬೆಲೆ ಹಿನ್ನೆಲೆ ನರ್ಸರಿಗಳಲ್ಲಿ ಕಾಳುಮೆಣಸು ಸಸಿ ಮಾರಾಟ ಕೂಡ ಗಮನಾರ್ಹವಾಗಿ ಕಡಿಮೆಯಾಗಿದೆ.
2015ರಿಂದ ಕಾಳುಮೆಣಸು ದರ ನಿರಂತರವಾಗಿ ಕುಸಿಯಲು ಆರಂಭಿಸಿದೆ. 2014ಕ್ಕೂ ಮುಂಚೆ ಕೆ.ಜಿಗೆ ರೂ. 730 ಇದ್ದ ದರ ನಿರಂತರ ಕುಸಿಯಲಾರಂಭಿಸಿ ಇದೀಗ 310ರಿಂದ 330 ದರ ಇದೆ. ಇದರಿಂದ ಕಳೆದ 2015ರಿಂದ ಕುಸಿತ ಕಂಡ ಕಾಳುಮೆಣಸು 4 ವರ್ಷದಲ್ಲಿ ಶೇ. 60ರಷ್ಟು ಕುಸಿತವಾಗಿದೆ. ಇದರಿಂದ ಕಾಳುಮೆಣಸಿಗೆ ಹೆಚ್ಚಿನ ದರವಿದ್ದಾಗ ಕಾಳುಮೆಣಸು ಕೃಷಿಯಲ್ಲಿ ತೋರುತ್ತಿದ್ದ ಉತ್ಸಾಹ ಈಗ ಬೆಳೆಗಾರರಲ್ಲಿ ಗಣನೀಯ ಕುಗ್ಗಿ ಹೋಗಿರುವದು ಕಂಡುಬಂದಿದೆ. ಇದಕ್ಕೆ ಉದಾಹರಣೆ ಎಂಬಂತೆ ಕಾಳುಮೆಣಸು ಸಸಿಗಳನ್ನು ಖರೀದಿಸಿ ಹೊಸದಾಗಿ ನೆಡುತ್ತಿದ್ದ ಬೆಳೆಗಾರರು ಈಗ ಈ ಪ್ರಕ್ರಿಯೆಗೆ ವ್ಯಾಪಕವಾಗಿ ಹಿಂದೇಟು ಹಾಕುತ್ತಿರುವದು ಕಂಡುಬಂದಿದೆ.
(ಮೊದಲ ಪುಟದಿಂದ) ಕಾಳುಮೆಣಸಿಗೆ ಉತ್ತಮ ಬೆಲೆ ಇದ್ದಾಗ ಪ್ರತಿ ನರ್ಸರಿ ಬ್ಯಾಗಿಗೆ 17ರಿಂದ ರೂ. 20ರ ವರೆಗೆ ಮಾರಾಟವಾಗುತ್ತಿತ್ತು. ಆ ವೇಳೆಯಲ್ಲಿ ನರ್ಸರಿ ಬ್ಯಾಗುಗಳಿಗೆ ಹೆಚ್ಚಿನ ದರವಿದ್ದರೂ ಅದನ್ನು ಕೊಂಡುಕೊಂಡು ತಮ್ಮ ತೋಟದಲ್ಲಿ ನೆಡುವ ಕಾರ್ಯ ಹೆಚ್ಚಾಗಿತ್ತು. ಆದರೆ ಈಗ ಕಾಳುಮೆಣಸಿನ ದರ ತೀವ್ರ ಕುಸಿತ ಗೊಂಡಿದ್ದು, ಈಗ ನರ್ಸರಿಗಳ ದರವು ಪ್ರತಿ ಬ್ಯಾಗಿಗೆ 12 ರಿಂದ ರೂ. 13ಕ್ಕೆ ಕಡಿಮೆ ಮಾಡಿದ್ದರೂ ನರ್ಸಿರಿಗಳಲ್ಲಿ ಕಾಳುಮೆಣಸು ಸಸಿಗಳನ್ನು ಖರೀದಿಸುವ ಪ್ರಕ್ರಿಯೆ ಕಡಿಮೆಯಾಗಿದೆ.
ಕೊಡಗಿನ ನರ್ಸರಿಗಳಿಂದ ನೆರೆಯ ಕೇರಳ ರಾಜ್ಯದ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಕಾಳುಮೆಣಸು ಸಸಿಗಳನ್ನು ಖರೀದಿಸುತ್ತಿದ್ದರು. ಕೊಡಗಿನ ಬೆಳೆಗಾರರು ಶೇ. 50 ರಷ್ಟು ಖರೀದಿಸಿದರೆ ಇನ್ನೂ ಉಳಿದ 50ರಷ್ಟನ್ನು ಕೇರಳ ರಾಜ್ಯದ ಬೆಳೆಗಾರರು ಖರೀದಿಸುತ್ತಿದ್ದರು. ಇದರಿಂದ ಜಿಲ್ಲೆಯಲ್ಲಿ ನರ್ಸರಿ ಉದ್ಯಮ ಲಾಭದಾಯಕವಾಗಿ ನಡೆಯುತ್ತಿತ್ತು. ಕೊಡಗಿನ ಬಹುತೇಕ ನರ್ಸರಿಗಳು ತಮ್ಮಲ್ಲಿಯೇ ಗಿಡಗಳನ್ನು ಮಾಡುತ್ತಿದ್ದರೆ ಚಿಕ್ಕಮಗಳೂರು, ಸಕಲೇಶಪುರ ವ್ಯಾಪ್ತಿಯಿಂದ ಜಿಲ್ಲೆಯ ನರ್ಸರಿ ಮಾಲೀಕರು ಕಾಳುಮೆಣಸು ನರ್ಸರಿಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಆದರೆ ಕಾಳುಮೆಣಸು ದರ ಕುಸಿತದಿಂದ ನರ್ಸರಿ ಉದ್ಯಮದ ಮೇಲೂ ಕರಿ ಛಾಯೆ ಬಿದ್ದಿರುವದು ಗೋಚರಿಸಿದೆ.
ಈ ಹಿಂದೆ ಉತ್ತಮ ದರವಿದ್ದಾಗ ಬಹುತೇಕ ಬೆಳೆಗಾರರು ನರ್ಸರಿ ಖರೀದಿಸುತ್ತಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ನರ್ಸರಿಗಳನ್ನು ಮಾಡಲಾಗುತ್ತಿತ್ತು. ಮತ್ತು ಹೊರಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ತಂದು ದಾಸ್ತಾನು ಇರಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ ಖರೀದಿ ಪ್ರಮಾಣ ತೀರ ಕಡಿಮೆಯಾಗಿರುವದರಿಂದ ಇತಿಮಿತಿಯಲಷ್ಟೇ ತಂದು ಇರಿಸಲಾಗುತ್ತಿದ್ದ ಅವುಗಳು ಸಂಪೂರ್ಣ ಮಾರಾಟವಾದ ಮೇಲೆ ಮಾತ್ರ ಮತ್ತೆ ತರಲಾಗುತ್ತಿದೆ. ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನರ್ಸರಿ ಮಾಡಲಾಗುತ್ತಿದೆ.
-ಹರೀಶ್ ಮಾದಪ್ಪ