ನಾಪೆÇೀಕ್ಲು, ಸೆ. 4: ಪ್ರಕೃತಿ ವಿಕೋಪದಲ್ಲಿ ಕೊಡಗು ನಲುಗಿದೆ. ಈ ಕಾರಣದಿಂದ ಹಲವು ಕಾರ್ಯ ಕ್ರಮಗಳನ್ನು ರದ್ದುಗೊಳಿಸಲಾಗಿದೆ. ಆದರೆ ಗಾಳಿ, ನೀರಿನಂತೆ ಕನ್ನಡವು ನಮ್ಮ ಉಸಿರಾಗಿದೆ. ಸಮಸ್ಯೆಗಳ ನಡುವೆ ಕೆಲವು ಕಾರ್ಯಕ್ರಮಗಳನ್ನು ನಡೆಸುವ ಅನಿವಾರ್ಯತೆ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ನಾಪೆÇೀಕ್ಲು ಹೋಬಳಿ ಘಟಕದ ಆಶ್ರಯದಲ್ಲಿ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಟಿ.ಕೆ.ಸುಬ್ಬರಾವ್ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾ ಡಿದರು. ಬೇರೆಡೆಗೆ ಹೋಲಿಸಿದರೆ ಕೊಡಗು ಜಿಲ್ಲೆ ಪ್ರಕೃತಿ ವಿಕೋಪ, ಶೈಕ್ಷಣಿಕ ಒತ್ತಡ, ರಾಜಕೀಯ ಏರುಪೇರುಗಳಂತಹ ವಿಶೇಷ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದರ ನಡುವೆ ಕಾರ್ಯಕ್ರಮಗಳನ್ನು ನಡೆಸುವದು ಅನಿವಾರ್ಯವಾಗಿದೆ ಎಂದರು. ಸಾಹಿತ್ಯ ಪರಿಷತ್ ಬೇರೆ ಸಂಘ ಸಂಸ್ಥೆಗಳಿಗಿಂತ ಭಿನ್ನವಾಗಿದೆ. ಇಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಖರ್ಚಿನಿಂದಲೇ ಕಾರ್ಯಕ್ರಮ ನಡೆಸಬೇಕಾಗುತ್ತದೆ ಎಂದರು. ಕನ್ನಡೇತರರು ಕೂಡ ಕನ್ನಡ ಭಾಷೆ, ಸಾಹಿತ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರು ವದರಿಂದ ಕನ್ನಡದ ಬಾವುಟ ಇಂದು ಜಿಲ್ಲೆಯಲ್ಲಿ ಬಾನೆತ್ತರದಲ್ಲಿ ರಾರಾಜಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

‘ಕನ್ನಡ ಸಾಹಿತ್ಯದಲ್ಲಿ ಕೊಡಗು’ ಎಂಬ ವಿಷಯವಾಗಿ ಉಪನ್ಯಾಸ ನೀಡಿದ ನಾಪೆÇೀಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕಿ ಉಷಾರಾಣಿ, ಭಾರತೀಸುತ ಡಿ.ಎನ್. ಕೃಷ್ಣಯ್ಯ, ಎಂ.ಎಸ್. ಸುಬ್ಬರಾವ್, ಕೊಡಗಿನ ಗೌರಮ್ಮ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ಎದುರುರ್ಕಳ ಶಂಕರನಾರಾಯಣ ಭಟ್, ಮತ್ತಿತರ ಸಾಹಿತಿಗಳ ಕೊಡುಗೆ ಜಿಲ್ಲೆಯನ್ನು ಸಾಹಿತ್ಯ ಲೋಕದಲ್ಲಿ ಎತ್ತರಕ್ಕೆ ಏರಿಸಿದೆ. ಭಾಷೆ ಯಾವದಾದರೂ ಲಿಪಿ ಕನ್ನಡವಾಗಿದೆ. ಕೊಡಗಿನಲ್ಲಿ ಇಂದು ಸಾಹಿತಿಗಳ, ಬರಹಗಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಬರವಣಿಗೆಯ ತೂಕ, ಘನತೆ ಕಡಿಮೆಯಾಗುತ್ತಿರುವಂತೆ ತೋರುತ್ತಿದೆ ಎಂದರು.

ಶಾಲಾ ಪಠ್ಯ ಪುಸ್ತಕಗಳು ಸಾರ ರಹಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಕೊಡಗಿನಲ್ಲಿ ಭಾಷೆ, ಸಾಹಿತ್ಯ ಯಾವದೇ ಅಡೆತಡೆಯಿಲ್ಲದೆ ಬೆಳೆಯುತ್ತಿರುವದು ತೃಪ್ತಿ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಮಿತಿಗೆ ನೇಮಕಗೊಂಡ ಎನ್.ಕೆ. ಪ್ರಭು ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ 30 ರೇಂಜರ್ಸ್ ಮತ್ತು ರೋವರ್ಸ್‍ಗಳಿಗೆ ಸನ್ಮಾನ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ನಾಪೆÇೀಕ್ಲು ಹೋಬಳಿ ಘಟಕದ ಅಧ್ಯಕ್ಷ ಸಿ.ಎಸ್.ಸುರೇಶ್, ಗೌರವ ಸಲಹೆಗಾರ ಪೆÇ್ರ. ಕಲ್ಯಾಟಂಡ ಪೂಣಚ್ಚ, ಉಪನ್ಯಾಸಕಿ ಕಾವೇರಿ, ಪಿ.ವಿ. ಪ್ರಭಾಕರ್, ಧರ್ಮೇಂದ್ರ ಮತ್ತಿತರರಿದ್ದರು.