ಮಡಿಕೇರಿ, ಸೆ. 4: ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ ಏನು ಎಂಬದನ್ನು ತಿಳಿಯುವದಕ್ಕಾಗಿ ಸತ್ಯಶೋಧನಾ ಸಮಿತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದು, ಪಕ್ಷದ ಹಿನ್ನಡೆ ಮತ್ತು ಬೆಳವಣಿಗೆಯ ಬಗ್ಗೆ ಸಮಗ್ರ ವರದಿಯನ್ನು ಅಕ್ಟೋಬರ್ 2 ರಂದು ಕೆಪಿಸಿಸಿಗೆ ನೀಡಲಾಗುವದೆಂದು ಸಮಿತಿಯ ಸಂಚಾಲಕ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಮತ್ತು 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದ ಹಿನ್ನಡೆಯ ಬಗ್ಗೆ ಕೆಪಿಸಿಸಿ ಆತ್ಮಾವಲೋಕನ ನಡೆಸಿದ್ದು, ಕಾರಣವನ್ನು ಕಂಡುಕೊಂಡು ಪಕ್ಷದ ಬೆಳವಣಿಗೆಗೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದರು.

ರಾಜ್ಯದಲ್ಲಿ ಕೃಷ್ಣ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರವಾಹಕ್ಕೆ 300 ಕ್ಕಿಂತ ಹೆಚ್ಚಿನ ಮಂದಿ ಮೃತಪಟ್ಟಿದ್ದಾರೆ. ಕೊಡಗಿನಲ್ಲೂ 16 ಮಂದಿ ಮೃತಪಟ್ಟಿದ್ದಾರೆ. ಲಕ್ಷಾಂತರ ಮನೆಗಳು ಸಾವಿರಾರು ಎಕರೆ ಭೂಮಿ ನಾಶವಾಗಿದೆ. ಆದರೆ, ರಾಜ್ಯದಲ್ಲಿ ಸಂಭವಿಸಿದ ನಷ್ಟದ ಬಗ್ಗೆ ಸಮಗ್ರ ವರದಿಯನ್ನು ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಅಧಿಕಾರಿಗಳಿಂದ ವರದಿ ಪಡೆಯಲಾಗದ ಮುಖ್ಯಮಂತ್ರಿಗಳು ಆ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಎಂದು ಆರೋಪಿಸಿದರು.

ಕೇಂದ್ರ ಸಚಿವ ಅಮಿತ್ ಶಾ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಬಂದಂತೆ ಮಾಡಿ ಹೋಗಿದ್ದಾರೆ. ಆದರೆ, ಕೊಡಗು ಜಿಲ್ಲೆಗೆ ಭೇಟಿ ನೀಡಿಲ್ಲ. ರಾಜ್ಯದಲ್ಲಿ ಸುಮಾರು 55 ಸಾವಿರ ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದ್ದು, ಇಲ್ಲಿಯವರೆಗೆ ಪರಿಹಾರವನ್ನು ಘೋಷಿಸದ ಪ್ರಧಾನಮಂತ್ರಿಗಳು ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಏನನ್ನೂ ಮಾತನಾಡದೆ ಇರುವದು ದುರಂತವೆಂದರು. ಪ್ರವಾಹ ಪರಿಸ್ಥಿತಿಯಿಂದ ರಾಜ್ಯ ಸಂಕಷ್ಟದಲ್ಲಿ ಇರುವಾಗಲು ಬಿಜೆಪಿ ಸರ್ಕಾರ ಮೂವರು ಡಿಸಿಎಂಗಳನ್ನು ನೇಮಕ ಮಾಡಿ ರಾಜ್ಯದ ಖಜಾನೆಗೆ ಹೊರೆ ಉಂಟು ಮಾಡಿದೆ ಎಂದು ಟೀಕಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್ ಮಾತನಾಡಿ, ಈ ಬಾರಿಯಂತೆ ಕಳೆದ ವರ್ಷವೂ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಇದೇ ರೀತಿಯ ಪರಿಸ್ಥಿತಿಗಳು ಮುಂದೆ ಎದುರಾದಾಗ ಸಮರ್ಥವಾಗಿ ಎದುರಿಸಲು ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಂಸದರು ಹಾಗೂ ಸಮಿತಿ ಸದಸ್ಯರಾದ ಧ್ರುವ ನಾರಾಯಣ್ ಮಾತನಾಡಿ, ಪ್ರವಾಹ ಪರಿಸ್ಥಿತಿಗೆ ಕೇಂದ್ರ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಎಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಹಾಗೂ ಮಾಜಿ ಎಂಎಲ್‍ಸಿ ಅರುಣ್ ಮಾಚಯ್ಯ ಉಪಸ್ಥಿತರಿದ್ದರು.