ಸಿದ್ದಾಪುರ, ಸೆ. 4: ಆಕಸ್ಮಿಕವಾಗಿ ಕಾಡಾನೆಯೊಂದು ದಾರುಣವಾಗಿ ಸಾವನ್ನಪ್ಪಿದ ಘಟನೆ ಮಾಲ್ದಾರೆ ಸಮೀಪದ ಬಾಡಗ ಬಾಣಂಗಾಲದಲ್ಲಿ ನಡೆದಿದೆ.

ಬಾಡಗ ಬಾಣಂಗಾಲ ಗ್ರಾಮದ ಬಿಬಿಟಿಸಿ ಕಂಪೆನಿಗೆ ಸೇರಿದ ಬಾಣಂಗಾಲ ಕಾಫಿ ತೋಟದಲ್ಲಿ ಅಂದಾಜು 25 ವರ್ಷ ಪ್ರಾಯದ ಒಂಟಿ ಸಲಗವೊಂದು ಆಕಸ್ಮಿಕವಾಗಿ ನೆಲಕ್ಕುರುಳಿದ್ದು, ವಿಲವಿಲನೆ ಒದ್ದಾಡುತ್ತಿತ್ತು ಎನ್ನಲಾಗಿದೆ. ಈ ಸಂದರ್ಭ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳಿದ ಕಾರ್ಮಿಕರು ಕಾಡಾನೆಯ ನರಳಾಟವನ್ನು ಕಂಡು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಮಧ್ಯಾಹ್ನದ ವೇಳೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲಿಸುವ ಸಂದರ್ಭದಲ್ಲಿ ಕಾಡಾನೆಯು ಸಾವನ್ನಪ್ಪಿದೆ. ಕಾಡಾನೆಯ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ.ಬೆಳಗ್ಗೆ ಮಾಹಿತಿ ನೀಡಿದರೂ ತಡವಾಗಿ ಆಗಮಿಸಿದ್ದು, ವೈದ್ಯಾಧಿಕಾರಿಗಳು ಕೂಡ ತಡವಾಗಿ ಆಗಮಿಸಿದ ಕಾರಣ ಕಾಡಾನೆ ನರಳಾಡಿ ಸಾವನ್ನಪ್ಪಿದೆ ಎಂದು ಕಾರ್ಮಿಕರು ದೂರಿದ್ದಾರೆ. ಆದರೆ, ಈ ಆರೋಪವನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಕ್ರಿಸ್ತ ಮರಿಯ ರಾಜು ಅವರು ತಳ್ಳಿ ಹಾಕಿದ್ದು, ವಿಷಯ ತಿಳಿದೊಡನೆ ಅಧಿಕಾರಿಗಳನ್ನು ಕಳುಹಿಸಿದುದಾಗಿ ತಿಳಿಸಿದ್ದಾರೆ.ಸ್ಥಳಕ್ಕೆ ಪಾಲಿಬೆಟ್ಟ ಪಶುವೈದ್ಯಾಧಿಕಾರಿ ನವೀನ್ ಕುಮಾರ್ ಆಗಮಿಸಿ, ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯನ್ವಯ ಆನೆಯ ಹೃದಯ ಭಾಗದ ನೋವಿನಿಂದ ಸಾವನ್ನಪ್ಪಿರುವದಾಗಿ ದೃಢಪಟ್ಟಿದೆ ಎಂದು ಡಿಸಿಎಫ್ ತಿಳಿಸಿದ್ದಾರೆ.ಸ್ಥಳಕ್ಕೆ ಎ.ಸಿ.ಎಫ್. ಶ್ರೀಪತಿ ಹಾಗೂ ಅರಣ್ಯ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿದರು. ಕಳೆದ ಕೆಲವು ದಿನಗಳಿಂದ ಸಿದ್ದಾಪುರ ಭಾಗದಲ್ಲಿ ಕಾಡಾನೆ ಹಾವಳಿ ಕೊಂಚ ಕಡಿಮೆಯಾಗಿದ್ದು, ಇದೀಗ ಮತ್ತೆ ಕಾಡಾನೆ ಉಪಟಳ ಹೆಚ್ಚಾಗಿದೆ.

-ವಾಸು