ಸುಂಟಿಕೊಪ್ಪ, ಸೆ. 3: ಮೈಸೂರು - ಮಾಣಿ ಹೆದ್ದಾರಿ ನಡುವಿನ ಸಂಪ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕಾವು ಬಳಿ ನಿನ್ನೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಅಸು ನೀಗಿರುವ ಧಾರುಣ ಘಟನೆ ನಡೆದಿದೆ. ಸುಂಟಿಕೊಪ್ಪ ನಿವಾಸಿ ಅಂಚೆ ಇಲಾಖಾ ಸಿಬ್ಬಂದಿ ನಿಡ್ಯಮಲೆ ಅಶೋಕ್ ಮತ್ತು ಅವರ ಪತ್ನಿ ಅತ್ತೂರು ನಲ್ಲೂರು ಶಾಲೆಯ ಶಿಕ್ಷಕಿ ಹೇಮಲತಾ ಮಕ್ಕಳಾದ ವರ್ಷ ಹಾಗೂ ಕಿರಣ್ ಮೃತ ದುರ್ದೈವಿಗಳಾಗಿದ್ದಾರೆ.ಅಶೋಕ್ ಅವರ ಹಿರಿಯ ಪುತ್ರಿ ಪ್ರಕೃತಿ ಮೂಡುಬಿದಿರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಅವಳನ್ನು ನೋಡಲೆಂದು ನಿನ್ನೆ ಮುಂಜಾನೆ 4.30ರ ಸಮಯದಲ್ಲಿ ಮಾರುತಿ ಆಲ್ಟೊ ಕಾರಿನಲ್ಲಿ ಸುಂಟಿಕೊಪ್ಪದಿಂದ ಪ್ರಯಾಣ ಬೆಳೆಸಿದ್ದಾರೆ. ಮಾರ್ಗಮಧ್ಯದ ಕೌಡಿಚ್ಚಾರ್ ಎಂಬಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆ ಬದಿಯ ಕೆರೆಯೊಳಗೆ ಹಾರಿದೆ. ಪರಿಣಾಮ ಕಾರಿನಿಂದ ಹೊರ ಬರಲಾಗದೆ ನಾಲ್ವರು ಕಾಲನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ವಿಷಯವರಿತು ಪೊಲೀಸರು ಮತ್ತು ಅಗ್ನಿಶಾಮಕ ದಳದಿಂದ ಕಾರು ಮತ್ತು ನಾಲ್ವರ ಮೃತದೇಹವನ್ನು ಹೊರಕ್ಕೆ ತರಲಾಯಿತು. ಪುತ್ತೂರು ಆಸ್ಪತ್ರೆಯಲ್ಲಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ಬಳಿಕ ಜಿಲ್ಲೆಗೆ ತರಲಾಯಿತು.

ಪುತ್ತೂರು ವರದಿ: ನಿನ್ನೆ ಮುಂಜಾನೆ ಕೌಡಿಚಾರ್ ಮಡ್ಯಂಗಳ ದಲ್ಲಿ ಆಲ್ಟೋ ಕಾರು (ಕೆಎ 05 ಎಂಎಫ್ 9794) ಹೆದ್ದಾರಿ ಪಕ್ಕದ ಕೆರೆಗೆ ಉರುಳಿ ದುರಂತ ಸಂಭವಿಸಿದೆ. ಅಶೋಕ್ ಕುಟುಂಬ ಮೂಡಬಿದಿರೆ ಯಲ್ಲಿ ಓದುತ್ತಿರುವ ತಮ್ಮ ಹಿರಿಮಗಳನ್ನು ಕಾಣಲೆಂದು ಹೋಗುತ್ತಿದ್ದರೆಂದು ತಿಳಿದುಬಂದಿದೆ.

ಭಾಗಮಂಡಲದ ತಣ್ಣಿಮಾನಿ ಮೂಲದ ನಿಡ್ಯಮಲೆ ಅಶೋಕ್ ಮಡಿಕೇರಿ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತ್ನಿ ಹೇಮಲತ ಅವರು ಸುಂಟಿಕೊಪ್ಪದಲ್ಲಿ ಶಿಕ್ಷಕಿಯಾಗಿರುವದರಿಂದ ಅಶೋಕ್ ಕುಟುಂಬ ಸುಂಟಿಕೊಪ್ಪದಲ್ಲೇ ಮನೆ ಮಾಡಿ ನೆಲೆಸಿತ್ತು.

ಅಶೋಕ್ ದಂಪತಿಯ ಹಿರಿಯ ಪುತ್ರಿ ಎನ್.ಎ. ಪ್ರಕೃತಿ ಮೂಡಬಿದ್ರೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿ ದ್ದಾಳೆ. ಗಣೇಶ ಚತುರ್ಥಿ ಪ್ರಯುಕ್ತ ರಜೆ ಇದ್ದ ಕಾರಣ ಮಗಳನ್ನು ಕಾಣಲೆಂದು ಅಶೋಕ್ ದಂಪತಿ ತಮ್ಮ ಇನ್ನಿಬ್ಬರು ಮಕ್ಕಳ ಸಹಿತ ಮೂಡಬಿದಿರೆಗೆ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು, ದಾರಿಮಧ್ಯೆ ಮಡ್ಯಂಗಳದಲ್ಲಿ ಕಾದಿದ್ದ ಜವರಾಯ

(ಮೊದಲ ಪುಟದಿಂದ) ನಾಲ್ವರನ್ನೂ ಸೆಳೆದೊಯ್ದಿದ್ದಾನೆ.

ಹೆದ್ದಾರಿ ಇಲಾಖೆ ಮತ್ತು ಸ್ಥಳೀಯಾಡಳಿತದ ನಿರ್ಲಕ್ಷ್ಯಕ್ಕೆ ನಾಲ್ಕು ಅಮಾಯಕ ಜೀವಗಳು ಬಲಿಯಾಗಿವೆ. ‘ನನ್ನನ್ನು ನೋಡಲು ಬರ್ತೇನೆ ಅಂದಿದ್ಯಲ್ಲಾ ಅಮ್ಮಾ ಮಾತನಾಡಮ್ಮಾ’ ಎಂದು ಮೃತರ ಹಿರಿಮಗಳು ಪ್ರಕೃತಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಬೆಳ್ಳಂಬೆಳಗ್ಗೆ ಪುತ್ತೂರು ಹಾಗೂ ಕೊಡಗಿನ ಜನತೆಯನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದ ಭೀಕರ ದುರಂತದಲ್ಲಿ ಒಂದೇ ಮನೆಯ ನಾಲ್ಕು ಮಂದಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಅದಾಗಿತ್ತು.

ಆ ನಾಲ್ಕು ಶವಗಳನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿ ಸಲಾಗಿತ್ತು. ವಿಷಯ ತಿಳಿದು ಹಲವರು ಅಂತಿಮ ದರ್ಶಕನಕ್ಕಾಗಿ ಬರುತ್ತಿದ್ದರು. ಅಂಚೆ ಇಲಾಖೆಯಲ್ಲಿ ಅಶೋಕ್ ರೊಂದಿಗೆ ಕೆಲಸ ನಿರ್ವಹಿಸುತ್ತಿದ್ದವರು. ಶಾಲೆಯ ಶಿಕ್ಷಕಿ ಹೇಮಲತಾರೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿದ್ದವರು ಸಹಿತ ಅವರ ಮನೆಯ ಅಕ್ಕ-ಪಕ್ಕದ ನೂರಾರು ಮಂದಿ ಆಗಮಿಸುತ್ತಲೇ ಇದ್ದರು. ಸೌಮ್ಯ ಸ್ವಭಾವದ ಸಹೃದಯಿ ವ್ಯಕ್ತಿತ್ವ ಆಗಿರುವದರಿಂದಲೇ ಆ ಕುಟುಂಬದ ಕುರಿತು ಎಲ್ಲರಿಗೂ ಉತ್ತಮ ಅಭಿಪ್ರಾಯಗಳೇ ವ್ಯಕ್ತವಾಗುತ್ತಿದ್ದವು.

ತಂದೆ, ತಾಯಿ, ತಮ್ಮ, ತಂಗಿಯನ್ನು ಕಳೆದುಕೊಂಡ ಹಿರಿಯ ಮಗಳ ಅವಸ್ಥೆ ಕರುಳು ಹಿಂಡುವಂತಿತ್ತು.

ಮೂಡಬಿದ್ರೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಆಸ್ಪತ್ರೆಯ ಶವಾಗಾರಕ್ಕೆ ಕರೆದುಕೊಂಡು ಬಂದಾಗ ‘ನೀವೆಲ್ಲಾ ನನ್ನನ್ಯಾಕೆ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ನನ್ನನ್ನು ಬಿಟ್ಟಾಕಿ ನಾನೂ ಹೋಗುತ್ತೇನೆ’ ಅಂತ ಹಠ ಹಿಡಿದಾಗ ಆಕೆಯನ್ನು ಸಮಾಧಾನ ಪಡಿಸಿದರೂ, ಆಕೆಗಿನ್ನೂ ತನ್ನನ್ನು ಬಿಟ್ಟು ಮನೆಯವರೆಲ್ಲರೂ ಅಂತಿಮ ಯಾತ್ರೆ ಹೊರಟು ಹೋಗಿದ್ದಾರೆ ಅನ್ನುವ ವಾಸ್ತವ ಸತ್ಯ ಅರಿವಿರಲಿಲ್ಲ.

ಶವಾಗಾರದ ಬಾಗಿಲು ತೆರೆದು ಒಳಹೋದಾಗಲೇ ಆಗಿತ್ತು ಅವಳಿಗೆ ಗೊತ್ತಾದದ್ದು ತನ್ನವರೆಲ್ಲರೂ ನಿಶ್ಚಲವಾಗಿ ಮಲಗಿದ್ದಾರೆಂದು.

ಅಮ್ಮಾ.. ನನ್ನನ್ನು ಇವತ್ತು ನೋಡಲು ಬರುತ್ತೇನೆ ಅಂತೇಳಿದವರು ಯಾಕೆ ಬಂದಿಲ್ಲ ಅಮ್ಮಾ.. ಒಮ್ಮೆ ಮಾತನಾಡು ಅಂತ ಗೋಗರೆಯುತ್ತಾ, ಅಪ್ಪಾ... ಎದ್ದೇಳಿಯಪ್ಪಾ...

ಯಶ್ಸೂ ನೀನಾದರೂ ಮಾತನಾಡು ಅಂತೆಲ್ಲಾ ಬೊಬ್ಬಿರಿ ಯುವಾಗ ಅಲ್ಲಿ ಸೇರಿದವರೆಲ್ಲರ ಕಣ್ಣುಗಳಿಂದ ನೀರು ತಾನಾಗಿಯೇ ಇಳಿಯುತ್ತಿತ್ತು. ಎಲ್ಲರನ್ನೂ ಕಳೆದುಕೊಂಡ ಆಕೆಗೆ ಸಾಂತ್ವನ ಹೇಳುವದಾದರೂ ಹೇಗೆ ತಾನೇ?

ಹಲವು ಬಾರಿ ಮುನ್ನಚ್ಚೆರಿಕೆ ನೀಡಿದಾಗ ಆ ಕೆರೆಯನ್ನು ಮುಚ್ಚುತ್ತಿದ್ದರೆ ಇಂದು ಆ ನಾಲ್ಕು ಜೀವಗಳಾದರೂ ಉಳಿಯುತ್ತಿತ್ತೇನೋ ಅಲ್ವಾ? ಎಂದು ಪುತ್ತೂರು ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದರು.

ಸುಂಟಿಕೊಪ್ಪ ರಾಮ ಬಡಾವಣೆಯ ನಿವಾಸಿ ನಿಡ್ಯಮಲೆ ಅಶೋಕ್ (48) ಅವರ ಪತ್ನಿ ಹೇಮಲತಾ (42), ಪುತ್ರಿ ವರ್ಷ (16) ಹಾಗೂ ಪುತ್ರ ಕಿರಣ್ (ಯಶಸ್-12) ಮೃತ ದುರ್ದೈವಿಗಳು.

ಸರಳ ಸಜ್ಜನಿಕೆಗೆ ಹೆಸರಾಗಿದ್ದ ನಿಡ್ಯಮಲೆ ಎಸ್. ಅಶೋಕ್ ಪ್ರತೀಭಾನ್ವಿತರಾಗಿದ್ದರಿಂದಲೇ ಅಂಚೆ ಇಲಾಖೆಯ ಸೇವೆಗೆ ಸೇರ್ಪಡೆಯಾಗಿ ದ್ದರು. 25 ವರ್ಷಗಳ ತಮ್ಮ ಸೇವಾವಧಿ ಯಲ್ಲಿ ಮಡಿಕೇರಿ, ಸುಂಟಿಕೊಪ್ಪ, ಸಿದ್ದಾಪುರ, ಕುಶಾಲನಗರ ಹಾಗೂ ಗೋಣಿಕೊಪ್ಪದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ತವ್ಯದ ಬಗ್ಗೆ ಅಪಾರವಾದ ನಿಷ್ಠೆ ಹಾಗೂ ಕಾಳಜಿ ವಹಿಸಿ ಇಲಾಖಾಧಿಕಾರಿಗಳ ಮತ್ತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಮಡಿಕೇರಿ ತಾಲೂಕಿನ ಭಾಗಮಂಡಲದ ದಿವಂಗತ ನಿಡ್ಯಮಲೆ ಸೋಮಯ್ಯ, ಹಾಗೂ ದಿ. ಪೂವಮ್ಮ ದಂಪತಿಗಳ ಪುತ್ರ ಅಶೋಕ್ ಅವರಿಗೆ ಸುಂಟಿಕೊಪ್ಪವೇ ಅಚ್ಚುಮೆಚ್ಚಿನ ತಾಣವಾಗಿತ್ತು. ಮಡಿಕೇರಿ ತಾಲೂಕಿನ ಬೆಟ್ಟಗೇರಿಯ ದ್ಯಾನಪ್ಪ ಮತ್ತು ಲೀಲಾವತಿ ದಂಪತಿಗಳ ಪುತ್ರಿ ಹೇಮಾವತಿ ಅವರನ್ನು ವಿವಾಹವಾಗಿದ್ದರು. ಹೇಮಾವತಿ ಸುಂಟಿಕೊಪ್ಪ ಹೋಬಳಿ ಕಂಬಿಬಾಣೆ ಅತ್ತೂರು ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ 19 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನೊಂದಿಗೆ ಸುಂಟಿಕೊಪ್ಪದಲ್ಲಿ ಉತ್ತಮ ಒಡನಾಟವನ್ನು ಬೆಳೆಸಿಕೊಂಡು ಆಜಾತಶತ್ರುವಾಗಿದ್ದರು.

ಸುಂಟಿಕೊಪ್ಪದಲ್ಲಿಯೇ ಹೊಸ ಮನೆ ಕಟ್ಟಿ ನೆಲೆಸ ಬೇಕೆನ್ನುವ ಕನಸು ಕಂಡಿದ್ದರು. ಕುಶಾಲನಗರದಲ್ಲಿ ಖರೀದಿಸಿದ್ದ ನಿವೇಶನವನ್ನು ಮಾರಾಟ ಮಾಡಿ 6 ವರ್ಷಗಳ ಹಿಂದೆ ಸುಂಟಿಕೊಪ್ಪದಲ್ಲಿ ತಮ್ಮ ಕನಸಿನ ಹೊಸ ಮನೆಯನ್ನು ನಿರ್ಮಿಸಿ ತುಂಬು ಸಂಸಾರದೊಂದಿಗೆ ಜೀವನ ನಡೆಸುತ್ತಿದ್ದರು.

ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು, ಅಂಚೆ ನೌಕರರ ಸಂಘದ ಕೊಡಗು ಜಿಲ್ಲಾ ಉಪಾಧ್ಯಕ್ಷರಾಗಿದ್ದರು. ಸುಂಟಿಕೊಪ್ಪ ಜೇಸಿಐ ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ತಂದೆ ಹಾಗೂ ತಾಯಿಯ ಹಾಗೆ ಮೂವರು ಮಕ್ಕಳು ಕೂಡ ಪ್ರತಿಭಾನ್ವಿತರು. ಸುಂಟಿಕೊಪ್ಪ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಹಿರಿಯ ಮಗಳು ಪ್ರಕೃತಿ ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಳು. ಆ ಕಾರಣದಿಂದಲೇ ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಸಂತ ಮೇರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಕಿರಿಯ ಮಗಳು ವರ್ಷಾ ಹಾಗೂ ಆರನೇ ತರಗತಿ ಓದುತ್ತಿದ್ದ ಪುತ್ರ ಯಶಸ್ ಗೌಡ (ಕಿರಣ್) ಕೂಡ ಪ್ರತಿಭಾನ್ವಿತರಿದ್ದರು.

ಪುತ್ತೂರಿನಿಂದ ಮೃತದೇಹಗಳನ್ನು ಸುಂಟಿಕೊಪ್ಪದ ರಾಮ ಬಡಾವಣೆಯ ಸ್ವಗೃಹಕ್ಕೆ ತರುವಾಗ ಬದುಕುಳಿದಿರುವ ಮಗಳು ಪ್ರಕೃತಿ ಕಿರುಚುತ್ತಾ ‘ನನ್ನನ್ನು ಒಬ್ಬಂಟಿಯಾಗಿ ಮಾಡಿ ಬಿಟ್ಟಿದ್ದೀರಿ; ನನ್ನನ್ನು ಕರೆದುಕೊಂಡು ಹೋಗಿ’ ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ ಸುತ್ತಲೂ ನೆರೆದಿದ್ದ ಜನರ ಕಣ್ಣಿನಲ್ಲಿ ಕಂಬನಿ ತಾನಾಗಿಯೇ ಹರಿಯುತ್ತಿದ್ದ ದೃಶ್ಯ ಕಂಡು ಬಂತು.

ಇಂದು ಬೆಳಗ್ಗಿನ ಜಾವ 5 ಗಂಟೆಗೆ ಹುಟ್ಟೂರಾದ ಭಾಗಮಂಡಲಕ್ಕೆ ಮೃತದೇಹಗಳನ್ನು ಕೊಂಡೊಯ್ಯ ಲಾಯಿತು. ಶಿಕ್ಷಕರು ಮತ್ತು ಅಂಚೆ ಇಲಾಖೆಯ ಸಹ ಸಿಬ್ಬಂದಿಗಳು ಹಾಗೂ ನಾಗರಿಕರು ಇಲ್ಲಿನ ನಿವಾಸದಲ್ಲಿ ಅಂತಿಮ ದರ್ಶನ ಪಡೆದರು.

ಸುಂಟಿಕೊಪ್ಪ ಜೆಸಿಐ ಸಂಸ್ಥೆ , ಜಿಲ್ಲಾ ಗ್ರಾಹಕರ ಆಯೋಗ ಅಧ್ಯಕ್ಷ ಎ. ಲೋಕೇಶ್ ಕುಮಾರ್, ಅಖಿಲ ಭಾರತ ಅಂಚೆ ನೌಕರರ ಸಂಘ ಕೊಡಗು ಜಿಲ್ಲಾ ವಿಭಾಗ, ವಿವಿಧ ಸಂಘ ಸಂಸ್ಥೆಗಳು ಗೌರವ ನಮನ ಸಲ್ಲಿಸಿದರು. ಇಂದು ಸ್ವಗ್ರಾಮ ಭಾಗಮಂಡಲ ಸನಿಹ ತಣ್ಣಿಮಾನಿಯಲ್ಲಿ ನಾಲ್ವರ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.