ಮಡಿಕೇರಿ, ಸೆ.3: ಜೀವ ಕಾವೇರಿ ನದಿಯ ಪುನಶ್ಚೇತನಕ್ಕೆ ಈಶ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ಕಾವೇರಿ ಕೂಗು ಹೆಸರಿನ ಅಭಿಯಾನಕ್ಕೆ ಕೊಡಗಿನ ತಲಕಾವೇರಿಯಿಂದ ಚಾಲನೆ ನೀಡಲಾಯಿತು.ನದಿಯನ್ನು ಉಳಿಸಲು ಮರಗಳನ್ನು ನೆಡಬೇಕು ಎಂಬ ಧ್ಯೇಯದೊಂದಿಗೆ ಸದ್ಗುರುಗಳ 63ನೇ ಹುಟ್ಟುಹಬ್ಬವಾದ ಇಂದು ಬೈಕ್ ರ್ಯಾಲಿ ಆರಂಭವಾಗಿದ್ದು, ಖುದ್ದು ಬೈಕ್ ರೈಡ್ ಮಾಡುವ ಮೂಲಕ ಸದ್ಗುರು ಗಮನ ಸೆಳೆದರು. ಅಭಿಯಾನಕ್ಕೆ ಸ್ಯಾಂಡಲ್‍ವುಡ್ ನಟ ನಟಿಯರು, ಜನಪ್ರತಿನಿಧಿಗಳು ಸಾಥ್ ನೀಡಿದ್ದರು.ಜೀವನದಿ ಕಾವೇರಿಯ ರಕ್ಷಣೆಗೆ ಈಶ ಫೌಂಡೇಶನ್ ಗಿಡಗಳನ್ನು ನೆಟ್ಟು ನದಿಯನ್ನು ರಕ್ಷಿಸುವ ಯೋಜನೆ ರೂಪಿಸಿ ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ ಈ ಮೂಲಕ ಬೃಹತ್ ಆಂದೋಲನಕ್ಕೆ ಮುಂದಾಗಿದ್ದಾರೆ. ಕಾವೇರಿ ಕೂಗು, ನದಿಗಳನ್ನು ರಕ್ಷಿಸಿ ಎಂಬ ಆಂದೋಲನ. ಎಲ್ಲರೂ ಮರಗಳನ್ನು ನೆಡಬೇಕು ಎಂದು ಜಾಗೃತಿ ಮೂಡಿಸಲು ಸದ್ಗುರು ಮತ್ತು ಅವರ ಅನುಯಾಯಿಗಳು ಮುಂದಾಗಿದ್ದಾರೆ. ಇಂದು ಬೆಳಿಗ್ಗೆ ಕಾವೇರಿ ಕುಂಡಿಕೆಗೆ ವಿಶೇಷ ಪೂಜೆ (ಮೊದಲ ಪುಟದಿಂದ) ಸಲ್ಲಿಸಿದ ಸದ್ಗುರು ಬಳಿಕ ತಮ್ಮ ಅನುಯಾಯಿ ಗಳು ಹಾಗೂ ಸ್ವಯಂಸೇವಕರು ಗಳೊಂದಿಗೆ ಬೈಕ್ ರ್ಯಾಲಿ ಆರಂಭಿಸಿದರು. ಖುದ್ದು ಬೈಕ್ ರೈಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಆಂದೋಲನಕ್ಕೆ ಚಾಲನೆ ಸಂದರ್ಭ ಸ್ಯಾಂಡಲ್‍ವುಡ್ ನಟರಾದ ರಕ್ಷಿತ್ ಶೆಟ್ಟಿ, ದಿಗಂತ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ಜಿ. ಬೋಪಯ್ಯ ಶುಭ ಹಾರೈಸಿದರು.

ಅಭಿಯಾನ ಆರಂಭಕ್ಕೂ ಮುನ್ನ ಮಾಧÀ್ಯಮಗಳೊಂದಿಗೆ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್, ಇಷ್ಟು ಮಳೆ ಬರುತ್ತಿದ್ದರೂ ದೇಶದಲ್ಲಿ ಕುಡಿಯಲು ನೀರಿಲ್ಲದ ದುಸ್ಥಿತಿ ಎದುರಾಗಿದೆ. ನೂರು ವರ್ಷಗಳ ಹಿಂದೆ ಬರುತ್ತಿದ್ದ ಪ್ರಮಾಣದಲ್ಲೇ ಮಳೆ ಬರುತ್ತಿದೆ. ಹೀಗಿದ್ದರೂ ಕುಡಿಯಲು ನೀರಿನ ಕೊರತೆ ತಲೆದೋರುತ್ತಿದೆ ಅಂದರೆ ಏನು ಅರ್ಥ?. ಇದಕ್ಕೆ ಕಾರಣ ಭೂಮಿಯ ನೀರು ಹಿಡಿದಿಟ್ಟು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದೆ. ಆದ್ದರಿಂದಲೇ ಕೊಡಗಿನಲ್ಲಿ ಕಳೆದ ಬಾರಿ ಭೂಕುಸಿತ ಮತ್ತು ಪ್ರವಾಹ ಸೃಷ್ಟಿ ಆಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ 10 ವರ್ಷದಲ್ಲಿ 47 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ- ರಾಜ್ಯ ಸಹಕಾರ

ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ದೇಶದ ಎಲ್ಲಾ ನದಿಗಳನ್ನು ಸ್ವಚ್ಛಗೊಳಿಸಬೇಕಿದೆ. ಇದು ಎಲ್ಲಾ ಸದ್ಗುರುಗಳ ಸಂಕಲ್ಪವೂ ಆಗಿದೆ. ಈ ನಿಟ್ಟಿನಲ್ಲಿ ಈಶ ಫೌಂಡೇಶನ್‍ನ ಸದ್ಗುರು ಶ್ರಮಿಸುತ್ತಿದ್ದಾರೆ. ಕಾವೇರಿ ಉಗಮ ತಲಕಾವೇರಿಯಿಂದ ಬೈಕ್ ರ್ಯಾಲಿಗೆ ಚಾಲನೆ ನೀಡುವ ಮೂಲಕ ನಾಗರಿಕರಿಗೆ ಪರಿಸರದ ಕಾಳಜಿ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಹಿಂದೆ ಇದ್ದಂತಹ ಕಾವೇರಿ ಪ್ರಸ್ತುತ ಸ್ಥಿತಿಯಲ್ಲಿ ಇಲ್ಲ. ಕಾವೇರಿ ಹಾಗೂ ಪರಿಸರ ಸಂರಕ್ಷಣೆಯ ಗುರೂಜಿ ಅವರ ಸಂಕಲ್ಪಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹಕಾರ ನೀಡಲಿವೆ ಎಂದು ತಿಳಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಕೊಡಗಿನ ಜನತೆ ಪರಿಸರದೊಂದಿಗೆ ಬದುಕುತ್ತಿದ್ದು, ಪರಿಸರ ರಕ್ಷಣೆ ಜೀವನದ ಅಂಗ ವಾಗಿದೆ ಎಂದರು. ದೇವರಕಾಡು ಗಳನ್ನು ಹಿರಿಯರು ಸೃಷ್ಟಿಸಿದ್ದು, ಕೊಡಗು ಮತ್ತು ಪರಿಸರ ಒಂದು ಇತಿಹಾಸ ಎಂದು ಬಣ್ಣಿಸಿದರು.

ಶುಭ ಹಾರೈಕೆ

ಸದ್ಗುರುಗಳೊಂದಿಗೆ ಬೈಕ್ ರೈಡ್ ಮಾಡಿದ ನಟರಾದ ದಿಗಂತ್ ಹಾಗೂ ರಕ್ಷಿತ್ ಶೆಟ್ಟಿ ಕಾವೇರಿ ಕೂಗು ಅಭಿಯಾನಕ್ಕೆ ಶುಭ ಹಾರೈಸಿದರು. ಕಾವೇರಿ ಕೂಗಿಗೆ ಹಲವಾರು ಉದ್ದೇಶ ಮತ್ತು ಅವಶ್ಯಕತೆ ಇದೆ, ಅದನ್ನು ನಾವು ಅರಿಯಬೇಕು. ಆ ಉದ್ದೇಶಕ್ಕೆ ಸಾಥ್ ನೀಡಲು ಸದ್ಗುರು ಜಗ್ಗಿ ವಾಸುದೇವ್ ಅವರ ಜೊತೆ ನಾವು ಬಂದಿದ್ದೇವೆ ಹಾಗೆಯೇ ನಾವು ಸದ್ಗುರು ಅವರನ್ನು ಫಾಲೋ ಮಾಡ್ತಿದ್ದೀವಿ. ಕಾವೇರಿ ನೀರು ಸಮೃದ್ಧಿಯಾಗಿ ಇದ್ದರೆ ಮಾತ್ರ ನಮ್ಮ ಬದುಕು ಹಸನಾಗಲು ಸಾಧ್ಯ. ಇದೊಂದು ಒಳ್ಳೆಯ ಆಂದೋಲನ ಎಂದರು.

ಬೆಳಗ್ಗಿನಿಂದಲೇ ಸುರಿಯುತ್ತಿದ್ದ ಜಡಿ ಮಳೆಯ ನಡುವೆಯೂ ಅನುಯಾಯಿಗಳೊಂದಿಗೆ ತಲಕಾವೇರಿ ಯಲ್ಲಿ ಜಗ್ಗಿ ಅವರು ಅತ್ಯಂತ ಹುರುಪಿನಿಂದಿದ್ದರು. 11 ಗಂಟೆಗೆ ರ್ಯಾಲಿಗೆ ಚಾಲನೆ ನೀಡಬೇಕಿದ್ದರೂ, ಮಾಧ್ಯಮಗೋಷ್ಠಿ, ಪೂಜೆ ಬಳಿಕ ಸುಮಾರು 12.30 ಗಂಟೆಗೆ ವಿದೇಶಿ ಬೈಕ್ ಏರಿದ ಸದ್ಗುರು ಮಡಿಕೇರಿಯತ್ತ ಪ್ರಯಾಣ ಬೆಳೆಸಿದರು. ಅವರೊಂದಿಗೆ ಮಗಳು ರಾಧಾ ಸಹ ಪ್ರಯಾಣಿಕರಾಗಿ ಬೈಕ್ ಏರಿದರು.