ಒಡೆಯನಪುರ, ಸೆ. 3: ಸಮಿಪದ ಆಲೂರು ಸಿದ್ದಾಪುರ ಮಳೆ ಮಲ್ಲೇಶ್ವರ ರೋಟರಿ ಕ್ಲಬ್ ವತಿಯಿಂದ ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರ ಹಾಗೂ ಸರಕಾರಿ ಗಿರಿಜನರ ಆಶ್ರಮ ಪ್ರಾಥಮಿಕ ಶಾಲೆಗೆ ಉಚಿತವಾಗಿ ಪ್ರಥಮ ಚಿಕಿತ್ಸೆ ಕಿಟ್ಗಳನ್ನು ವಿತರಿಸಲಾಯಿತು.
ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲೇಶ್ವರ ರೋಟರಿ ಕ್ಲಬ್ ಕಾರ್ಯದರ್ಶಿ ಸಂಪತ್ಕುಮಾರ್-ಸರಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಹಳಷ್ಟು ಜನರು ಇಂದು ಅತಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಕೆಲವು ಮಂದಿ ಸಮಾಜದಲ್ಲಿ ಗಣ್ಯವ್ಯಕ್ತಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸುವಂತೆ ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಚ್.ಇ.ತಮ್ಮಯ್ಯ ಮಾತನಾಡಿ-ರೋಟರಿ ಕ್ಲಬ್ ಅಂತಾರ್ರಾಷ್ಟ್ರೀಯ ಮಟ್ಟದ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಂಸ್ಥೆಯಾಗಿದೆ ಎಂದರು. ಆಲೂರುಸಿದ್ದಾಪುರ ರೋಟರಿ ಕ್ಲಬ್ ಈಗಷ್ಟೇ ಸ್ಥಾಪನೆಯಾಗಿದ್ದು, ಸೇವೆ ನೀಡುವ ಚಿಂತನೆಯನ್ನಿಟ್ಟು ಕೊಂಡಿರುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸ ಬೇಕೆಂದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ದೇವೇಂದ್ರ ಅಧ್ಯಕ್ಷತೆವಹಿಸಿ ಮಾತನಾಡಿದರು. ಆಲೂರುಸಿದ್ದಾಪುರ ಮಲ್ಲೇಶ್ವರ ರೋಟರಿಯನ್ಸ್ಗಳಾದ ಎಸ್.ಜೆ. ಪ್ರಸನ್ನಕುಮಾರ್, ಎಂ.ಇ. ವೆಂಕಟೇಶ್, ಟಿ.ಪಿ. ವಿಜಯ್, ಪಿ.ಎನ್. ಗಂಗಾಧರ್, ಎಚ್.ಜಿ. ಲೋಕೇಶ್, ಜಾನಕಿ ಗಂಗಾಧರ್ ಶಾಲಾ ಸಹ ಶಿಕ್ಷಕ ಗಿರೀಶ್, ಪ್ರಮುಖರಾದ ಪ್ರಸನ್ನ, ಅಂಗನವಾಡಿ ಶಿಕ್ಷಕಿ ವೇದಕುಮಾರಿ, ಆಶ್ರಮ ಶಾಲೆ ಶಿಕ್ಷಕಿಯರು ಹಾಜರಿದ್ದರು. -ವಿ.ಸಿ. ಸುರೇಶ್