.
ಕುಶಾಲನಗರ, ಸೆ. 3: ಕುಶಾಲನಗರ ಪಟ್ಟಣದಲ್ಲಿ ರಸ್ತೆ ದಾಟುವ ಸಂದರ್ಭ ಮಕ್ಕಳಿಗೆ ಶಾಲೆಗೆ ತೆರಳಲು ದಿನನಿತ್ಯ ಸಹಕರಿಸುತ್ತಿರುವ ಸ್ಥಳೀಯ ಆಟೋ ಚಾಲಕರೊಬ್ಬರು ಮಕ್ಕಳು ಅಪಘಾತಕ್ಕೆ ಸಿಲುಕುವದನ್ನು ತಪ್ಪಿಸಲು ಹರಸಾಹಸ ಪಡುತ್ತಿರುವ ಕಾಯಕವೊಂದು ಸ್ಥಳೀಯರ ಗಮನ ಸೆಳೆಯುತ್ತಿದೆ.
ಕುಶಾಲನಗರ-ಮೈಸೂರು ರಸ್ತೆಯ ಕೆನರಾ ಬ್ಯಾಂಕ್ ಮುಂಭಾಗ ಸರಕಾರಿ ಶಾಲೆಗೆ ಪ್ರತಿದಿನ ನೂರಾರು ವಿದ್ಯಾರ್ಥಿಗಳು ಬರುತ್ತಿದ್ದು, ಈ ಸಂದರ್ಭ ವಾಹನಗಳ ಒತ್ತಡದ ನಡುವೆ ಮಕ್ಕಳಿಗೆ ರಸ್ತೆ ದಾಟಲು ಅನಾನುಕೂಲ ಉಂಟಾಗುತ್ತಿದೆ. ಈ ನಡುವೆ ಸ್ಥಳದಲ್ಲಿ ಸಂಚಾರಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್‍ಗಳನ್ನು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ಸಂದರ್ಭ ಸ್ಥಳಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ರಸ್ತೆ ದಾಟಲು ಅನಾನುಕೂಲ ಕಂಡ ಆಟೋ ಚಾಲಕ ಗುಲ್ಜರ್ ಬಾಯ್ ತನ್ನ ಮನೆಯಿಂದ ಹಾಲು ಕ್ಯಾನ್‍ಗಳು, ಡ್ರಂ, ಮತ್ತಿತರ ವಸ್ತುಗಳನ್ನು ತಂದು ರಸ್ತೆಯ ವಿಭಜಕಗಳಾಗಿ ಇಡುವದರೊಂದಿಗೆ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸುತ್ತಿದ್ದ ದೃಶ್ಯ ‘ಶಕ್ತಿ’ಯ ಗಮನ ಸೆಳೆಯಿತು. ಗುಲ್ಜರ್ ಬಾಯ್ ಕಳೆದ ಹಲವು ವರ್ಷಗಳಿಂದ ಬೆಳಿಗ್ಗೆ ಶಾಲೆ ಪ್ರಾರಂಭವಾಗುವ 1 ಗಂಟೆಗೆ ಮುನ್ನ ರಸ್ತೆಯಲ್ಲಿ ನಿಂತು ಮಕ್ಕಳನ್ನು ಶಾಲೆಗೆ ದಾಟಿಸುವ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ.
ಆದಷ್ಟು ಬೇಗನೆ ಸಂಚಾರಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಮತ್ತೆ ಅದೇ ಜಾಗದಲ್ಲಿ ತಂದಿರಿಸಬೇಕೆಂಬದು ಗುಲ್ಜರ್ ಬಾಯ್ ಮತ್ತು ಮಕ್ಕಳ ಪೋಷಕರ ಆಗ್ರಹವಾಗಿದೆ.
-ಸಿಂಚು