ಮಡಿಕೇರಿ, ಸೆ. 1: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆಯೊಂದಿಗೆ ಪ್ರವಾಹದಿಂದ ಎರಡು ಸಾವಿರದ ಮೂವತ್ತೆಂಟು ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 363 ಸಂಪೂರ್ಣ, ಶೇ. 75 ರೊಳಗೆ 643 ಹಾಗೂ ಶೇ. 25ರೊಳಗೆ 1032 ಮನೆಗಳಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.ಈ ಸಂಬಂಧ ಸರಕಾರ ನಿಗದಿಗೊಳಿಸಿರುವಂತೆ ಪೂರ್ಣ ಹಾನಿಯಾಗಿರುವ ಮನೆಗಳಿಗೆ ತಲಾ ರೂ. 5 ಲಕ್ಷ ಹಾಗೂ ಶೇ. 25 ರಿಂದ 75 ರೊಳಗಿನ ಹಾನಿಗೆ ತಲಾ ರೂ. 1 ಲಕ್ಷ ಪರಿಹಾರ ಕಲ್ಪಿಸುವದರೊಂದಿಗೆ; ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ ಗರಿಷ್ಟ 10 ತಿಂಗಳು ತಲಾ ರೂ. 5 ಸಾವಿರ ಬಾಡಿಗೆ ಕಲ್ಪಿಸಲಾಗುವದು ಎಂದು ವಿವರಿಸಿದ್ದಾರೆ.ಮಡಿಕೇರಿ ತಾಲೂಕಿನಲ್ಲಿ 70 ಮನೆಗಳಿಗೆ ಪೂರ್ಣ ಹಾನಿ, 47 ಮನೆಗಳಿಗೆ ಶೇ. 25 ರಿಂದ 75 ಹಾಗೂ 319 ಮನೆಗಳಿಗೆ ಶೇ. 15 ರಿಂದ 25 ಹಾನಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಅಂಕಿ ಅಂಶ ನೀಡಿದ್ದಾರೆ. ವೀರಾಜಪೇಟೆ ತಾಲೂಕಿನಲ್ಲಿ 190 ಮನೆಗಳಿಗೆ ಸಂಪೂರ್ಣ ಹಾಗೂ 331 ಮನೆಗಳಿಗೆ ಶೇ. 75ರೊಳಗೆ ಹಾಗೂ 362 ಮನೆಗಳಿಗೆ ಶೇ. 25 ರೊಳಗೆ ಹಾನಿ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ 103 ಮನೆಗಳಿಗೆ ತೀವ್ರ ಹಾನಿ, 265 ಮನೆಗಳಿಗೆ ಶೇ. 75ರೊಳಗೆ ಮತ್ತು 351 ಮನೆಗಳಿಗೆ ಶೇ. 25ರೊಳಗೆ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ. ಈಗಾಗಲೇ ಸರಕಾರದ ಮಾರ್ಗಸೂಚಿಯಂತೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದು; ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಮುಖಾಂತರ ಹಣವನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.