ಮಡಿಕೇರಿ, ಸೆ. 1: ಕೇಂದ್ರ ಸರಕಾರದ ಸ್ವಾಮ್ಯದಲ್ಲಿರುವ ಭಾರತ ದೂರ ಸಂಪರ್ಕ ನಿಗಮದ ಕೊಡಗು ಟೆಲಿಕಾಂ ಆಡಳಿತ ಕಚೇರಿಯನ್ನು ಸದ್ದಿಲ್ಲದೆ ಮೌನವಾಗಿ ಮೈಸೂರಿಗೆ ಸ್ಥಳಾಂತರಗೊಳಿಸಲಾಗಿದೆ. ಇಂದಿನಿಂದಲೇ ಈ ಬೆಳವಣಿಗೆ ಜಾರಿಗೊಂಡಿದ್ದು; ಈಚೆಗೆ ಕೊಡಗಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರ ಭರವಸೆಗಳು ಕೂಡ ನೆನೆಗುದಿಗೆ ಬೀಳುವಂತಾಗಿದೆ.ಕೇಂದ್ರ ರಸಗೊಬ್ಬರ ಹಾಗೂ ರಾಸಾಯನಿಕ ಖಾತೆ ಸಚಿವ ಡಿ.ವಿ. ಸದಾನಂದಗೌಡ ಅವರು, ಈಚೆಗಷ್ಟೇ ಬಿಜೆಪಿ ನಿಯೋಗದೊಂದಿಗೆ ಜಿಲ್ಲಾ ಪ್ರವಾಸ ಕೈಗೊಂಡು; ಜಿಲ್ಲೆಯ ಎಲ್ಲಾ ದೂರವಾಣಿ ವಿನಿಮಯ ಕೇಂದ್ರಗಳಿಗೆ ಕಾಯಕಲ್ಪ ನೀಡುವದರೊಂದಿಗೆ; ಟವರ್‍ಗಳನ್ನು ತಕ್ಷಣದಿಂದ ಕ್ರಿಯಾಶೀಲಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದ್ದರು.ಮಾತ್ರವಲ್ಲದೆ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದೊಂದಿಗೆ; ನೆರೆ ಹಾವಳಿ ಮತ್ತು ಮಳೆಗಾಲದಲ್ಲಿ ಸಾರ್ವಜನಿಕರಿಗೆ ತುರ್ತು ಸೇವೆಗೆ ತೊಡಕಾಗದಂತೆ ಬಿಎಸ್‍ಎನ್‍ಎಲ್ ಘಟಕಗಳನ್ನು ಸಕ್ರಿಯಗೊಳಿಸುವಂತೆ ನಿರ್ದೇಶಿಸಿದ್ದರು. ಈ ಸಂಬಂಧ ಕರ್ನಾಟಕ ಪ್ರಾದೇಶಿಕ ಮಹಾ ಪ್ರಬಂಧಕರಿಗೆ ಖುದ್ದು ಕರೆ ಮಾಡಿ; ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ತಪ್ಪಿದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಆದೇಶಿಸಿದರು.
ವ್ಯತಿರಿಕ್ತ ಬೆಳವಣಿಗೆ : ಇದೀಗ ಕೊಡಗಿನಲ್ಲಿ ವ್ಯತಿರಿಕ್ತ ಬೆಳವಣಿಗೆ ಎದುರಾಗಿದೆ. ಇದೇ ಆಗಸ್ಟ್ 31ಕ್ಕೆ ಜಿಲ್ಲೆಯಲ್ಲಿ ಬಿಎಸ್‍ಎನ್‍ಎಲ್ ಆಡಳಿತ ಕಚೇರಿಯ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡು; ಇಲ್ಲಿನ ಬಹುತೇಕ ಅಧಿಕಾರಿಗಳನ್ನು ಮೈಸೂರಿನಲ್ಲಿರುವ ಪ್ರಾದೇಶಿಕ ಕಚೇರಿಗೆ ನಿಯೋಜಿಸಲಾಗಿದೆ. ಆರ್ಥಿಕ ವಿಭಾಗದ ಆರು ಮಂದಿ ಅಧಿಕಾರಿಗಳ ಸಹಿತ, ಇತರ ಆಡಳಿತ ವಿಭಾಗದ ನಾಲ್ವರನ್ನೂ ಮೈಸೂರಿಗೆ ನೇಮಕಗೊಳಿಸಲಾಗಿದೆ.
ತಾಂತ್ರಿಕ ವಿಭಾಗ ಸೀಮಿತ : ಕೊಡಗು ಜಿಲ್ಲೆಯ ಮಟ್ಟಿಗೆ ಇಂದಿನಿಂದ ಕೇವಲ ಅಳಿದುಳಿದಿರುವ ದೂರ ಸಂಪರ್ಕ ವ್ಯವಸ್ಥೆಯು; ತಾಂತ್ರಿಕ ವಿಭಾಗ ಮಾತ್ರ ಉಳಿದುಕೊಂಡಿದ್ದು; ಕೈ ಬೆರಳೆಣಿಕೆ
(ಮೊದಲ ಪುಟದಿಂದ) ಮಂದಿ ದೈನಂದಿನ ಕಾಯಕ ನಿರ್ವಹಿಸಲಿದ್ದಾರೆ. ಈ ಮಾಸಾಂತ್ಯಕ್ಕೆ ಹಲವಷ್ಟು ಮಂದಿ ನಿವೃತ್ತಿ ಹೊಂದಿದ್ದಾರೆ.
ವೇತನವೂ ಲಭಿಸಿಲ್ಲ : ಕೊಡಗು ಟೆಲಿಕಾಂ ವ್ಯವಸ್ಥೆಯಲ್ಲಿ ಸಾಕಷ್ಟು ಮಂದಿ ಖಾಯಂ ಉದ್ಯೋಗಿ ಗಳೊಂದಿಗೆ; ಹೊರಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಮಂದಿಗೆ ಆರ್ಥಿಕ ಸಂಕಷ್ಟದಲ್ಲಿರುವ ಬಿಎಸ್‍ಎನ್‍ಎಲ್‍ನಿಂದ ಸುಮಾರು 5 ತಿಂಗಳಿನಿಂದ ಮಾಸಿಕ ವೇತನವೂ ಲಭಿಸದೆ ಆತಂಕದಲ್ಲಿರುವರೆಂದು ತಿಳಿದು ಬಂದಿದೆ.
‘ಶಕ್ತಿ’ಗೆ ಲಭಿಸಿರುವ ಮಾಹಿತಿಯಂತೆ ಪ್ರಸಕ್ತ ಕೊಡಗು ಟೆಲಿಕಾಂ ಆಡಳಿತ ಕಚೇರಿಯೊಂದಿಗೆ; ಮಂಡ್ಯ ಘಟಕವನ್ನು ಕೂಡ ಮೈಸೂರು ಕಚೇರಿಯೊಂದಿಗೆ ವಿಲೀನಗೊಳಿಸ ಲಾಗಿದೆ ಎಂದು ಗೊತ್ತಾಗಿದೆ.
ಖಾಸಗಿ ವ್ಯವಸ್ಥೆಗೆ ಒತ್ತು : ಒಟ್ಟಿನಲ್ಲಿ ದೂರ ಸಂಪರ್ಕ ವ್ಯವಸ್ಥೆಯಡಿ ಖಾಸಗಿ ವಲಯಗಳಿಗೆ ಹೆಚ್ಚಿನ ಮಾನ್ಯತೆ ನೀಡಿರುವ ಕೇಂದ್ರ ಸರಕಾರ; ಸರಕಾರಿ ಸಾಮ್ಯದ ಈ ಸಂಸ್ಥೆಗೆ ಎಳ್ಳುನೀರು ಬಿಡುವ ಸಂಭವವಿದೆ ಎಂದು ಬಿಎಸ್‍ಎನ್‍ಎಲ್ ಮಂದಿ ಚಿಂತೆಗೊಳಗಾಗಿದ್ದಾರೆ.
ಸಚಿವರ ಭರವಸೆ ಹುಸಿ : ಈಚೆಗೆ ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು, ರಾಷ್ಟ್ರಮಟ್ಟದಲ್ಲಿ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸಭೆ ನಡೆಸುವ ಮೂಲಕ; ಈ ವ್ಯವಸ್ಥೆಗೆ ಕಾಯಕಲ್ಪ ಕಲ್ಪಿಸುವದಾಗಿ ನೀಡಿದ್ದ ಭರವಸೆಯು ಪ್ರಸಕ್ತ ಬೆಳವಣಿಗೆಯಿಂದ ಹುಸಿಯಾ ದಂತಾಗಿದೆ ಎಂದು ಸಂಬಂಧಿಸಿದ ಸಂಸ್ಥೆಯ ಕಾರ್ಮಿಕ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.