ಭಾಗಮಂಡಲ, ಸೆ. 1: ಭಾಗಮಂಡಲ - ಚೇರಂಗಾಲ ವ್ಯಾಪ್ತಿಯಲ್ಲಿನ ಬ್ರಹ್ಮಗಿರಿ ಬೆಟ್ಟ ತಪ್ಪಲಿನಲ್ಲಿ ಮರಹನನ ಮಾಡಿ ಬೆಟ್ಟ ಪ್ರದೇಶವನ್ನು ಸಮತಟ್ಟು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಅಧಿಕಾರಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಮುಂದಾಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ತಿಳಿಸಿದ್ದಾರೆ. ಭಾಗಮಂಡಲ ಗ್ರಾ.ಪಂ. ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗೆ ಅಧಿಕಾರಿ ಉತ್ತರ ನೀಡಿದ್ದಾರೆ.ಇಲ್ಲಿನ ಗೌಡ ಸಮಾಜದಲ್ಲಿ ಗ್ರಾ.ಪಂ. ಅಧ್ಯಕ್ಷೆ ಸುಮಿತ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ. ಸದಸ್ಯ ಜಯಂತ್, ಪ್ರಮುಖರಾದ ಕುದುಕುಳಿ ಭರತ್, ಕುದುಪಜೆ ಪ್ರಕಾಶ್, ಇನ್ನಿತರರು ವಿಷಯ ಪ್ರಸ್ತಾಪ ಮಾಡಿ, ಸಾರ್ವಜನಿಕರು ಸ್ವಂತ ಉಪಯೋಗಕ್ಕೆ ಸೌದೆ ಕಡಿದರೆ ಸಾಕು ಅರಣ್ಯ ಇಲಾಖೆ ಅವರ ಮೇಲೆ ಕೇಸು ದಾಖಲಿಸುತ್ತದೆ. ಆದರೆ ಇದೀಗ ಇಲಾಖೆ ಸುಪರ್ದಿಯಲ್ಲಿರುವ ಎಕರೆಗಟ್ಟಲೆ ಅರಣ್ಯ ಪ್ರದೇಶವನ್ನು ನಾಶಪಡಿಸಿದರೂ ಕೂಡ ಕ್ರಮ ಕೈಗೊಳ್ಳಲು ಮುಂದಾಗದಿರುವ ಬಗ್ಗೆ ಪ್ರಶ್ನಿಸಿದರು. ಈ ಪ್ರಕರಣದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಶಾಮೀಲಾ ಗಿರುವ ಬಗ್ಗೆ ಆರೋಪ ಮಾಡಿದರು.ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ (ಪ್ರಬಾರ) ಮಂಜುನಾಥ್ ಅವರು, ತಾನು ಇತ್ತೀಚೆಗೆ ಬಂದಿದ್ದು, ಪ್ರಕರಣ ಗಮನಕ್ಕೆ ಬರುತ್ತಿದ್ದಂತೆ ಕ್ರಮಕ್ಕೆ ಮುಂದಾಗಿರುವದಾಗಿ ತಿಳಿಸಿದರು. ಈ ಸಂಬಂಧ
(ಮೊದಲ ಪುಟದಿಂದ) ಕಂದಾಯ ನಿರೀಕ್ಷಕ ಅವರ ವಿರುದ್ಧ ದಾಖಲೆಗಳನ್ನು ಸಂಗ್ರಹಿಸಿ ಮೇಲಧಿಕಾರಿಗಳಿಗೆ ಕಾನೂನು ಕ್ರಮಕ್ಕೆ ಬರೆಯಲಾಗಿದೆ. ನ್ಯಾಯಾಲಯದ ಆದೇಶದಂತೆ ಬಂಧನಕ್ಕೊಳಪಡಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾಮಸ್ಥರು, ಸಾರ್ವಜನಿಕರಿಗೆ ಸ್ವಂತ ಉಪಯೋಗಕ್ಕೆ ಮರ ಹಾಗೂ ಸೌದೆ ಪಡೆದುಕೊಳ್ಳಲು ಯಾವದೇ ತೊಂದರೆ ನೀಡದಂತೆ ಅಧಿಕಾರಿ ಯಲ್ಲಿ ಒತ್ತಾಯಿಸಿದರು.
ಗೊಂದಲದ ಗೂಡು
ಪ್ರತಿಬಾರಿ ಭಾಗಮಂಡಲ ಗ್ರಾ.ಪಂ. ಗ್ರಾಮಸಭೆಯು ಒಂದಲ್ಲಾ ಒಂದು ಗೊಂದಲಗಳ ನಡುವೆ ನಡೆಯುತ್ತಿದ್ದು ಇಂದು ನಡೆದ ಗ್ರಾಮಸಭೆಯು ವಾಹನ ಸುಂಕ ವಸೂಲಾತಿಯ ಗೊಂದಲದ ಚರ್ಚೆಗಳ, ಗದ್ದಲಗಳ ನಡುವೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಅಜೆಂಡಾ ಆರಂಭಿಸದೆ ಗ್ರಾಮಸ್ಥ ನಂಜುಂಡಪ್ಪ ಮಾತನಾಡಿ ವಾಹನ ಸುಂಕ ವಸೂಲಾತಿಯಿಂದ ಗ್ರಾಮಪಂಚಾಯಿತಿಗೆ ಹೆಚ್ಚಿನ ವರಮಾನ ಬರುತ್ತಿದ್ದು ಕಳೆದ ಬಾರಿ ಟೆಂಡರ್ ಪಡೆದವನಿಗೆ ಮೂರು ತಿಂಗಳು ಹಣ ಪಾವತಿಸದೇ ಇರಲು ವಿನಾಯಿತಿ ಏಕೆ ನೀಡಿದ್ದೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಪಿಡಿಒ ಅಶೋಕ್ ಮಾತನಾಡಿ ಕಳೆದ ಬಾರಿ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಿದ್ದು ಸುಂಕ ವಸೂಲಾತಿಯಿಂದ ಹಣ ಕಡಿಮೆಯಾಗಿದೆ ಎಂದು ಟೆಂಡರ್ ದಾರನು ಪಂಚಾಯಿತಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಮಾಡಲಾಗಿದೆ ಎಂದರು.
ಈ ಬಗ್ಗೆ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಹೊಸೂರು ಸತೀಶ್ ಕುಮಾರ್ ಮಾತನಾಡಿ ಪಂಚಾ ಯಿತಿಗೆ ಹೆಚ್ಚಿನ ವರಮಾನ ಇರುವದು ವಾಹನ ಶುಲ್ಕದಿಂದಲೇ ಟೆಂಡರ್ ನಿಯಮಾನುಸಾರ ಮಾಡುವಾಗ ಮುಂಗಡ ಹಣ ಏಕೆ ಪಡೆದು ಕೊಂಡಿಲ್ಲ. ಅಲ್ಲದೆ ಟೆಂಡರು ದಾರನಿಗೆ ತಿಂಗಳ ಕಂತಿನಲ್ಲಿ ಪಾವತಿಸಲು ವಿನಾಯಿತಿ ನೀಡಿದ್ದು ಹೇಗೆ? ಟೆಂಡರ್‍ದಾರ ಹಣಕಟ್ಟದೇ ಇರುವದಕ್ಕೆ ಅವಧಿ ವಿಸ್ತರಣೆ ಏಕೆ ಕೊಟ್ಟಿದ್ದೀರಿ? ಇದರಿಂದ ಅನುಮಾನಕ್ಕೆ ಎಡೆಮಾಡಿದೆ. ಕೋರ್ಟ್ ಯಥಾಸ್ಥಿತಿ ಕಾಪಾಡಿ ಎಂದಾಗಲೂ ಗ್ರಾಮಪಂಚಾಯಿತಿ ಟೆಂಡರ್ ಮಾಡದೇ ವ್ಯಕ್ತಿಯೋರ್ವ ನನ್ನು ಗುರುತಿಸಿ ಅವರಿಗೆ ಏಕೆ ಅವಕಾಶ ನೀಡಿದ್ದೀರಿ? ಈ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ. ಸರ್ಕಾರ ಪ್ರತಿವರ್ಷ ಗ್ರಾಮಪಂಚಾಯಿತಿಗೆ ಅನುದಾನ ನೀಡಿದಲ್ಲಿ ವಾಹನ ಸುಂಕ ವಸೂಲಾತಿ ನಿಲ್ಲಿಸಬಹುದು. ಆದರ ವರಮಾನ ಇರುವದರಿಂದ ಯಾವದೇ ಕಾರಣಕ್ಕೆ ನಿಲ್ಲಿಸಬಾರದು. ಈಗ ನಡೆದಿರುವ ಲೋಪದ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಗ್ರಾಮಪಂಚಾಯಿತಿ ಮಾಜಿ ಸದಸ್ಯ ದಂಡಿನ ಜಯಂತ್ ಟೆಂಡರ್ ಮಾಡದೆ ಇನ್ನೊಬ್ಬರಿಗೆ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಹಿಂದೆ ಟೆಂಡರ್ ಪಡೆದವರು 7ಲಕ್ಷರೂ. ಬಾಕಿ ಉಳಿಸಿದ್ದು ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು. ದನಿಗೂಡಿಸಿದ ಕುದುಪಜೆ ಪ್ರಕಾಶ್ ಕೂಡಲೇ ಗ್ರಾಮಪಂಚಾಯಿತಿ ಹಣವನ್ನು ವಸೂಲು ಮಾಡಬೇಕು; ಇಲ್ಲದಿದ್ದರೆ ಗ್ರಾಮಪಂಚಾಯಿತಿ ಇದಕ್ಕೆ ಹೊಣೆಯಾಗಲಿದೆ ಎಂದರು. ಲೋಕೋಪಯೋಗಿ ಇಲಾಖೆಯಿಂದ ಭಾಗಮಂಡಲ - ತಲಕಾವೇರಿ ಕರಿಕೆ ಮಡಿಕೇರಿ ರಸ್ತೆಯ ಚರಂಡಿ ವ್ಯವಸ್ಥೆ ಸರಿಯಾಗಿ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದಾಗ ಇಲಾಖೆಯಿಂದ ಟೆಂಡರ್ ಆಗಿಲ್ಲ. ಹಣ ಬರುತ್ತಿಲ್ಲ ಎಂದರು. ನಿಮ್ಮ ಟೆಂಡರ್ ಮುಗಿದ ನಂತರ ಗ್ರಾಮಸಭೆಗೆ ಬನ್ನಿ. ಎಂದರು. ಕುದುಪಜೆ ಪ್ರಕಾಶ್, ಪಳಂಗಪ್ಪ, ವೆಂಕಟರಮಣ ಮಾತನಾಡಿ ಮಳೆಗಾಲಕ್ಕೆ ರಸ್ತೆಯ ಎರಡು ಬದಿ ಕಾಡುಕಡಿಯದೆ ವಾಹನ ಸಂಚಾರಕ್ಕೆ ಕಷ್ಟಕರವಾಗುತ್ತಿದೆ. ಮಳೆಗಾಲಕ್ಕೆ ಮೊದಲು ಅಧಿಕಾರಿಗಳು ಈ ಕೆಲಸ ನಿರ್ವಹಿಸಬೇಕು. ಭಾಗಮಂಡಲ ವ್ಯಾಪ್ತಿಗೆ ತಿಂಗಳಿಗೆ 3ಲೀ. ಸೀಮೆಎಣ್ಣೆ ಕೊಡಬೇಕು ಎಂದು ಒತ್ತಾಯಿಸಿದರು.
ತೋಟಗಾರಿಕಾ ಇಲಾಖೆ ಅಧಿಕಾರಿ ವಸಂತ್ ಭಾಗಮಂಡಲ ದಲ್ಲಿ ಶೇ. 45ರಷ್ಟು ಹಾನಿಯಾಗಿದೆ. ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು. ಕಾಳನ ರವಿ ಮಾತನಾಡಿ 45 ಅಲ್ಲ. ಶೇ. 80ರಷ್ಟು ನಷ್ಟವಾಗಿದೆ ಎಂದು ವರದಿ ಸಲ್ಲಿಸಬೇಕಾಗಿದೆ ಎಂದರು. ಪಂಚಾಯಿತಿರಾಜ್ ಎಂಜಿನಿಯರ್ ಕಳೆದ ಮೂರು ಗ್ರಾಮಸಭೆಗಳಿಗೆ ಸತತವಾಗಿ ಬಾರದೇ ಇರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಇಲಾಖೆ ಬಗ್ಗೆ ಗ್ರಾಮಸ್ಥರು ಮಾತನಾಡಿ ಗದ್ದೆಯಲ್ಲಿ ಬೆಳೆ ಮಾಡದೆ ಇರುವವರು ಪರಿಹಾರಕ್ಕೆ ಅರ್ಜಿ ಸಲ್ಲಿಸಿ ಪರಿಹಾರ ಪಡೆದುಕೊಳ್ಳುತ್ತಿದ್ದಾರೆ. ನೈಜ ಫಲಾನುಭವಿಗಳಿಗೆ ಪರಿಹಾರ ಸಿಗುತ್ತಿಲ್ಲ. ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ನೀಡುವ ಬಿತ್ತನೆ ಬೀಜಗಳು ಅದೇ ದರದಲ್ಲಿ ಅಂಗಡಿಗಳಲ್ಲಿ ದೊರೆಯುತ್ತಿವೆ ಎಂಬ ಆರೋಪಗಳು ಕೇಳಿಬಂದವು. ಭತ್ತ ಕೃಷಿ ಪರಿಹಾರಕ್ಕೆ ಎಕರೆಗೆ ರೂ. 5000 ನೀಡಬೇಕೆಂದು ಒತ್ತಾಯಿಸಿದರು. ಕಾಳನ ರವಿ ಮಾತನಾಡಿ ನಮ್ಮ ಗ್ರಾಮಕ್ಕೆ ಟ್ರಾನ್ಸ್‍ಫಾರ್ಮರ್ ಬೇಕು ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ಎಂದಾಗ ಕೆಇಬಿ ಎಂಜಿನಿಯರ್ ನಿಮ್ಮದೇ ಸರ್ಕಾರ ಇದೆ. ನೀವು ತರಿಸಿಕೊಳ್ಳಿ ಎಂದರು. ಈ ಸಂದರ್ಭ ಜಿಲ್ಲಾಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಎಂಜಿನಿಯರ್ ಅನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಸ್ವಂತ ಬಳಕೆಗೆ ಸೌದೆ ಕಡಿಯಲು ತಡೆಯೊಡ್ಡಬಾರದು ಎಂಬ ನಿರ್ಣಯ ಕೈಗೊಳ್ಳಲಾಯಿತು. ಬ್ರಹ್ಮಗಿರಿಯಲ್ಲಿ ಇಂಗುಗುಂಡಿಗಳ ನಿರ್ಮಾಣದಿಂದ ಸುತ್ತಮುತ್ತ ಭೂಕುಸಿತ ಉಂಟಾಗಿದೆ ಎಂದು ಸಾರ್ವಜನಿಕರು ಆರೋಪಿಸಿದರು.
ಕಳೆದ ವರ್ಷ ಗ್ರಾಮಸಭೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ಪರಿವೀಕ್ಷಕರನ್ನು ವರ್ಗಾವಣೆ ಮಾಡಬೇಕು ಎಂದು ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿತ್ತು. ಈ ಗ್ರಾಮಸಭೆ ಬಂದರೂ ವರ್ಗಾವಣೆ ಮಾಡದಿರುವದಕ್ಕೆ ವಸಂತ್ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಆಡಳಿತ ವ್ಯವಸ್ಥೆ ಇದ್ದರೆ ಗ್ರಾಮಸಭೆ ನಡೆಸಿ ಏನು ಪ್ರಯೋಜನ ಎಂದರು.ಕಾವೇರಿಯ ಉಪನದಿಗಳೂ ಸೇರಿದಂತೆ ಸಂಗಮದ ತಳಭಾಗ ಹೂಳೆತ್ತುವ ಕೆಲಸ ಆಗಬೇಕು.ಕಸ ವಿಲೇವಾರಿ ಘಟಕ ಸ್ಥಾಪನೆ ಆಗಿಲ್ಲ ಎಂಬ ಆರೋಪಗಳು ಕೇಳಿಬಂದವು. ನೋಡಲ್ ಅಧಿಕಾರಿ ಶಿವಪ್ರಕಾಶ್, ಗ್ರಾಮಸ್ಥರು, ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.
-ಸುನಿಲ್ ಕುಯ್ಯಮುಡಿ