ಚೆಟ್ಟಳ್ಳಿ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮುಕ್ತವಾಗಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಿಬೇಕು ಎಂದು ವಾಲ್ನೂರು-ತ್ಯಾಗತ್ತೂರು ಜಿಲ್ಲಾ ಪಂಚಾಯಿತಿ ಸದಸ್ಯೆ ಎಂ.ಬಿ ಸುನಿತಾ ಮಂಜುನಾಥ್ ಕರೆ ನೀಡಿದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಡಕರೆ ಆಶ್ರಯದಲ್ಲಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಚೆಟ್ಟಳ್ಳಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ತಮಗೆ ವಿದ್ಯೆ ನೀಡಿದ ಗುರುಗಳನ್ನು ಮರೆಯುತ್ತಿರುವದು ವಿಷಾದನೀಯ ಎಂದರು. ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿ ತಂದಿದೆ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಬಿ.ಆರ್.ಸಿ. ರಂಗನಾಥ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪೋಷಕರು, ಶಿಕ್ಷಕರು ಮಾಡಬೇಕಿದೆ ಎಂದರು.

ಚೆಟ್ಟಳ್ಳಿ ಕ್ಲಸ್ಟರ್‍ಗೆ ಒಳಪಡುವ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 100 ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಕಂಡಕರೆ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷೆ ಪ್ರೇಮಕುಮಾರಿ ವಹಿಸಿದ್ದರು.

ಚೆಟ್ಟಳ್ಳಿ ಕ್ಲಸ್ಟರ್ ಅಶೋಕ್ ಕಾರ್ಯಕ್ರಮ ನಿರೂಪಿಸಿದರು. ಕಂಡಕರೆ ಶಾಲಾ ಮುಖ್ಯ ಶಿಕ್ಷಕ ಧನು ಪ್ರಕಾಶ್ ಸ್ವಾಗತಿಸಿ, ಚೆಟ್ಟಳ್ಳಿ ಶಾಲಾ ಮುಖ್ಯ ಶಿಕ್ಷಕಿ ವಿಶಾಲಾಕ್ಷಿ ವಂದಿಸಿದರು.

ಸುಂಟಿಕೊಪ್ಪ: ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವ ಛಲವನ್ನು ಹೊಂದಿದರೆ ಜೀವನ ಸಾರ್ಥಕಗೊಳ್ಳಲು ಸಾಧ್ಯ ಎಂದು ಸುಂಟಿಕೊಪ್ಪ ನಾಡು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂತ ಅಂತೋಣಿ ಶಾಲೆಯ ಮುಖ್ಯ ಶಿಕ್ಷಕಿ ವೀರಾ ಹೇಳಿದರು.

ಸುಂಟಿಕೊಪ್ಪ ನಾಡು ಪ್ರೌಢಶಾಲಾ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನಕ್ಕೆ ಮಾತ್ರ ಸೀಮಿತವಾಗಿರದೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ವಹಿಸಿ ಭವ್ಯ ಭಾರತ ನಿರ್ಮಾಣಗೊಳಿಸಲು ವಿದ್ಯಾರ್ಥಿಗಳು ಕೈ ಜೋಡಿಸಬೇಕೆಂದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಕೆ. ಇಂದಿರಾ, ಆಡಳಿತ ಮಂಡಳಿ ಉಪಾಧ್ಯಕ್ಷೆ ಮೀನಾ ಸೋಮಯ್ಯ ಹಾಗೂ ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು. 2019-20ನೇ ಸಾಲಿಗೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಗೋಣಿಕೊಪ್ಪಲು: ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜು, ಗೋಣಿಕೊಪ್ಪಲುವಿನಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳ ಆಯ್ಕೆ ನಡೆಯಿತು. ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ದೃಷ್ಟಿಯಿಂದ ಸಂಘದ ಪದಾಧಿಕಾರಿಗಳನ್ನು ಚುನಾವಣಾ ಆಯ್ಕೆಯ ಮಾದರಿಯಂತೆ ಆಯ್ಕೆ ಮಾಡಲಾಯಿತು.

ಈ ಕಾರ್ಯಕ್ರಮವನ್ನು ವಿದ್ಯಾರ್ಥಿ ಕ್ಷೇಮಾಪಾಲನ ಸಂಘದ ಸಂಚಾಲಕಿ ಡಾ. ರೇಖಾ ಚಿಣ್ಣಪ್ಪ ಮತ್ತು ಸದಸ್ಯೆ ಕುಸುಮ್ ಸಂಘಟಿಸಿದ್ದರು. ಆಯ್ಕೆ ಪ್ರಕ್ರಿಯೆಯು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ನೇತೃತ್ವದಲ್ಲಿ ನಡೆಯಿತು. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವದು ಈ ಕಾರ್ಯಕ್ರಮದ ಉದ್ದೇಶ. ಉತ್ತಮ ನಾಯಕರಿಂದ ಸಮಾಜದ ನಿರ್ಮಾಣ ಸಾಧ್ಯ ಎಂದರು.

ವಿದ್ಯಾರ್ಥಿ ಕ್ಷೇಮಪಾಲನ ಸಂಘಕ್ಕೆ ಜಂಟಿ ಕಾರ್ಯದರ್ಶಿಗಳಾಗಿ ಅಲ್ ಅಮೀನ್ ಟಿ.ಎನ್. ಮತ್ತು ಸುಶ್ಮಿತ ಸಿ.ಎಸ್. ಆಯ್ಕೆಯಾದರು. ಸಾಂಸ್ಕøತಿಕ ಕಾರ್ಯದರ್ಶಿಯಾಗಿ ವಸುಂಧರ ಭಾರ್ಗವ್ ಐ. ಅವರನ್ನು ನೇಮಿಸಲಾಯಿತು. ಪ್ರಥಮ ಪಿಯುಸಿ ಕಲಾ ವಿಭಾಗಕ್ಕೆ ತರುಣ್ ಎಸ್. ಮತ್ತು ರಾಧಿಕಾ ಎಂ.ಆರ್. ಅವರುಗಳು ಆಯ್ಕೆಯಾದರೆ, ಲಿತಿನ್ ಬಿ.ಜಿ. ಮತ್ತು ಸೌಮ್ಯ ಪಿ.ಆರ್. ಅವರುಗಳು ದ್ವಿತೀಯ ಪಿಯುಸಿ ಕಲಾ ವಿಭಾಗಕ್ಕೆ ಚುನಾಯಿತರಾದರು. ಪ್ರಥಮ ಪಿಯುಸಿ ವಾಣಿಜ್ಯ (ಭೂಗೋಳಶಾಸ್ತ್ರ) ವಿಭಾಗದಲ್ಲಿ ಪ್ರಜ್ವಲ್ ಪೂವಣ್ಣ ಕೆ.ಎಸ್. ಮತ್ತು ವರ್ಷ ಹೆಚ್.ಎಂ. ಆಯ್ಕೆಯಾದರೆ, ದ್ವಿತೀಯ ಪಿಯುಸಿ ವಾಣಿಜ್ಯ (ಭೂಗೋಳಶಾಸ್ತ್ರ)ದಲ್ಲಿ ವಿಕ್ರಮ್ ಟಿ.ಎಸ್. ಮತ್ತು ಪವಿತ್ರ ಪಿ. ಅವರುಗಳು ಆಯ್ಕೆಗೊಂಡರು. ಪ್ರಥಮ ಪಿಯುಸಿ ವಾಣಿಜ್ಯ (ಗಣಕವಿಜ್ಞಾನ) ವಿಭಾಗಕ್ಕೆ ಶೋಯಬ್ ಟಿ. ಮತ್ತು ವಿಷ್ಣುಜ ಎಂ.ಎಸ್. ಅವರುಗಳು ಪ್ರತಿನಿಧಿಗಳಾದರೆ ದ್ವಿತೀಯ ಪಿಯುಸಿ (ಗಣಕ ವಿಜ್ಞಾನ) ವಿಭಾಗದಲ್ಲಿ ಕಾವೇರಪ್ಪ ಕೆ.ಎ. ಮತ್ತು ಸುಶ್ಮಿತ ಸಿ.ಎಸ್. ಅವರು ಆಯ್ಕೆಗೊಂಡರು. ಹಾಗೆಯೇ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಫಬಾಸ್ ಲಾಲ್ ಮತ್ತು ಅರ್ಥಿಕ ಬಿ.ಯು. ಆಯ್ಕೆಯಾದರೆ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಲ್ ಅಮೀನ್ ಮತ್ತು ಜಯಸೂರ್ಯ ಪ್ರತಿನಿಧಿಗಳಾಗಿ ಆಯ್ಕೆಗೊಂಡರು.

ಅಮ್ಮತ್ತಿ: ಚರಿತ್ರೆಯನ್ನು ಕಲಿಯುವದು ಮಾತ್ರವಲ್ಲ ಮತ್ತೊಬ್ಬರು ಕಲಿಯುವ ಚರಿತ್ರೆಯನ್ನು ಬರೆಯುವಂತವರಾಗಿ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಅಮ್ಮತ್ತಿ ಗುಡ್ ಶೆಫರ್ಡ್ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಅಮ್ಮತ್ತಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಮ್ಮತ್ತಿ ಗುಡ್ ಶೆಫರ್ಡ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಮರಿಯಾ ತೆರೆಸಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶೈಲಜ ಬೆಳಗಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವೀರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯೆ ಶೋಭ ಉದ್ಘಾಟಿಸಿದರು.

ವೀರಾಜಪೇಟೆ ಕ್ಲಸ್ಟರ್ ಸಮನ್ವಯ ವ್ಯಕ್ತಿ ಜೆ.ಸಿ. ಜೋಸೆಫ್ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಕಲಾಸಕ್ತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳು ನಡೆಯುತ್ತಿದ್ದು, ನಿಜಕ್ಕೂ ಶ್ಲಾಘನೀಯ ಎಂದರು.

ದೇಶಭಕ್ತಿಗೀತೆ, ರಂಗೋಲಿ ಬಿಡಿಸುವದು, ಧಾರ್ಮಿಕ ಪಠಣ, ಭಾವಗೀತೆ, ಚಿತ್ರ ರಚನೆ, ಕವಾಲಿ, ಭಾಷಣ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಅಮ್ಮತ್ತಿ ಒಂಟಿಯಂಗಡಿ ಕ್ಲಸ್ಟರ್ ಸಮನ್ವಯ ವ್ಯಕ್ತಿ ಸುಷ, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಸೋಮವಾರಪೇಟೆ: ಇಲ್ಲಿನ ಸಂತ ಜೋಸೆಫರ ಕಾಲೇಜಿನಲ್ಲಿ 2019-20ನೇ ಸಾಲಿನ ಪೋಷಕರ ಸಭೆ ನಡೆಯಿತು. ಸಭೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಯಿತು. 2018-19ನೇ ಸಾಲಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಹೊಂದಿದ ಕೆ.ಎಂ. ದರ್ಶನ್, ಆರ್. ತಶ್ವಿನಿ, ಕೆ.ಹೆಚ್. ಅಫ್ಸಾನ ಅವರುಗಳನ್ನು ಸನ್ಮಾನಿಸಲಾಯಿತು. ಇತರ 10 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಸಭೆಯಲ್ಲಿ ಪ್ರಾಂಶುಪಾಲ ಅಂತೋಣಿ ರಾಜ್ ಸೇರಿದಂತೆ ಉಪನ್ಯಾಸಕ ವರ್ಗದವರು, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.

ಗೋಣಿಕೊಪ್ಪ: ಕಾವೇರಿ ಪದವಿ ಕಾಲೇಜಿನ ಮತದಾರ ಸಾಕ್ಷರತಾ ಸಂಘವನ್ನು ಗೋಣಿಕೊಪ್ಪಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ವಿ. ಶ್ರೀನಿವಾಸ್ ಉದ್ಘಾಟಿಸಿ ಮಾತನಾಡಿ, 18 ವರ್ಷ ಪೂರೈಸಿದ ಪ್ರತಿಯೊಬ್ಬರೂ ತಪ್ಪದೇ ಮತದಾರರ ಚೀಟಿ ಮಾಡಿಸಿಕೊಂಡು, ಮತ ಚಲಾಯಿಸುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಕಟಿ ಬದ್ಧರಾಗಬೇಕು. ಹಣ ಹಾಗೂ ಇತರ ಆಮಿಷಗಳಿಗೆ ತಮ್ಮ ಮತವನ್ನು ಮಾರಿಕೊಳ್ಳಬಾರದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವೀರಾಜಪೇಟೆ ಕಾವೇರಿ ಕಾಲೇಜಿನ ಉಪನ್ಯಾಸಕಿ ವೀಣಾ ರವೀಂದ್ರ ಸಂವಿಧಾನದ 370ನೇ ವಿಧಿಯ ಬಗ್ಗೆ ಉಪನ್ಯಾಸ ನೀಡಿದರು. ನಮ್ಮ ಪ್ರಧಾನಿ ಕೈಗೊಂಡ ದಿಟ್ಟ ನಿರ್ಧಾರದಿಂದಾಗಿ ಇಂದು ಅಖಂಡ ಭಾರತ ಒಂದೇ ಕಾನೂನಿನ ಅಡಿಯಲ್ಲಿ ಬರುವಂತಾಗಿದೆ. ಇದು ಭಾರತೀಯರಾದ ನಮಗೆ ಸಂತಸದ ವಿಷಯವಾಗಿದೆ ಎಂದರು. ಈ ಸಂದರ್ಭ ಮತದಾರರ ಸಾಕ್ಷರತಾ ಸಂಘದ ವಿದ್ಯಾರ್ಥಿ ನಾಯಕ ಪಿ.ಎ. ಪ್ರತಾಪ್ ಮತ್ತು ಶ್ರೀರಕ್ಷರನ್ನು ಕ್ಯಾಂಪಸ್ ರಾಯಭಾರಿಗಳಾಗಿ, ವಿ.ಹೆಚ್. ಹರ್ಷವರ್ಧನ್ ಅಧ್ಯಕ್ಷ ಹಾಗೂ ಟಿ.ಕೆ. ಅನಿಲ್ ಉಪಾಧ್ಯಕ್ಷನಾಗಿ ಆಯ್ಕೆಯಾದರು.

ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಡಾ. ಎ.ಎಸ್. ಪೂವಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಕೆ.ಟಿ. ಸೀತಮ್ಮ, ಉಪನ್ಯಾಸಕರಾದ ವನಿತ್‍ಕುಮಾರ್, ಸಿ.ಟಿ. ಕಾವ್ಯ, ಪ್ರೊ. ಎಂಎಸ್. ಭಾರತಿ, ಡಾ. ಎಂ.ಪಿ. ರೇಖಾ ವಸಂತ್ ಇದ್ದರು. ಪೊನ್ನಣ್ಣ ಮತ್ತು ಸುಬ್ರಮಣಿ ನಿರೂಪಿಸಿದರು. ಜ್ಯೋತಿ ಪ್ರಾರ್ಥಿಸಿದರೆ, ಅರ್ಚನ ಸ್ವಾಗತಿಸಿ, ಶಿಲ್ಪ ವಂದಿಸಿದರು.

ಕುಶಾಲನಗರ: ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಕೂಡಿಗೆ ಕ್ರೀಡಾಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಅಂಥೋಣಿ ಡಿಸೋಜ ಮತ್ತು ವೆಂಕಟೇಶ್ ಹಾಕಿ ಕ್ರೀಡಾಪಟು ಧ್ಯಾನ್‍ಚಂದ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಪ್ರಾಸ್ತಾವಿಕ ನುಡಿಗಳಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಕುಮಾರ್, ಮುಖ್ಯ ಶಿಕ್ಷಕಿ ಬಿ.ಬಿ. ಸಾವಿತ್ರಿ, ಶಿಕ್ಷಕ ಮಹೇಂದ್ರ ಇದ್ದರು.

ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳು ಮತ್ತು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರೀಡಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟಗಳು ಜರುಗಿದವು. ಸಂಗೀತ ಕುರ್ಚಿ, ಒಂಟಿ ಕಾಲಿನ ಓಟ, ಬಕೆಟ್ ಇನ್ ದ ಬಾಲ್, ಕೆರೆ ದಡ, ವ್ಯಕ್ತಿಯನ್ನು ಹೊತ್ತು ಓಡುವದು, ಮೂರು ಕಾಲಿನ ಓಟ ಮತ್ತಿತರ ಆಟೋಟಗಳು ನಡೆದವು.

ಅತ್ತೂರು: ಕುಶಾಲನಗರ ಸಮೀಪದ ಜ್ಞಾನಗಂಗಾ ವಸತಿ ಶಾಲೆ ಅತ್ತೂರುವಿನಲ್ಲಿ ಹಾಕಿಪಟು ಮೇಜರ್ ಧ್ಯಾನ್‍ಚಂದ್ ಹುಟ್ಟುಹಬ್ಬದ ನೆನಪಿಗಾಗಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಯಿತು.

ಪ್ರಾಂಶುಪಾಲೆ ಜೀಜಿ ಜೋಸ್ ದಿನದ ಮಹತ್ವ ಕುರಿತು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಆಟೋಟಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ತಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿ ಸಿ.ಎನ್. ತರುಣ್ ನಿರೂಪಿಸಿದನು. ದಿನದ ಮಹತ್ವದ ಕುರಿತು ವಿದ್ಯಾರ್ಥಿನಿ ರವೀನಾ ಧರ್ಮಪ್ಪ ಮತ್ತು ಸಾಗರಿ ಅರವಿಂದ್ ಮಾತಾನಾಡಿದರು.

ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಬಾಸ್ಕೆಟ್ ಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು. ನಾಲ್ಕು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಏಕಲವ್ಯ ತಂಡವು ಪ್ರಥಮ ಸ್ಥಾನವನ್ನು ಮತ್ತು ದ್ರೋಣಾಚಾರ್ಯ ತಂಡವು ದ್ವಿತೀಯ ಸ್ಥಾನವನ್ನು ಗಳಿಸಿತು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರು ವಿಶೇಷ ಪಾತ್ರವನ್ನು ವಹಿಸಿದ್ದು, ಪ್ರಾಂಶುಪಾಲರು, ಉಪಪ್ರಾಂಶುಪಾಲರು ಹಾಗೂ ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮಡಿಕೇರಿ: ಕಾವೇರಿ ಕಾಲೇಜು ಗೋಣಿಕೊಪ್ಪ ರಾಷ್ಟ್ರೀಯ ಸೇವಾ ಘಟಕದ ವತಿಯಿಂದ ಧ್ಯಾನ್‍ಚಂದ್ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕುಸುಮಾಧರ್ ಮಾತನಾಡಿ, ಯುವಜನರು ಆರೋಗ್ಯದ ಬಗ್ಗೆ ಗಮನ ಹರಿಸಿ ಸದೃಢ ಭಾರತ ನಿರ್ಮಾಣ ಮಾಡಬೇಕು. ಯೋಗ-ಧ್ಯಾನ ಮಾಡಬೇಕು ಎಂದರು.

ದೈಹಿಕ ಶಿಕ್ಷಕ ಸಂತೋಷ್ ಮಾತನಾಡಿದರು. ಧ್ಯಾನ್‍ಚಂದ್ ಅವರ ಜೀವನದ ಮಹತ್ವದ ಬಗ್ಗೆ ಎನ್.ಎಸ್.ಎಸ್. ಯೋಜನಾಧಿಕಾರಿ ವನಿತ್ ಕುಮಾರ್ ತಿಳಸಿದರು. ಕಾರ್ಯಕ್ರಮದಲ್ಲಿ ದೈಹಿಕ ನಿರ್ದೇಶಕ ಗುರು ಪ್ರಸಾದ್, ಎನ್.ಎಸ್.ಎಸ್. ಯೋಜನಾಧಿಕಾರಿ ಎನ್.ಪಿ. ರೀತಾ ಉಪಸ್ಥಿತರಿದ್ದರು.

ಸೋಮವಾರಪೇಟೆ: ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ರಾಷ್ಠ್ರೀಯ ಕ್ರೀಡಾದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಂ. ಚಂದ್ರಶೇಖರ್ ಪಾಲ್ಗೊಂಡಿದ್ದರು. ಹಾಕಿ ಸೇರಿದಂತೆ ಇನ್ನಿತರ ಕ್ರೀಡೆಗಳನ್ನು ಆಯೋಜಿಸಿ, ಕ್ರೀಡಾ ಪಟುಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬರುತ್ತಿರುವ ಸೋಮವಾರಪೇಟೆ ಡಾಲ್ಫೀನ್ಸ್ ಸ್ಫೋಟ್ರ್ಸ್ ಕ್ಲಬ್‍ಗೆ ಗೌರವಾರ್ಥವಾಗಿ, ಕ್ಲಬ್‍ನ ಅಧ್ಯಕ್ಷ ಹೆಚ್.ಎನ್. ಅಶೋಕ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಾಲಾ ಪ್ರಾಂಶುಪಾಲ ಬಸವನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕುಶಾಲನಗರ: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕ, ಅರಣ್ಯ ಇಲಾಖೆ ಮತ್ತು ಕುಶಾಲನಗರ ಕಾವೇರಿ ಪರಿಸರ ಜಾಗೃತಿ ಸಮಿತಿ, ಕರ್ನಾಟಕ ಜಾನಪದ ಪರಿಷತ್ ಘಟಕ ಸಂಯುಕ್ತ ಆಶ್ರಯದಲ್ಲಿ ಆನೆಕಾಡು ಮೀಸಲು ಅರಣ್ಯದಲ್ಲಿ ಬೀಜದುಂಡೆಗಳ ಬಿತ್ತನೆ ಕಾರ್ಯಕ್ರಮ ನಡೆಯಿತು.

ನಿರ್ಗಮಿತ ವಲಯ ಅರಣ್ಯಾಧಿಕಾರಿ ಸಿ.ಆರ್. ಅರುಣ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಅರಣ್ಯ ಸಂಪತ್ತು ರಕ್ಷಿಸಿ ವೃದ್ಧಿಸುವ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು ಎಂದರು.

ಮೂರ್ನಾಡು ವಿದ್ಯಾಸಂಸ್ಥೆ ಎನ್ನೆಸ್ಸೆಸ್ ಘಟಕದ ಅಧಿಕಾರಿ ಕಿಗ್ಗಾಲು ಹರೀಶ್ ಮಾತನಾಡಿ, ಹಲಸು, ಮಾವು, ಬಿದಿರಕ್ಕಿ, ಮತ್ತಿ, ಹತ್ತಿ ಸೇರಿದಂತೆ ಒಟ್ಟು 8 ರೀತಿಯ ಬೀಜಗಳನ್ನು ಉಂಡೆ ಮಾಡಿ ಅರಣ್ಯದಲ್ಲಿ ಬಿತ್ತನೆ ಮಾಡಲಾಗುತ್ತಿದೆ. 40ಕ್ಕೂ ಅಧಿಕ ವಿದ್ಯಾರ್ಥಿಗಳು ಅರಣ್ಯದಲ್ಲಿ ಬೀಜದುಂಡೆಗಳ ಬಿತ್ತನೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.

ಜನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ನಿವೃತ್ತ ಅರಣ್ಯ ನೌಕರರ ಸಂಘದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ, ಪರಿಸರ ಜಾಗೃತಿ ಸಮಿತಿ ಸಂಚಾಲಕ ಡಿ.ಆರ್. ಸೋಮಶೇಖರ್, ಡಿಆರ್‍ಎಫ್‍ಒ ಅನಿಲ್ ಡಿಸೋಜ, ಮೂರ್ನಾಡು ವಿದ್ಯಾ ಸಂಸ್ಥೆ ಎನ್ನೆಸ್ಸೆಸ್ ಘಟಕದ ಅಧಿಕಾರಿ ಮಾಲತಿ, ದೈಹಿಕ ಶಿಕ್ಷಣ ಶಿಕ್ಷಕ ಬೋಪಣ್ಣ, ಜನಪದ ಪರಿಷತ್ ಕಾರ್ಯದರ್ಶಿ ವಿನೋದ್, ಅರಣ್ಯ ಇಲಾಖೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

ಸೋಮವಾರಪೇಟೆ: ಶಿಕ್ಷಣದೊಂದಿಗೆ ಕಾನೂನನ್ನು ಅರಿಯುವದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯ. ದೇಶದಲ್ಲಿ ಸಾಕಷ್ಟು ಕಾನೂನುಗಳಿದ್ದು, ಅವುಗಳಲ್ಲಿ ನಮ್ಮ ದೈನಂದಿನ ಬದುಕಿಗೆ ಬೇಕಾದ ಕೆಲವನ್ನಾದರೂ ಅರಿತುಕೊಳ್ಳಬೇಕು ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ ಕರೆ ನೀಡಿದರು.

ಸಮೀಪದ ಯಡೂರು ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ, ಜಿಲ್ಲಾ ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಕಾಲೇಜಿನ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಮಾತನಾಡಿ, ಸಂವಿಧಾನ ಜನರಿಗೆ ನೀಡಿರುವ ಹಕ್ಕುಗಳನ್ನು ತಿಳಿದು, ಅವುಗಳನ್ನು ಪಾಲಿಸುವದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಧರ್ ಮಾತನಾಡಿ, ನಮ್ಮ ಸ್ವಾತಂತ್ರ್ಯ ಮತ್ತೊಬ್ಬರ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ವಹಿಸಿದ್ದರು. ವಕೀಲರಾದ ಹೆಚ್.ಎಸ್. ಚಂದ್ರಶೇಖರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು.ಮಡಿಕೇರಿ: ಮೂರ್ನಾಡು ಪದವಿ ಕಾಲೇಜಿನ ಆವರಣದಲ್ಲಿ ಹಾಕಿ ಮಾಂತ್ರಿಕ ಮೇಜರ್ ದ್ಯಾನ್‍ಚಂದ್ ಅವರ 114ನೇ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನದ ಆಚರಣೆಯನ್ನು ಆಚರಿಸಲಾಯಿತು.

ಕ್ರೀಡಾ ದಿನದ ಮಹತ್ವವನ್ನು ಕಾಲೇಜಿನ ದೈಹಿಕ ಶಿಕ್ಷಕ ಬೋಪಣ್ಣ ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು. ಗ್ರಾಮೀಣ ಕ್ರೀಡಾಕೂಟದ ಕೆಸರುಗದ್ದೆ ಓಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಗೋಣಿಕೊಪ್ಪಲು: ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಉಪನ್ಯಾಸ ಏರ್ಪಡಿಸಲಾಗಿತ್ತು.

ವೀರಾಜಪೇಟೆ ಉಪವಿಭಾಗದ ಡಿವೈಎಸ್‍ಪಿ ಜಯಕುಮಾರ್ ಮಾತನಾಡಿ, ಮಾದಕ ದ್ರವ್ಯ ವ್ಯಸನ ಸಮಾಜಕ್ಕೆ ಮಾರಕ. ಯುವಜನ ದೇಶದ ಅಮೂಲ್ಯ ಸಂಪತ್ತು. ಇತ್ತೀಚೆಗೆ ಯುವಕರು ಕುತೂಹಲಕ್ಕಾಗಿ ಇಂತಹ ದುಶ್ಚಟಗಳಿಗೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಯುವಜನತೆಯ ನಾಶದಿಂದ ದೇಶದ ಅಭಿವೃದ್ಧಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದರು.

ಮಾದಕ ಸೇವನೆಯ ಪದಾರ್ಥಗಳ ಮಾರಾಟದ ಬಗ್ಗೆ ಮಾಹಿತಿ ನೀಡುವಂತೆ ಕರೆ ನೀಡಿದರು. ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಡಾ. ರೇಖಾ ಚಿಣ್ಣಪ್ಪ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಎಂ.ಕೆ. ಪದ್ಮ ವಂದಿಸಿದರು.

ಸುಂಟಿಕೊಪ್ಪ: ಪರಿಸರ ಸ್ನೇಹಿ ಗಣೇಶೋತ್ಸವ ಕುರಿತು 7ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆಯ ಪಾವನಿ ಇಕೋ ಕ್ಲಬ್ ವತಿಯಿಂದ ಜಾಗೃತಿ ಜಾಥಾ ನಡೆಸಲಾಯಿತು.

ಗೌರಿ ಗಣೇಶೋತ್ಸವ ಆಚರಣೆಯ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತಿರುವ ಗ್ರಾಮದ ಜನತೆಯು ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಮಕ್ಕಳೇ ತಯಾರಿಸಿ ಜಾಗೃತಿ ಮೂಡಿಸಿದರು.

ಜಾಥಾದಲ್ಲಿ ಪರಿಸರ ಸ್ನೇಹಿ ಘೋಷಣೆಗಳೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ರಂಗಮಂದಿರದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆ ನಡೆಯಿತು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷ�??