ಮಡಿಕೇರಿ, ಸೆ. 1: ಗೌರಿ - ಗಣೇಶ ಉತ್ಸವ ಅಂಗವಾಗಿ ಇಂದು ನಾಡಿನೆಲ್ಲೆಡೆ ಮಂಗಳಗೌರಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇವಾಲಯ, ಸಂಘ - ಸಂಸ್ಥೆಗಳು, ಕೆಲವರು ಮನೆಗಳಲ್ಲಿ ಗೌರಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಶ್ರದ್ಧಾ - ಭಕ್ತಿಯಿಂದ ಪೂಜಿಸಲಾಯಿತು.

ವೀರಾಜಪೇಟೆ: ವೀರಾಜಪೇಟೆಯಲ್ಲಿ ಇತಿಹಾಸ ಪ್ರಸಿದ್ಧ ಗೌರಿ ಗಣೇಶೋತ್ಸವದ ಅಂಗವಾಗಿ ಇಲ್ಲಿನ ಜೈನರಬೀದಿಯಲ್ಲಿರುವ ಬಸವೇಶ್ವರ ದೇವಸ್ಥಾನದ ಗೌರಿ ಗಣೇಶ ಉತ್ಸವ ಸಮಿತಿಯಿಂದ ಇಂದು ಬೆಳಿಗ್ಗೆ 9ಗಂಟೆಗೆ ಗೌರಿ ಪಲ್ಲಕ್ಕಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಇಲ್ಲಿನ ಸಿದ್ದಾಪುರ ರಸ್ತೆಯ ಮೋಹನ್ ಅವರ ಕೆರೆಯಲ್ಲಿ ಶಾಸ್ತ್ರೊಕ್ತವಾಗಿ ಗೌರಮ್ಮನನ್ನು ಪೂಜಿಸಿ ಸಾಂಪ್ರದಾಯಿಕ ಪದ್ಧತಿಯಂತೆ ಪಲ್ಲಕ್ಕಿಯಲ್ಲಿ ಕೂರಿಸಿ ವಾದ್ಯಗೋಷ್ಠಿಯೊಂದಿಗೆ ತೆಲುಗರಬೀದಿ, ಮೊಗರಗಲ್ಲಿಯವರೆÀಗೆ ತಲಪಿ ಹಿಂತಿರುಗಿ ಜೈನರಬೀದಿ ಮುಖ್ಯ ಬೀದಿಗಳ ಮೂಲಕ ವಾಪಸಾಗಿ ಮೂರ್ನಾಡು ರಸ್ತೆ, ದೇವರಕಾಡು ರಸ್ತೆ. ಅಪ್ಪಯ್ಯ ಸ್ವಾಮಿ ರಸ್ತೆ ಮಾರ್ಗವಾಗಿ ಬಸವೇಶ್ವರ ದೇವಾಲಯಕ್ಕೆ ಹಿಂತಿರುಗಿತು.

ಗೌರಿ ಪಲ್ಲಕ್ಕಿಯ ಮೆರವಣಿಗೆಯುದ್ದಕ್ಕೂ ಪಲ್ಲಕ್ಕಿಯ ಗೌರಮ್ಮನಿಗೆ ಮುತ್ತೈದೆಯರು ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು. ಇಂದು ಬೆಳಗಿನಿಂದಲೇ ಮಳೆ ಸುರಿಯುತ್ತಿದ್ದರೂ ಗೌರಿ ಪಲ್ಲಕ್ಕಿ ಮೆರವಣಿಗೆ ಅಡೆತಡೆ ಇಲ್ಲದೆ ಮುಂದುವರೆದಿದ್ದು ವಿಶೇಷವಾಗಿತ್ತು. ರಾತ್ರಿ 9ಗಂಟೆಗೆ ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಗೌರಮ್ಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಸುಂಟಿಕೊಪ್ಪದಲ್ಲಿ ಪ್ರತಿಷ್ಠಾಪನೆ

ಸುಂಟಿಕೊಪ್ಪ: ವಿಶ್ವ ಹಿಂದೂ ಪರಿಷದ್ ಹಾಗೂ ಶ್ರೀಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಶ್ರೀಗೌರಿ ಗಣೇಶೋತ್ಸವವದ ಅಂಗವಾಗಿ ಗೌರಮ್ಮನನ್ನು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು.

ಶ್ರೀಗೌರಿ ಗಣೇಶೋತ್ಸವ ಆಚರಣಾ ಸಮಿತಿಯ ಪದಾಧಿಕಾರಿಗಳು ಕೇಸರಿ ತಳಿರುತೋರಣ ಧ್ವಜಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನವ ವಧುವಿನಂತೆ ಶೃಂಗಾರಗೊಳಿಸಿದ್ದು ಇಡೀ ಪಟ್ಟಣವೇ ಕೇಸರಿಮಯವಾಗಿದೆ.

ವಿಶ್ವ ಹಿಂದೂ ಪರಿಷದ್ ಹಾಗೂ ಶ್ರೀಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಆಚರಿಸಲಾಗುವ ಗೌರಿ ಉತ್ಸವದ ಉತ್ಸವಮೂರ್ತಿಯನ್ನು ಮೆರವಣಿಗೆ ಶ್ರೀ ರಾಮ ಮಂದಿರದಿಂದ ಹೊರಟು ಪಟ್ಟೆಮನೆ ಮಾದಯ್ಯ ಅವರ ಬಾವಿಯಿಂದ ಗಂಗಾಜಲದೊಂದಿಗೆ ವಿವಿಧ ಪೂಜಾ ಕೈಂಕರ್ಯ ನೇರವೇರಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಭವ್ಯ ಮಂಟಪದಲ್ಲಿ ಗೌರಿ ಮೂರ್ತಿಯನ್ನು ನಾದಸ್ವರ ಹಾಗೂ ಭಜನೆಗಳೊಂದಿಗೆ ನೂರಾರು ಮಹಿಳೆಯರು, ಪುರುಷರು, ಮಕ್ಕಳು ಶ್ರದ್ಧಾಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡು ಶ್ರೀ ರಾಮ ಮಂದಿರದಲ್ಲಿ ಉತ್ಸವ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭ ವಿಶ್ವ ಹಿಂದೂ ಪರಿಷದ್ ಹಾಗೂ ಶ್ರೀಗೌರಿ ಗಣೇಶೋತ್ಸವ ಆಚರಣಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಭಕ್ತಾಧಿಗಳು ಪಾಲ್ಗೊಂಡಿದ್ದರು. ಭಕ್ತಾದಿಗಳಿಗೆ ಮಹಾಮಂಗಳಾರತಿ ಪ್ರಸಾದವನ್ನು ವಿತರಿಸಲಾಯಿತು. ಪೂಜಾ ವಿಧಿವಿಧಾನಗಳನ್ನು ಅರ್ಚಕರಾದ ಗಣೇಶ ಶರ್ಮ ಮತ್ತು ಮಂಜುನಾಥ ಭಟ್ ನೆÀರವೇರಿಸಿದರು

ತಾ. 2 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮತ್ತು ಭಜನೆ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಶ್ರೀಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಂ.ಸುರೇಶ್ ತಿಳಿಸಿದ್ದಾರೆ.

ಇಂದು ಆಚರಣೆ

ಶನಿವಾರಸಂತೆ : ಪಟ್ಟಣದ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಾಲಯದಲ್ಲಿ ತಾ. 2 ರಂದು ಗೌರಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ನಡೆಯಲಿದೆ. ಬೆಳಿಗ್ಗೆ 6.30 ರಿಂದ ಗಂಗೆ ಪೂಜೆ, 9 ರಿಂದ ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಹೊಳೆಯಿಂದ ಪೂಜಿಸಿ, ಮೆರವಣಿಗೆಯಲ್ಲಿ ತಂದು ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗುವದು. ಪೂಜಾ ಕೈಂಕರ್ಯಗಳನ್ನು ಅರ್ಚಕ ಮಾಲತೇಶ್ ಭಟ್ ನೆರವೇರಿಸುತ್ತಾರೆ ಎಂದು ಗಣಪತಿ ಸೇವಾ ಸಮಿತಿ ತಿಳಿಸಿದೆ.

ಗಣೇಶ ಹಬ್ಬದ ಸಿದ್ಧತೆ ಸಂಭ್ರಮ

* ಪಟ್ಟಣದಲ್ಲಿ ಆಗಾಗ್ಗೆ ಸುರಿಯುತ್ತಿರುವ ಮಳೆ ನಡುವೆಯೂ ಜನತೆ ಗೌರಿ - ಗಣೇಶ ಹಬ್ಬದ ಸಿದ್ಧತೆಯ ಸಂಭ್ರಮದಲ್ಲಿದ್ದಾರೆ. ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಹಬ್ಬದ ಪ್ರಯುಕ್ತ ವಿವಿಧ ರೀತಿಯ ಹೂವುಗಳ ಹಾಗೂ ಗೌರಿ - ಗಣೇಶ ಮೂರ್ತಿಗಳ ವ್ಯಾಪಾರ ಭರದಿಂದ ಸಾಗಿತ್ತು. ಸೇವಂತಿಗೆ ರೂ. 50, ಮಲ್ಲಿಗೆ ಮತ್ತು ಕನಕಾಂಬರ ರೂ.80ಕ್ಕೆ ಮಾರಾಟವಾಗುತ್ತಿತ್ತು. ದರದ ಬಿಸಿ ತಟ್ಟಿದರೂ ಹಬ್ಬದ ಕಾರಣದಿಂದ ಜನತೆ ಹೂವನ್ನು ಗೊಣಗಿಕೊಂಡೇ ಖರೀದಿಸುತ್ತಿದ್ದರು. ದೇವರ ಮೂರ್ತಿಗಳ ದರವೂ ಏರಿದ್ದು, 1 ಅಡಿಯ ಗಣೇಶ ಮೂರ್ತಿಗೆ ರೂ. 1 ಸಾವಿರವಾದರೇ, 4 ಅಡಿ ಗಣಪನಿಗೆ ರೂ. 4 ಸಾವಿರ ವ್ಯಾಪಾರಿಗಳು ಹೇಳಿದ ದರ ತೆತ್ತು ಮೂರ್ತಿಗಳ ಪ್ರತಿಷ್ಠಾಪಿಸುವ ಸಂಪ್ರದಾಯಸ್ಥರು ವಿಧಿಯಿಲ್ಲದೇ ಖರೀದಿಸುತ್ತಿದ್ದರು.

ಪೊನ್ನಂಪೇಟೆ : ಪೊನ್ನಂಪೇಟೆಯ ವಿವಿಧೆಡೆಗಳಲ್ಲಿ ಗೌರಿ ಪ್ರತಿಷ್ಠಾಪನೆ ಕಾರ್ಯವನ್ನು ನೆರವೇರಿಸಲಾಯಿತು.ಬೆಳಿಗ್ಗೆ ಗೌರಿ ಕೆರೆಯಿಂದ ಗೌರಿ ಮೂರ್ತಿಯನ್ನು ತಂದು ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಬಸವೇಶ್ವರ ದೇವಸ್ಥಾನ, ಕೃಷ್ಣನಗರ ಕೃಷ್ಣ ಯುವಕರ ಸಂಘ, ಶಿವ ಕಾಲೋನಿಯ ಶಿವ ಯುವಕರ ಸಂಘ, ಕಾಟ್ರಕೊಲ್ಲಿಯ ಗಜಮುಖ ಗೆಳೆಯರ ಬಳಗ, ಮಹಾತ್ಮಾಗಾಂಧಿನಗರದ ಯುವಶಕ್ತಿ ಯುವಕ ಸಂಘ, ಮುಖ್ಯರಸ್ತೆಯ ವಿಘ್ನೇಶ್ವರ ವಾಹನ ಚಾಲಕರ ಮಾಲೀಕರ ಸಂಘ ಹಾಗೂ ಜೋಡುಬೀಟಿ ನೆಹರುನಗರ ವಿನಾಯಕ ಸಂಘಗಳಲ್ಲಿ ಗೌರಮ್ಮ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.