ಮಡಿಕೇರಿ, ಸೆ. 1: ಸಾಮಾನ್ಯವಾಗಿ ಆಗಸ್ಟ್ ಕಳೆದು ಸೆಪ್ಟೆಂಬರ್ ಆರಂಭವಾಗುತ್ತಿದ್ದಂತೆ ಮಳೆಯ ಪ್ರಮಾಣ ಕಡಿಮೆಯಾಗಿರುತ್ತದೆ. ಗೌರಿ ಗಣೇಶ ಉತ್ಸವ ಸಂದರ್ಭ ‘ಗೌರಿ ಮಳೆ’ ನೆಪದಲ್ಲಿ ತುಂತುರು ಮಳೆಯಾಗುತ್ತದೆ. ಆದರೆ ಈ ಬಾರಿ ಇದೀಗ ಹುಬ್ಬ ಮಳೆ ಆರ್ಭಟಿಸುತ್ತಿದೆ. ಕಳೆದೆರಡು ದಿನದಿಂದ ಮಡಿಕೇರಿ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿದೆ.

ಆಗಸ್ಟ್ ತಿಂಗಳ ಆರಂಭದಲ್ಲಿ ದಕ್ಷಿಣ ಕೊಡಗಿನಾದ್ಯಂತ ಹಾಗೂ ಭಾಗಮಂಡಲ, ಸಿದ್ದಾಪುರ ವ್ಯಾಪ್ತಿಯಲ್ಲಿ ತೀವ್ರ ಮಳೆಯಾಗಿ ಅತಿವೃಷ್ಟಿಯಿಂದ ಪ್ರವಾಹ, ಭೂಕುಸಿತಗಳು ಸಂಭವಿಸಿ ಸಾಕಷ್ಟು ಕಷ್ಟ - ನಷ್ಟ, ಸಾವು -ನೋವುಗಳು ಸಂಭವಿಸಿವೆ. ಕಳೆದ ವರ್ಷ ಉತ್ತರ ಕೊಡಗಿನ ಕೆಲವೆಡೆ, ಮಡಿಕೇರಿ ಸುತ್ತಮುತ್ತ ಭೂಕುಸಿತ ಸಂಭವಿಸಿತ್ತು. ಇದೀಗ ಮತ್ತೆ ಉತ್ತರ ಕೊಡಗಿನಲ್ಲಿ ಮಳೆಯ ತೀವ್ರತೆಯೊಂದಿಗೆ ಅತೀವ ಚಳಿಯ ವಾತಾವರಣ ಸೃಷ್ಟಿಯಾಗಿದ್ದು, ಜನತೆಯನ್ನು ಮತ್ತೆ ಆತಂಕಕ್ಕೀಡು ಮಾಡಿದೆ.

ವೀರಾಜಪೇಟೆ ವಿಭಾಗದಲ್ಲಿ ಚುರುಕು

ವೀರಾಜಪೇಟೆ: ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ಸಂಜೆಯಿಂದ ಮಳೆ ಚುರುಕುಗೊಂಡಿದ್ದು ಮೋಡ ಕವಿದ ವಾತಾವರಣ ಮುಂದುವರೆದಿದೆ. ಇಂದು ಬೆಳಗ್ಗಿನಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ. ನಿನ್ನೆ ಬೆಳಗ್ಗಿನಿಂದ ಇಂದು ಬೆಳಗಿನ ತನಕ ( 1.3 ಇಂಚುಗಳಷ್ಟು) ಮಳೆ ಸುರಿದಿದೆ.

ವೀರಾಜಪೇಟೆ ಸುತ್ತಮುತ್ತಲ ಪ್ರದೇಶವಾದ ಆರ್ಜಿ ಬೇಟೋಳಿ, ಪೆರುಂಬಾಡಿ, ಹೆಗ್ಗಳ, ಕೆದಮುಳ್ಳೂರು ತೋರ ಗ್ರಾಮಗಳಲ್ಲು ಮಳೆ ಚುರುಕು ಗೊಂಡಿರುವದಾಗಿ ಇಲ್ಲಿನ ತಾಲೂಕು ಕಚೇರಿಯ ರೆವಿನ್ಯೂ ಸಿಬ್ಬಂದಿಗಳು ತಿಳಿಸಿದ್ದಾರೆ.

ಸಾಧಾರಣ ಮಳೆ

ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ಭಾನುವಾರ ಮಧ್ಯಾಹ್ನದ ನಂತರ ಆಗಾಗ್ಗೆ ಬಿಡುವು ನೀಡುತ್ತಾ ಆರಂಭವಾದ ಸಾಧಾರಣ ಮಳೆ ಸಂಜೆಯವರೆಗೆ ಸುರಿಯಿತು. ಅರ್ಧ ಇಂಚು ಮಳೆಯಾಗಿದೆ.

ಈ ವಿಭಾಗದಲ್ಲಿ ನಾಲ್ಕೈದು ದಿನಗಳಿಂದ ಮಧ್ಯಾಹ್ನದ ನಂತರ ಮಳೆಯಾಗುತ್ತಿದೆ. ರಾತ್ರಿಯೂ ಜಿಟಿಜಿಟಿ ಮಳೆ ಸುರಿಯುತ್ತಿರುತ್ತದೆ. ಶನಿವಾರ ಸಂಜೆ ಇದ್ದಕ್ಕಿದಂತೆ ಧಾರಾಕಾರವಾಗಿ ಸುರಿದ ಮಳೆಗೆ ಸಂತೆ ಮಾರುಕಟ್ಟೆ ಅಸ್ತವ್ಯಸ್ತಗೊಂಡಿತ್ತು. ಹಬ್ಬದ ಸಂತೆಯಂದು ತರಕಾರಿ, ಸಾಮಾನು ಖರೀದಿಸಲು ಬಂದಿದ್ದ ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ನಿತ್ಯ ಸುರಿಯುತ್ತಿರುವ ಹುಬ್ಬ ಮಳೆಯಿಂದ ಭತ್ತದ ಪೈರಿಗೆ ಯಾವ ಹಾನಿಯೂ ಇಲ್ಲ. ಆದರೆ, ಕಾಫಿ ತೋಟಗಳಲ್ಲಿ ಶೀತ ಅಧಿಕವಾಗಿ ರೋಬಸ್ಟ ಮತ್ತು ಅರೆಬಿಕಾ ಕಾಫಿ ಕಾಯಿ ಉದುರುತ್ತಿದೆ. ಈ ಸಮಯದಲ್ಲಿ ಬಿಸಿಲಿನ ಪ್ರಮಾಣವೂ ಹೆಚ್ಚಾದರೆ ತೋಟಕ್ಕೆ ಒಳ್ಳೆಯದಾಗುತ್ತಿತ್ತು ಎಂದು ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ಮೋಹನ್‍ಕುಮಾರ್ ಅಭಿಪ್ರಾಯಪಟ್ಟರು.